)
ಕಳೆದೆಲ್ಲ ಬಜೆಟ್‌ನಲ್ಲಿ ಘೋಷಣೆಗಳು ಕಾರ್ಯಾಗತವಾಗಿಲ್ಲ । ಈ ಬಾರಿ ಜಿಲ್ಲೆಯ ಜನತೆಯ ನಿರೀಕ್ಷೆಗಳ ಪಟ್ಟಿ ದೊಡ್ಡದು
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್ 6ರ ಶುಕ್ರವಾರದಂದು ರಾಜ್ಯ ಬಜೆಟ್ ಮಂಡಿಸಲಿದ್ದಾರೆ. ಜಿಲ್ಲೆಯ ಜನರು ಅಪಾರವಾದ ನಿರೀಕ್ಷೆಗಳನ್ನು ಹೊಂದಿದ್ದಾರೆ. ನಮ್ಮ ತಾಲೂಕಿಗೆ ಯಾವ ಯೋಜನೆಗಳು ದೊರೆಯುತ್ತವೆ ಎನ್ನುವ ನಿರೀಕ್ಷೆಯಲ್ಲಿ ಇದ್ದಾರೆ. ಆದರೆ ಪ್ರತಿ ಬಜೆಟ್‌ನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಘೋಷಣೆಯಾದ ಯೋಜನೆಗಳೆಲ್ಲವೂ ಅನುಷ್ಠಾನವಾಗಿವೆಯೇ ಎಂದು ಹಳೆಯ ಬಜೆಟ್‌ಗಳತ್ತ ನೋಡಿದರೆ ನಿರಾಸೆ ಎದ್ದು ಕಾಣುತ್ತದೆ.ಕಳೆದ ಬಜೆಟ್‌ನಲ್ಲಿ ಘೋಷಣೆಯಾದ ಚಿಂತಾಮಣಿಯಲ್ಲಿ ಸರ್‌ಎಂವಿ ಕಾಲೇಜು ಸ್ಥಾಪನೆಗೆ ₹150 ಕೋಟಿ ಅನುದಾನ ಘೋಷಣೆ, ಎಚ್.ಎನ್ ವ್ಯಾಲಿ ಯೋಜನೆಯಡಿ 24 ಕೆರೆ ಭರ್ತಿಗೆ 70 ಕೋಟಿ ಅನುದಾನ ಮೀಸಲು, ಹೈಟೆಕ್ ಹೂವಿನ ಮಾರುಕಟ್ಟೆ ಸ್ಥಾಪನೆ, ಸಿಆರ್‌ಪಿಎಫ್ ಸ್ಥಾಪನೆಗೆ ₹80 ಕೋಟಿ, ಡಾ.ಎಚ್.ನರಸಿಂಹಯ್ಯ ಅಧ್ಯಯನ ಮಾಡಿದ ಗೌರಿಬಿದನೂರಿನ ಸರ್ಕಾರಿ ಶಾಲೆ ಉನ್ನತೀಕರಣ ಮಾಡುವುದಾಗಿ ತಿಳಿಸಿದ್ದರು.
2024 ರ ಬಜೆಟ್‌ನಲ್ಲಿ ಬಯೋ ಸಿಎಸ್.ಜಿ, ರೈಲ್ವೆ ಕೆಳ ನೇತುವೆ ಇನ್ನೂ ಕಾರ್ಯಾರಂಭ ಮಾಡಿಲ್ಲ. ಚಿಕ್ಕಬಳ್ಳಾಪುರ ಆರ್.ಟಿ.ಓ. ಕಚೇರಿಯಲ್ಲಿ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥಗಳನ್ನು ಕಾರ್ಯಾರಂಭ ಮಾಡುವುದಾಗಿ ತಿಳಿಸಿದ್ದರೂ ಅದು ಕಾಮಗಾರಿ ಮುಗಿದಿದ್ದು ಉದ್ಘಾಟನೆಯಾಗಬೇಕಿದೆ.
