ಬೆರಳೆಣಿಕೆಯ ವ್ಯಾಪಾರಿಗಳು, ಕನಿಷ್ಠ ಗ್ರಾಹಕರು: ಸೊರಗಿದ ನೆಕ್ಕಿಲಾಡಿ ಸಂತೆ!

KannadaprabhaNewsNetwork |  
Published : Jun 07, 2025, 04:15 AM IST
ಗುರುವಾರದ ಸಂತೆಯು ವ್ಯಾಪಾರಿಗಳಿಲ್ಲದೆ , ಗ್ರಾಹಕರಿಲ್ಲದೆ ಸೊರಗುತ್ತಲೇ ಸಾಗಿದೆ | Kannada Prabha

ಸಾರಾಂಶ

ಬೆರಳೆಣಿಕೆಯ ವ್ಯಾಪಾರಿಗಳು, ಕನಿಷ್ಠ ಗ್ರಾಹಕರು: ಸೊರಗಿದ ನೆಕ್ಕಿಲಾಡಿ ಸಂತೆ!

34ನೇ ನೆಕ್ಕಿಲಾಡಿಯ ಪ್ರಸಿದ್ಧ ಸಂತೆ ಮಾರುಕಟ್ಟೆ ವಹಿವಾಟು ಕುಸಿತ

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ಬದಲಾದ ಕಾಲಘಟ್ಟದಲ್ಲಿ ಕೃಷಿ ಬೆಳೆಗಳಿಗೆ ಮುಕ್ತ ಮಾರುಕಟ್ಟೆ ಒದಗಿಸುವ ವಾರದ ಸಂತೆ ಉಪ್ಪಿನಂಗಡಿಯ ಪಾಲಿಗೆ ಬರಡಾಗುತ್ತಿದ್ದು, ೩೪ನೇ ನೆಕ್ಕಿಲಾಡಿ ಗ್ರಾಮದಲ್ಲಿ ಕಾರ್ಯಾಚರಿಸುತ್ತಿದ್ದ ಗುರುವಾರದ ಸಂತೆ ವ್ಯಾಪಾರಿಗಳಿಲ್ಲದೆ, ಗ್ರಾಹಕರಿಲ್ಲದೆ ಸೊರಗುತ್ತಲೇ ಸಾಗಿದೆ. ಕೆಲ ವರ್ಷಗಳ ಹಿಂದೆ ತನಕ ವಾರದ ಸಂತೆಯಾಗಿ ಗುರುವಾರ ಭರ್ಜರಿ ವ್ಯಾಪಾರ ವಹಿವಾಟುಗಳನ್ನು ಹೊಂದಿದ್ದ ಇಲ್ಲಿನ ಸಂತೆ ಕೃಷಿಕರಿಗೆ ತಮ್ಮ ಕೃಷಿ ಉತ್ಪನ್ನಗಳನ್ನು ತಂದು ಸ್ಪರ್ಧಾತ್ಮಕ ಬೆಲೆಗಳಿಗೆ ಮಾರಾಟ ಮಾಡಲು ಅವಕಾಶವಿರುತ್ತಿತ್ತು. ಬಯಲು ಸೀಮೆಯಿಂದಲೂ ಕೃಷಿಕರು , ವ್ಯಾಪಾರಿಗಳು ಬರುತ್ತಿದ್ದರಿಂದ ಎಲ್ಲರ ಚಿತ್ತ ಗುರುವಾರದ ಸಂತೆಯತ್ತ ಕೇಂದ್ರೀಕೃತವಾಗಿರುತ್ತಿತ್ತು. ಸಾಮಾನ್ಯವಾಗಿ ಪೇಟೆಯಲ್ಲಿ ದೊರೆಯುತ್ತಿದ್ದ ಬೆಲೆಗಿಂತ ಕಡಿಮೆ ಬೆಲೆಗೆ ಸಂತೆಯಲ್ಲಿ ವಸ್ತುಗಳು ಮಾರಾಟವಾಗುತ್ತಿದ್ದ ಕಾರಣಕ್ಕೆ ಎಲ್ಲರೂ ಸಂತೆಯ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಿದ್ದರು. ಆದರೆ ಬಯಲು ಸೀಮೆಯ ವ್ಯಾಪಾರಿಗಳ ಆಗಮನ ಕಡಿಮೆಯಾಗಿ ಊರಿನ ವ್ಯಾಪಾರಿಗಳೇ ಸಂತೆಯಲ್ಲಿ ಕಾಣಿಸಿಕೊಂಡು ವಸ್ತುವಿನ ದರದಲ್ಲಿಯೂ ಯಾವುದೇ ವ್ಯತ್ಯಾಸ ಕಂಡು ಬಾರದೇ ಇದ್ದಾಗ ಸಂತೆಯತ್ತ ಜನ ವಿಮುಖರಾಗತೊಡಗಿದರು. ಬಯಲು ಸೀಮೆಯಿಂದ ವ್ಯಾಪಾರಿಗಳು ಬರುತ್ತಾದರೂ ಹಿಂದಿನ ದಿನವೇ ಅವರಿಂದ ಸ್ಥಳೀಯ ವರ್ತಕರು ಸಗಾಟಾಗಿ ಎಲ್ಲವನ್ನೂ ಖರೀದಿಸಿ ಮರುದಿನದ ಸಂತೆಯಲ್ಲಿ ಎಲ್ಲಾ ವಸ್ತುಗಳ ಬೆಲೆ ನಿಗದಿಪಡಿಸುವಲ್ಲಿ ಪಾರಮ್ಯ ಮೆರೆಯತೊಡಗಿದಾಗ ಸಂತೆಯಲ್ಲಿ ವಸ್ತುಗಳನ್ನು ಖರೀದಿಸುವುದು ಲಾಭದಾಯಕವಲ್ಲ ಎಂಬ ಭಾವನೆ ಮೂಡಿ ಜನರ ಮನದಲ್ಲಿ ಸಂತೆ ನಿಧಾನವಾಗಿ ದೂರವಾಗತೊಡಗಿತ್ತು. ಇದರ ಫಲವಾಗಿ ಏಳೆಂಟು ಅಂತರದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಸಂತೆಯಲ್ಲಿ ಇದೀಗ ಬೆರಳೆಣಿಕೆಯ ವ್ಯಾಪಾರಿಗಳು ಮತ್ತು ಕನಿಷ್ಠ ಸಂಖ್ಯೆಯ ಗ್ರಾಹಕರು ಕಾಣಿಸತೊಡಗಿದ್ದಾರೆ. ಈ ಹಿಂದೆಲ್ಲಾ ವಾರ್ಷಿಕ ಒಂದುವರೆ ಲಕ್ಷ ಏಲಂ ಬಿಡ್ ಮೊತ್ತವನ್ನು ಸ್ಥಳೀಯ ನೆಕ್ಕಿಲಾಡಿ ಗ್ರಾಮ ಪಂಚಾಯಿತಿಗೆ ಪಾವತಿಸಿ ಸಂತೆ ಶುಲ್ಕ ಸಂಗ್ರಹಿಸಲು ಮುಂದಾಗುತ್ತಿದ್ದ ಜನರು ಇದೀಗ ಸಂತೆ ಮಾರುಕಟ್ಟೆ ಸೊರಗತೊಡಗಿದಾಗ ಏಲಂ ಪ್ರಕ್ರಿಯೆಯಲ್ಲಿ ಭಾಗವಹಿಸಲು ಯಾರೂ ಮುಂದಾಗದೇ ಇರುವ ಸ್ಥಿತಿಗೆ ತಲುಪಿದೆ. ಏಳೆಂಟು ಬಾರಿ ಏಲಂ ಪ್ರಕಟಣೆ ಕೊಟ್ಟರೂ ಯಾರೊಬ್ಬರೂ ಶುಲ್ಕ ಸಂಗ್ರಹಿಸಲು ಮುಂದಾಗದ ಕಾರಣ ಇದೀಗ ಪಂಚಾಯತ್ ಸಿಬ್ಬಂದಿಯೇ ಪ್ರತಿ ಸಂತೆಗೆ ಭೆಟಿ ನೀಡಿ ಬಂದಂತಹ ವ್ಯಾಪಾರಿಗಳಿಂದ ಶುಲ್ಕ ಸಂಗ್ರಹಿಸತೊಡಗಿದ್ದಾರೆ. .....................ಹಿಂದೆ ಕೃಷಿಕರು ತಮ್ಮ ತಮ್ಮ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಸಂತೆಯನ್ನು ಅವಲಂಬಿಸುತ್ತಿದ್ದರು. ಇದೀಗ ಕಾಲ ಬದಲಾಗಿದೆ. ವ್ಯಾಪಾರಿಗಳೇ ಕೃಷಿಕರ ಮನೆಗೆ ಭೇಟಿ ನೀಡಿ ಅವರ ಮನೆಯಂಗಳದಿಂದಲೇ ಉತ್ಪನ್ನಗಳನ್ನು ಖರೀದಿಸುತ್ತಿದ್ದಾರೆ. ಮಾತ್ರವಲ್ಲದೆ ಡೋರ್ ಡೆಲಿವರಿ ವ್ಯವಸ್ಥೆಯಲ್ಲಿ ಗ್ರಾಹಕರ ಮನೆ ಬಾಗಿಲಿಗೆ ವಸ್ತುಗಳ ಸರಬರಾಜಾಗುತ್ತಿದೆ. ಸಂತೆಯಿಂದ ಪಂಚಾಯತ್ ಆಡಳಿತಕ್ಕೆ ಬರುತ್ತಿದ್ದ ಆದಾಯವೂ ಗಣನೀಯ ಕುಸಿತವಾಗಿದೆ.

-ಪ್ರಶಾಂತ್ ಶಿವಾಜಿನಗರ, ನೆಕ್ಕಿಲಾಡಿ ಗ್ರಾ.ಪಂ. ನಿಕಟಪೂರ್ವಾಧ್ಯಕ್ಷ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯಕ್ತಿಯ ಅಕ್ರಮ ಬಂಧನದಲ್ಲಿಟ್ಟಿದ್ದಕ್ಕೆ ಸರ್ಕಾರಕ್ಕೆ ದಂಡ!
ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