ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಬಿಎಲ್‌ಡಿಇ ಸಂಸ್ಥೆಯ ಬಿ.ಎಂ.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರದಲ್ಲಿ ಇದೇ ಮೊದಲ ಬಾರಿಗೆ ಶ್ರವಣದೋಷಯುಕ್ತ ಮಕ್ಕಳಿಗಾಗಿ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಸೌಲಭ್ಯ ಪ್ರಾರಂಭಿಸಲಾಗಿದೆ ಎಂದು ಉಪಕುಲಪತಿ ಡಾ.ಆರ್.ಎಸ್.ಮುಧೋಳ ಹೇಳಿದರು.ನಗರದ ಆಸ್ಪತ್ರೆಯ ಟ್ರಾಮಾ ಸೆಂಟರ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇತ್ತೀಚೆಗೆ ಜನಿಸುತ್ತಿರುವ ಪ್ರತಿ ಒಂದು ಸಾವಿರ ಮಕ್ಕಳಲ್ಲಿ ಕನಿಷ್ಠ ಎರಡು ಮಕ್ಕಳಿಗೆ ಹುಟ್ಟಿನಿಂದಲೇ ಶ್ರವಣದೋಷ ಉಂಟಾಗುತ್ತಿದೆ. ಅನುವಂಶೀಯವಾಗಿ, ಸಂಬಂಧಿಕರಲ್ಲಿ ವಿವಾಹ, ಹುಟ್ಟುವಾಗ ಇನ್ಫೆಕ್ಷನ್ ಸೇರಿದಂತೆ ನಾನಾ ಕಾರಣಗಳಿಗಾಗಿ ಮಕ್ಕಳಲ್ಲಿ ಶ್ರವಣದೋಷ ಕಂಡುಬರುತ್ತದೆ. ಅಂತಹ ಮಕ್ಕಳಿಗೆ ಮಾತು ಬರುವುದಿಲ್ಲ, ಕಿವಿ ಕೇಳಿಸುವುದಿಲ್ಲ. ಇದನ್ನು ಮಗು ಹುಟ್ಟಿದ ಆರು ತಿಂಗಳ ಒಳಗೆ ಕಂಡುಹಿಡಿದು ಅಂತಹ ಮಕ್ಕಳಿಗೆ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಮಾಡಿದರೆ ಶೇ.90ರಷ್ಟು ಗುಣವಾಗುವ ಸಾಧ್ಯತೆ ಇದೆ ಎಂದರು.
ಇದೀಗ ಬಿಎಲ್‌ಡಿಇ ಆಸ್ಪತ್ರೆಯಲ್ಲಿ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಮಾಡಲು ರಾಜ್ಯ ಸರ್ಕಾರದಿಂದ ಅನುಮತಿ ದೊರೆತಿದೆ. ಸಮಾಜದಲ್ಲಿನ ಬಡಜನತೆ ತಮ್ಮ ಮಕ್ಕಳಿಗೆ ಸಮಸ್ಯೆಗಳು ಬಂದಾಗ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಎಂಬ ಸರ್ಕಾರಿ ಯೋಜನೆ ಮೂಲಕ ಉಚಿತವಾಗಿ ಈ ಚಿಕಿತ್ಸೆ ಕೊಡಿಸಬಹುದು ಎಂದು ತಿಳಿಸಿದರು.ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಮಾಡುವ ಬಿಎಲ್‌ಡಿಇ ಆಸ್ಪತ್ರೆ ಉತ್ತರ ಕರ್ನಾಟಕದಲ್ಲಿ 2ನೇ ಸೆಂಟರ್ ಆಗಿದೆ. ಹುಟ್ಟಿನಿಂದ ಕಿವಿ ಕೇಳದ ಮಕ್ಕಳಿಗೆ ಮೊದಲನೇ 6 ರಿಂದ 9 ತಿಂಗಳವರೆಗೆ ಕಂಡುಹಿಡಿದು ಅವರಿಗೆ ಈ ಚಿಕಿತ್ಸೆಯನ್ನು ನೀಡಿದಲ್ಲಿ ಯಶಸ್ವಿಯಾಗಲಿದೆ. ಕೇವಲ 45 ನಿಮಿಷದಲ್ಲಿ ಈ ಶಸ್ತ್ರಚಿಕಿತ್ಸೆ ಮಾಡಲಾಗುವುದು. ಆ ಬಳಿಕ 6 ರಿಂದ 8 ತಿಂಗಳವರೆಗೆ ಆ ಮಕ್ಕಳಿಗೆ ಮಾರ್ಗದರ್ಶನ ಕೊಡುವ ಮೂಲಕ ಸಮಸ್ಯೆ ಸರಿಪಡಿಸಬಹುದು ಎಂದು ತಿಳಿಸಿದರು.