ಉಳ್ಳಾಲ : ಹಲವು ವರ್ಷಗಳ ಹೋರಾಟ ಹಾಗೂ ಬೇಡಿಕೆಯ ಬಳಿಕ ತುಳು ಭಾಷೆಗೆ ಕರ್ನಾಟಕದ ಎರಡನೇ ಹೆಚ್ಚುವರಿ ಆಡಳಿತ ಭಾಷೆಯ ಸ್ಥಾನಮಾನ ದೊರೆತಿರುವುದು ಸಂತಸದ ಸಂಗತಿಯಾಗಿದೆ. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಜನತೆಯ ಬಹುದಿನಗಳ ಬೇಡಿಕೆಗೆ ಸರ್ಕಾರ ಸ್ಪಂದಿಸಿದೆ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್ ಹೇಳಿದ್ದಾರೆ.
ಕಾಂಗ್ರೆಸ್ ವಕ್ತಾರ ದಿನೇಶ್ ಕುಂಪಲ ಮಾತನಾಡಿ, ತುಳು ಭಾಷೆಗೆ ಎರಡನೇ ಹೆಚ್ಚುವರಿ ಆಡಳಿತ ಭಾಷೆಯ ಸ್ಥಾನಮಾನ ದೊರೆತಿರುವುದು ತುಳುನಾಡಿನ ಜನರ ಬಹುದಿನಗಳ ನಿರೀಕ್ಷೆಗೆ ದೊರೆತ ಪ್ರತಿಫಲವಾಗಿದೆ ಎಂದರು.ಸಮೀಕ್ಷೆಗಳ ಪ್ರಕಾರ 70 ಲಕ್ಷಕ್ಕೂ ಅಧಿಕ ಮಂದಿ ತುಳು ಮಾತನಾಡುತ್ತಾರೆ. ತುಳು ಭಾಷೆಗೆ ಆಡಳಿತ ಭಾಷೆಯ ಸ್ಥಾನಮಾನ ದೊರೆಯಬೇಕು ಎಂಬುದು ಹಲವು ವರ್ಷಗಳ ಬೇಡಿಕೆಯಾಗಿತ್ತು. ತುಳು ಸಾಹಿತ್ಯ ಅಕಾಡೆಮಿ, ವಿವಿಧ ತುಳು ಸಂಘಟನೆಗಳು, ಸಾಹಿತಿಗಳು ಹಾಗೂ ತುಳುವರು ಒಗ್ಗಟ್ಟಾಗಿ ನಡೆಸಿದ ಪ್ರಯತ್ನದ ಫಲವಾಗಿ ಈ ಮಾನ್ಯತೆ ದೊರೆತಿದೆ ಎಂದು ಹೇಳಿದರು.
ಉಳ್ಳಾಲ ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಮಿತಾ ಆಶ್ವಿನ್, ಕಾಂಗ್ರೆಸ್ ಮುಖಂಡರಾದ ಸಜೀದ್ ಹಾಗೂ ರಿಚರ್ಡ್ ಧರ್ಮನಗರ ಇದ್ದರು.