ಬಳ್ಳಾರಿ: ಮಕ್ಕಳು ಹಾಗೂ ಗರ್ಭಿಣಿಯರಲ್ಲಿ ಅಪೌಷ್ಟಿಕತೆ ನಿವಾರಿಸುವಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಸೇವೆ ಶ್ಲಾಘನೀಯವಾದದ್ದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಸಿದ್ದಲಿಂಗ ಪ್ರಭು ಹೇಳಿದರು.
ದೇಶಕ್ಕೆ ಆರೋಗ್ಯವಂತ ಸಮಾಜ ಅತ್ಯಗತ್ಯವಾಗಿದ್ದು, ಮಕ್ಕಳು ಮತ್ತು ಗರ್ಭಿಣಿಯರಲ್ಲಿ ಅಪೌಷ್ಟಿಕತೆ ನಿವಾರಿಸಿ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಸುವ ಅಗತ್ಯವಿದೆ. ಈ ಅಭಿಯಾನದಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಪರಿಶ್ರಮ ಅಪಾರ ಹಾಗೂ ಅವರ ಕ್ಷೇತ್ರ ಮಟ್ಟದ ಸೇವೆ ಶ್ಲಾಘನೀಯವಾದದು ಎಂದು ತಿಳಿಸಿದರು.
ಅಪೌಷ್ಟಿಕತೆಯನ್ನು ಬೇರುಮಟ್ಟದಲ್ಲೇ ಚಿವುಟಿ ಹಾಕುವ ನಿಟ್ಟಿನಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಮುಂಚೂಣಿಯಲ್ಲಿದ್ದು, ತಮ್ಮ ಜವಾಬ್ದಾರಿಯನ್ನು ನಿಷ್ಠೆಯಿಂದ ಮುಂದುವರಿಸಬೇಕಿದೆ. ಮುಂದಿನ ಪೀಳಿಗೆಯು ಅಪೌಷ್ಟಿಕತೆಯಿಂದ ನರಳದಂತೆ ಜಾಗೃತಿ ವಹಿಸಿ, ಆರೋಗ್ಯವಂತ ಸಮಾಜವನ್ನು ಕಟ್ಟಲು ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.ಹಿಂದೆ ರಾಜ್ಯಾದ್ಯಂತ ಅಪೌಷ್ಟಿಕತೆ ಹೆಚ್ಚಿರುವ ಜಿಲ್ಲೆಗಳನ್ನು ಗುರುತಿಸಿ, ಅದನ್ನು ಹೋಗಲಾಡಿಸಲು ರೂಪಿಸಿದ ಕಾರ್ಯಕ್ರಮಗಳ ಫಲವಾಗಿ ಇಂದು ಮಹತ್ತರ ಪ್ರಗತಿ ಸಾಧಿಸಲಾಗಿದೆ. ಗರ್ಭಧಾರಣೆಯ ಮೊದಲ ದಿನದಿಂದ ಹಿಡಿದು ಮಗುವಿನ ಜನನದ ವರೆಗೂ ತಾಯಿ ಮತ್ತು ಮಗುವಿಗೆ ಸೂಕ್ತ ಪೋಷಕಾಂಶಯುಕ್ತ ಆಹಾರ ಒದಗಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದರು.
ಇದಕ್ಕೂ ಮುನ್ನ, ಜಿಲ್ಲಾ ಮಟ್ಟದ ಪೋಷಣ್ ಮಾಸಾಚರಣೆ ಅಂಗವಾಗಿ ಆಯೋಜಿಸಿದ್ದ ಪೌಷ್ಟಿಕ ಆಹಾರ ಮೇಳವನ್ನು ಗಣ್ಯರು ವೀಕ್ಷಿಸಿದರು. ಮೇಳದಲ್ಲಿ ಪ್ರಮುಖ ಆಕರ್ಷಣೆಯಾಗಿ ಸಿರಿಧಾನ್ಯ ಖಾದ್ಯ, ಮೊಳಕೆ ಕಾಳು, ತರಕಾರಿ-ಸೊಪ್ಪು ಕಂಡುಬಂದವು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್. ಹೊಸಮನೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ದೇವರಾಜ್, ಬಳ್ಳಾರಿ ನಗರ ಉಪವಿಭಾಗದ ಡಿವೈಎಸ್ಪಿ ಗೋವಿಂದರಾಜು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿ ನಂದಿನಿ ಶಿಂಧೆ, ಬಳ್ಳಾರಿ ನಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀದೇವಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಕ ಈಶ್ವರ್ ಹಾಗೂ ಚನ್ನಬಸಪ್ಪ ಪಾಟೀಲ್ ಸೇರಿದಂತೆ ಅಂಗನವಾಡಿ ಮೇಲ್ವಿಚಾರಕಿಯರು, ಆಶಾ ಕಾರ್ಯಕರ್ತೆಯರು ಹಾಗೂ ಇತರರು ಉಪಸ್ಥಿತರಿದ್ದರು.