ಡಾ.ಎಚ್.ಟಿ.ಲತಾದೇವಿ ಮಾತನಾಡಿ, ಹುಟ್ಟಿದ 8 ತಿಂಗಳ ಮಗುವಿನಿಂದ 80 ವರ್ಷದವರೆಗಿನ ಎಲ್ಲರಿಗೂ ಈ ಚಿಕಿತ್ಸೆ ಲಭ್ಯವಿರುತ್ತದೆ. ಆದರೆ, 6 ವರ್ಷದೊಳಗಿನ ಮಕ್ಕಳಿಗೆ ಸರ್ಕಾರದಿಂದ ಆರ್ಥಿಕ ಸಹಾಯ ಸಿಗುವುದರಿಂದ ಉಚಿತವಾಗಿ ಮಕ್ಕಳನ್ನು ಗುಣಪಡಿಸಬಹುದಾಗಿದೆ. ಮಕ್ಕಳಿಗೆ ಕಾಕ್ಲಿಯರ್ ಇಂಪ್ಲಾಂಟ್ ನನಡೆಸಿದ ಬಳಿಕ ವಾಕ್ ಮತ್ತು ಶ್ರವಣ ತಜ್ಞರಿಂದ ಒಂದೊಂದು ವರ್ಷ ಕೊಡುವ ಆಡಿಟರಿ ವರ್ಬಲ್ ಥೆರೆಫಿ ತರಬೇತಿಯೂ ಮಕ್ಕಳಿಗೆ ಅಗತ್ಯವಿದೆ. ಶ್ರವಣ ಸಮಸ್ಯೆ ಇರುವ ಮಕ್ಕಳಿಗಾಗಿ ಬಿಎಲ್‌ಡಿಇ ಆಸ್ಪತ್ರೆಯಲ್ಲಿ ಎಲ್ಲ ಸೌಲಭ್ಯಗಳು ಇದ್ದು, ಈ ಭಾಗದ ಜನರು ಸದುಪಯೋಗ ಪಡೆಸಿಕೊಳ್ಳಬೇಕು ಎಂದು ಹೇಳಿದರು.
ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಹೇಗೆ ಮಾಡಲಾಗುತ್ತದೆ, ಮಕ್ಕಳ ಕಿವಿಯ ಹಿಂಭಾಗದಲ್ಲಿ ಹೇಗೆ ಈ ಮಶೀನ್ ಅಳವಡಿಸಲಾಗುತ್ತದೆ. ಚಿಕ್ಕ ಮಕ್ಕಳಿರುವಾಗಲೇ ಆಳವಾಗಿ ಕಿವಿ ಕೇಳದ ಮಕ್ಕಳನ್ನು ಹೇಗೆ ಎಲ್ಲರಂತೆ ಮಾಡಲು ಸಹಾಯವಾಗುತ್ತದೆ ಎಂಬುದನ್ನು ಪರದೆಯ ಮೇಲೆ ವಿವರವಾಗಿ ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಪ್ರಾಚಾರ್ಯ ಡಾ.ಅರವಿಂದ ಪಾಟೀಲ, ಪ್ರಧಾನ ವೈದ್ಯಕೀಯ ಅಧೀಕ್ಷಕ ಡಾ.ರಾಜೇಶ ಹೊನ್ನುಟಗಿ, ಡಾ.ರವಿಂದ್ರ ಕರಡಿ ಉಪಸ್ಥಿತರಿದ್ದರು.
ಚಿತ್ರ: 20BIJ06ಬರಹ: ಕಿವಿ ಕೇಳದ ಮಕ್ಕಳಿಗೆ ಬಿಎಲ್‌ಡಿಇ ನಲ್ಲಿ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಸೌಲಭ್ಯ
ಕೋಟ್ಅನುವಂಶೀಯವಾಗಿ, ಸಂಬಂಧಿಕರಲ್ಲಿ ವಿವಾಹ, ಹುಟ್ಟುವಾಗ ಇನ್ಫೆಕ್ಷನ್ ಸೇರಿದಂತೆ ವಿವಿಧ ಕಾರಣಗಳಿಂದ ಮಕ್ಕಳಲ್ಲಿ ಶ್ರವಣದೋಷ ಕಂಡುಬರುತ್ತದೆ. ಆ ಮಕ್ಕಳಿಗೆ ಮಾತು ಬರುವುದಿಲ್ಲ, ಕಿವಿ ಕೇಳಿಸುವುದಿಲ್ಲ. ಮಗು ಹುಟ್ಟಿದ ಆರು ತಿಂಗಳ ಒಳಗೆ ಕಂಡುಹಿಡಿದು ಅಂತಹ ಮಕ್ಕಳಿಗೆ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಮಾಡಿದರೆ ಶೇ.90ರಷ್ಟು ಗುಣವಾಗುವ ಸಾಧ್ಯತೆ ಇದೆ.
ಡಾ.ಆರ್.ಎಸ್.ಮುಧೋಳ, ಉಪಕುಲಪತಿ