2020ರ ಬಜೆಟ್‌ನಲ್ಲಿ ಯಡಿಯೂರಪ್ಪ ಜಿಲ್ಲೆಗೆ ಘೋಷಿಸಿದ್ದ ಉತ್ಪಾದನಾ ನಿರ್ದಿಷ್ಟ ಕೈಗಾರಿಕಾ ಕ್ಲಸ್ಟರ್ ಯೋಜನೆ ಸಹ ಇಂದಿಗೂ ಜಾರಿ ಆಗಿಲ್ಲ. ಜಿಲ್ಲೆಯ ಕೈಗಾರಿಕೀರಣದ ವಿಚಾರದಲ್ಲಿ ಈ ಕ್ಲಸ್ಟರ್ ಮಹತ್ವದ ಯೋಜನೆ ಆಗಿತ್ತು. ಈ ಯೋಜನೆಯಡಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಮೊಬೈಲ್ ಬಿಡಿಭಾಗಗಳ ಉತ್ಪಾದನಾ ಘಟಕಗಳು ಕಾರ್ಯಾರಂಭ ಆಗಬೇಕಾಗಿತ್ತು, ಆಗಿಲ್ಲ.234 ಕೆರೆಗಳಿಗೆ ವೃಷಭಾವತಿ ಕಣಿವೆಯಿಂದ ದ್ವಿತೀಯ ಹಂತದ ಸಂಸ್ಕರಿಸಿದ 308 ಎಂಎಲ್‌ಡಿ ನೀರು ತುಂಬಿಸುವ ರು. 500 ಕೋಟಿ ವೆಚ್ಚದ ಯೋಜನೆ ಘೋಷಿಸಲಾಗಿತ್ತು. ಆದರೆ ಇಂದಿಗೂ ಈ ಯೋಜನೆಯಡಿ ಸಣ್ಣ ಪ್ರಮಾಣದಲ್ಲಿಯೂ ಕೆಲಸಗಳು ಜಿಲ್ಲೆಯಲ್ಲಿ ನಡೆದಿಲ್ಲ.ಬಸವರಾಜ ಬೊಮ್ಮಾಯಿ ಬಜೆಟ್‌ನಲ್ಲಿ ಚಿಕ್ಕಬಳ್ಳಾಪುರದಲ್ಲಿ ಚರ್ಮದ ಬೊಂಬೆ ತಯಾರಿಕೆ ಘಟಕ ಹಾಗೂ ಶಿಡ್ಲಘಟ್ಟದಲ್ಲಿ ಸೀರೆ ಮ್ರೈಕ್ರೊ ಕ್ಲಸ್ಟರ್ ಅಭಿವೃದ್ಧಿಗೆ ಕ್ರಮವಹಿಸುವುದಾಗಿ ಬಜೆಟ್‌ನಲ್ಲಿ ಪ್ರಕಟಿಸಿದ್ದರು. ಆದರೆ ಆ ಯೋಜನೆಗಳು ಕಾರ್ಯಗತವೇ ಆಗಿಲ್ಲ.ಶಿಡ್ಲಘಟ್ಟದಲ್ಲಿ ಜವಳಿ ಪಾರ್ಕ್ ಸ್ಥಾಪಿಸಬೇಕು ಎನ್ನುವ ಆಗ್ರಹ ಈ ಹಿಂದಿನಿಂದಲೂ ಇದೆ. ಇದಕ್ಕೆ ಪೂರಕ ಎನ್ನುವಂತೆ ಶಿಡ್ಲಘಟ್ಟದಲ್ಲಿ ಸೀರೆ ಮೈಕ್ರೊ ಕ್ಲಸ್ಟರ್ ಆರಂಭದ ಬಗ್ಗೆ ಬಜೆಟ್‌ನಲ್ಲಿ ಮುಖ್ಯಮಂತ್ರಿ ಪ್ರಸ್ತಾಪಿಸಿದ್ದರು. ಆದರೆ, ಈಗ ಘಟಕ ನಿರ್ಮಾಣ ಆಗುತ್ತದೆಯೊ ಅಥವಾ ಹಳ್ಳ ಹಿಡಿಯುತ್ತದೆಯೊ ಎನ್ನುವ ಪ್ರಶ್ನೆ ಮೂಡಿತ್ತದೆ.
ಎತ್ತಿನಹೊಳೆ ಯೋಜನೆ ನೀರು ಹರಿಯುವ ಭರವಸೆ ಇದೆ. ಜಿಲ್ಲೆಯ ಆಂಧ್ರದ ಗಡಿಯವರೆಗೂ ಬಂದಿರುವ ಕೃಷ್ಣಾನದಿ ನೀರು ಜಿಲ್ಲೆಗೆ ಬರುತ್ತದೆಯೇ ಕಾದು ನೋಡಬೇಕಿದೆ. ಸರ್ಕಾರಿ ನಂದಿ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಆರಂಭ ವಾಗಿ ಐದು ವರ್ಷ ಕಳೆದಿದೆ. ಆದರೆ ಆಸ್ಪತ್ರೆಗೆ ಬೇಕಾದ ಸಿಬ್ಬಂದಿ ನೇಮಕ ಮತ್ತು ಇನ್ನು ಹೆಚ್ಚಿನ ಅನುದಾನ ಬೇಕಿದೆ. ದಶಕಗಳ ಬೇಡಿಕೆಯಾದ ಹಣ್ಣು ತರಕಾರಿ ಶೀಥಿಲ ಗೃಹಗಳ ನಿರ್ಮಾಣ, ವೈನ್ ತಯಾರಿಕಾ ಘಟಕಗಳ ಸ್ಥಾಪನೆ ಆಗಬೇಕುದೆ. ಅಲ್ಲದೆ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡಬೇಕಿದೆ.