ಕಂಪ್ಲಿಯಲ್ಲಿ ಉಚಿತ ಹೃದ್ರೋಗ, ಮಂಡಿಚಿಪ್ಪು ತಪಾಸಣಾ ಶಿಬಿರ
ಕನ್ನಡಪ್ರಭ ವಾರ್ತೆ ಕಂಪ್ಲಿಪಟ್ಟಣದ ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ಆರೋಗ್ಯ ಇಲಾಖೆ, ಅಕ್ಕಮಹಾದೇವಿ ಮಹಿಳಾ ಮಂಡಳಿ ಮತ್ತು ಸಂಜೀವಿನಿ ಇನ್‌ಸ್ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸೈನ್ಸ್ ಸಹಯೋಗದಲ್ಲಿ ಉಚಿತ ಹೃದ್ರೋಗ, ಮಂಡಿಚಿಪ್ಪು ಬದಲಾವಣೆ ತಪಾಸಣಾ ಶಿಬಿರ ಮಂಗಳವಾರ ಜರುಗಿತು.
ಶಿಬಿರಕ್ಕೆ ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್ ಚಾಲನೆ ನೀಡಿ ಮಾತನಾಡಿ, ಆಧುನಿಕ ಜೀವನಶೈಲಿಯಲ್ಲಿನ ಬದಲಾವಣೆ ಉಲ್ಲೇಖಿಸಿ, ಇಂದಿನ ಪೀಳಿಗೆಯವರು ರಾಸಾಯನಿಕ ಮಿಶ್ರಿತ ಆಹಾರ, ಫಾಸ್ಟ್ ಫುಡ್ ಹಾಗೂ ಜಂಕ್ ಫುಡ್ ಸೇವನೆಯಲ್ಲಿ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಇದು ಹೃದ್ರೋಗ, ರಕ್ತದ ಒತ್ತಡ, ಮಧುಮೇಹ, ಜೀರ್ಣಕ್ರಿಯೆಯ ತೊಂದರೆ, ಮೂಳೆ–ಸಂಧಿ ಸಂಬಂಧಿ ಕಾಯಿಲೆಗಳಿಗೆ ಪ್ರಮುಖ ಕಾರಣವಾಗಿದೆ. ಆದ್ದರಿಂದ ಆರೋಗ್ಯಕರ ಜೀವನಶೈಲಿ, ಸಮತೋಲನದ ಆಹಾರ ಮತ್ತು ವ್ಯಾಯಾಮ ಅಳವಡಿಸಿಕೊಂಡರೆ ಅನೇಕ ರೋಗಗಳಿಂದ ದೂರವಿರಬಹುದು ಎಂದು ಸಲಹೆ ನೀಡಿದರು.ಶಿಬಿರದಲ್ಲಿ 375ಕ್ಕೂ ಹೆಚ್ಚು ಜನರು ಹೃದ್ರೋಗ ಮತ್ತು ಮಂಡಿಚಿಪ್ಪು ತಪಾಸಣೆ ಮಾಡಿಸಿಕೊಂಡರು. ಹೃದಯ ಸಂಬಂಧಿತ ಸಮಸ್ಯೆ, ರಕ್ತದೊತ್ತಡ, ಶ್ವಾಸಕೋಶ ತೊಂದರೆ ಹಾಗೂ ಮೊಣಕಾಲು–ಮೂಳೆ ನೋವುಗಳಿಂದ ಬಳಲುತ್ತಿದ್ದವರಿಗೆ ಉಚಿತ ತಪಾಸಣೆ ಜೊತೆಗೆ ಮುಂದಿನ ಚಿಕಿತ್ಸೆಯ ಮಾರ್ಗದರ್ಶನ ನೀಡಲಾಯಿತು. ಕೆಲವರನ್ನು ಹೆಚ್ಚಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆಗಾಗಿ ಮುಂದಿನ ಹಂತಕ್ಕೆ ಕಳುಹಿಸಲಾಯಿತು.
ಅಕ್ಕಮಹಾದೇವಿ ಮಹಿಳಾ ಮಂಡಳಿ ಅಧ್ಯಕ್ಷೆ ಡಾ. ಶಾರದಾ ಜೆ. ಹಿರೇಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಜೆ. ಚಂದ್ರಶೇಖರ್ ವಿಶೇಷ ಆತಿಥ್ಯ ವಹಿಸಿದರು. ಕೀಲುಮೂಳೆ ತಜ್ಞರಾದ ಡಾ. ಪಿ.ಸಿ. ಜಗದೀಶ್, ಡಾ. ನಾಹೀನ್ ಹಾಗೂ ಆರೋಗ್ಯ ತಜ್ಞರು ಶಿಬಿರದಲ್ಲಿ ಸೇವೆ ಸಲ್ಲಿಸಿದರು.
ಈ ಸಂದರ್ಭ ಪ್ರಮುಖರಾದ ಪಿ. ಮೂಕಯ್ಯಸ್ವಾಮಿ, ಕೆ.ಎಂ. ಹೇಮಯ್ಯಸ್ವಾಮಿ, ಡಾ. ವೆಂಕಟೇಶ್ ಸಿ. ಭರಮಕ್ಕನವರ್, ಇಟಗಿ ಬಸವರಾಜಗೌಡ, ಎನ್. ರಾಮಾಂಜನೇಯಲು, ಎಂ.ಎಸ್. ಶಶಿಧರ ಶಾಸ್ತ್ರಿ, ಡಿ.ಆರ್. ಮಂಜುನಾಥ, ಎಲ್. ರಾಘವೇಂದ್ರ, ಸಂಜುಕುಮಾರ್, ರೇಖಾ ಸೇರಿದಂತೆ ಇತರರಿದ್ದರು.