ಶಿರಸಿ: ಮಹಿಳೆಯರು ಅಲಂಕಾರಿಕ ಗಿಡಗಳನ್ನು ತಮ್ಮ ಮನೆಯ ಅಂಗಳ, ತೋಟ ಅಥವಾ ಮಹಡಿಯ ಮೇಲೆ ಬೆಳೆಸಿ ಆರ್ಥಿಕ ಸ್ವಾವಲಂಬಿಯಾಗಲು ಸಾಧ್ಯ ಎಂದು ಬೆಂಗಳೂರಿನ ಸುಮಾ ನಾಗರಾಜ ಹಾಸ್ಯಗಾರ ಹೇಳಿದರು.
ನಗರದ ಎಪಿಎಂಸಿ ಆವರಣದಲ್ಲಿರುವ ನೂತನ ಟಿಆರ್‌ಸಿ ಭವನದಲ್ಲಿ ಡೇರೆ ಮೇಳ ಮತ್ತು ಮಾರಾಟ ಉದ್ಘಾಟಿಸಿ ಅವರು ಮಾತನಾಡಿದರು. ಹೂವಿನ ಮಹತ್ವ ತಿಳಿಸಿ, ಮನೆಯಿಂದಲೇ ಮಹಿಳೆ ಹೇಗೆ ಆರ್ಥಿಕ ಸ್ವಾವಲಂಬಿ ಆಗಬೇಕು ಎಂದು ತಿಳಿಸುವ ಈ ಮೇಳ ಆಯೋಜಿಸುವರು ಶ್ಲಾಘನೀಯ ಎಂದರು.ಈ ಮೇಳದಿಂದ ಮಹಿಳೆಯರು ಪ್ರೇರಣೆಗೊಂಡು, ಅವರು ಅಲಂಕಾರಿಕ ಸಸ್ಯ ಬೆಳೆಯಲು ಪ್ರೋತ್ಸಾಹ ನೀಡುವ ಸಂಘಟಕರ ಕಾರ್ಯ ಸಾಮಾನ್ಯವಾದುದಲ್ಲ. ಸಂಘಟಕರಾದ ವೇದಾ ಹೆಗಡೆ ನೀರ್ನಳ್ಳಿ ಮತ್ತು ಅಂಜನಾ ಭಟ್ ಅವರ ನೇತೃತ್ವದಲ್ಲಿ ನಿರಂತರವಾಗಿ ೧೪ ವರ್ಷಗಳಿಂದ ಡೇರೆ ಮೇಳ ಆಯೋಜಿಸುವ ಮೂಲಕ ಮಹಿಳೆಯರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಸಂಘಟನೆ ಅತ್ಯಂತ ಗಟ್ಟಿಯಾಗಿ ಬೆಳೆದಿದೆ. ವಿವಿಧ ಬಗೆಯ ಹೂವಿನ ಸಸಿಗಳನ್ನು ಮಾರಾಟ ಮಾಡುವ ಮೂಲಕ ಮಹಿಳೆಯರು ಆರ್ಥಿಕ ಸದೃಢರಾಗುತ್ತಿರುವುದು ಗಮನಾರ್ಹ ಸಂಗತಿ ಎಂದು ಹೇಳಿದರು.
ಜಿ.ಆರ್. ಹೆಗಡೆ ಬೆಳ್ಳೆಕೇರೆ ಮಾತನಾಡಿ, ದೇವರ ಪೂಜೆಗೆ ಮಾತ್ರ ಹೂವು ಬಳಸಲಾಗುತ್ತಿತ್ತು. ಈಗ ಅಲಂಕಾರಿಕ ಹೂವಿಗೆ ಬೇಡಿಕೆ ಹೆಚ್ಚಿದೆ. ಅಲಂಕಾರಿಕ ಗಿಡಗಳನ್ನು ಬೆಳೆಸುವವರಿಗೆ ಮುಂದಿನ ದಿನದಲ್ಲಿ ಟಿಆರ್‌ಸಿಯಿಂದ ಕಡಿಮೆ ದರದಲ್ಲಿ ಪ್ಲಾಸ್ಟಿಕ್ ಕವರ್‌ಗಳನ್ನು ಪೂರೈಸಲಾಗುವುದು ಎಂದು ಹೇಳಿದರು.ಟಿಆರ್‌ಸಿ ಅಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಮತ್ತು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಗಣೇಶ ಹೆಗಡೆ ಅವರು, ಅಲಂಕಾರಿಕ ಗಿಡ ಬೆಳೆಸುವವರು ತೋಟಗಾರಿಕೆ ಇಲಾಖೆಯ ಸೌಲಭ್ಯ ಪಡೆಯಬಹುದು ಎಂದರು.
ದುಶ್ಯಂತರಾಜ್, ಶೈಲಜಾ ಗೋರ್ನಮನೆ, ಶ್ರೀಧರ ರಾಮಕೃಷ್ಣ ಹೆಗಡೆ ಕಡವೆ ಇದ್ದರು. ವೇದಾ ಹೆಗಡೆ ನೀರ್ನಳ್ಳಿ ಸ್ವಾಗತಿಸಿದರು. ಅಂಜನಾ ಭಟ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಶಿರಸಿಯ ಟಿಆರ್‌ಸಿ ಹಾಗೂ ತೋಟಗಾರ್ಸ್ ಗ್ರೀನ್ ಗ್ರೂಪ್ ಫಾರ್ಮರ್ಸ್ ಫ್ರೊಡ್ಯೂಸರ್ ಕಂಪನಿ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ ಹಾಗೂ ಆತ್ಮ ಸಮಿತಿ ಹಾಗೂ ಡೇರೆ ಮೇಳ ಸಂಘಟಕರ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.