ಉಡುಪಿ : ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ವತಿಯಿಂದ ಇಲ್ಲಿನ ಉಚ್ಚಿಲದಲ್ಲಿ ನಿರ್ಮಿಸಲಾಗಿರುವ ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಭವ್ಯ ಕಂಚಿನ ಪುತ್ಥಳಿ ಅನಾವರಣ ಮತ್ತು ನೂತನ ವಿದ್ಯಾರ್ಥಿ ನಿಲಯದ ಉದ್ಘಾಟನೆ ಹಾಗೂ ಗುರಿಕಾರರಿಗೆ ಗೌರವಧನ ವಿತರಣೆ ಸಮಾರಂಭ 25ರಂದು ನಡೆಯಲಿದೆ.
ಗುರಿಕಾರರಿಗೆ ಗೌರವಧನವನ್ನು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್ ಹಸ್ತಾಂತರಿಸಲಿದ್ದಾರೆ.ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಡಾ. ಜಿ. ಶಂಕರ್ ಅಧ್ಯಕ್ಷತೆ ವಹಿಸಲಿದ್ದು, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ, ಯಶಪಾಲ್ ಎ. ಸುವರ್ಣ, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ಹಾಗೂ ವಿನಯ ಕುಮಾರ್ ಸೊರಕೆ ಮತ್ತಿತರ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಉದ್ಯಮಿ ಆನಂದ್ ಸಿ. ಕುಂದರ್, ಮೊಗವೀರ ಮಹಾಜನ ಸಂಘದ ಮುಂಬೈ ಸಮಿತಿಯ ಗೌರವಾಧ್ಯಕ್ಷ ವೇದಪ್ರಕಾಶ್ ಶ್ರೀಯಾನ್, ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬೈ ಅಧ್ಯಕ್ಷ ಗಣೇಶ್ ಕಾಂಚನ್ ಹಾಗೂ ಮೊಗವೀರ ಮಹಾಜನ ಸೇವಾ ಸಂಘ ಮುಂಬೈ ಅಧ್ಯಕ್ಷ ಸಂತೋಷ್ ಪುತ್ರನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.