ಕನ್ನಡಪ್ರಭ ವಾರ್ತೆ ಟಿ. ನರಸೀಪುರ ಪಟ್ಟಣದ ಕೆಎಸ್ಐಸಿ ಕಾರ್ಖಾನೆ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದರೂ ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಅಲ್ಲೇ ಕ್ರೀಡಾಂಗಣ ಮಾಡುವುದಾಗಿ ಪುನರುಚ್ಚರಿಸಿದ್ದಾರೆ.ಪಟ್ಟಣದ ಹಳೇ ತಿರುಮಕೂಡಲಿನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ ಪತ್ರಕರ್ತರು ಕ್ರೀಡಾಂಗಣ ನಿರ್ಮಾಣಕ್ಕೆ ವಿರೋಧ ಉಂಟಾಗುತ್ತಿರುವ ವಿಷಯ ಗಮನಕ್ಕೆ ತಂದ ವೇಳೆ, ಈಗ ಕಂದಾಯ ಇಲಾಖೆ ಕ್ರೀಡಾ ಇಲಾಖೆಗೆ ಹಸ್ತಾಂತರ ಮಾಡಿರುವ ಜಾಗದಲ್ಲೇ ಕ್ರೀಡಾಂಗಣ ನಿರ್ಮಿಸುತ್ತೇನೆ. ಆದರೆ ಯಾವುದೇ ಕಾರಣಕ್ಕೂ ಕಾರ್ಖಾನೆ ಮುಚ್ಚುವ ಪ್ರಮೇಯವೇ ಎದುರಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.ತಾಲೂಕಿನ ಜನರಿಗೆ ಅನುಕೂಲವಾಗಲೆಂಬ ದೃಷ್ಟಿಯಿಂದ, ಕ್ರೀಡೆಯಲ್ಲಿ ಉತ್ತಮತರಬೇತಿ ಪಡೆಯಲು, ಪ್ರತಿಭೆ ಇದ್ದ ಪ್ರತಿಭಾನ್ವಿತ ಕ್ರೀಡಾಪಟುಗಳು ಮುಂದೆ ಬರಲಿ ಎಂಬ ಉದ್ದೇಶದಿಂದ ಕ್ರೀಡಾಂಗಣ ನಿರ್ಮಾಣ ಮಾಡಲಾಗುತ್ತಿದೆ. ಕೆಎಸ್ ಐಸಿ ಒಂದು ಸರ್ಕಾರಿ ಸ್ವಾಮ್ಯದ ಫ್ಯಾಕ್ಟರಿ, ಇಲ್ಲಿ ಫ್ಯಾಕ್ಟರಿ ಇರುವುದರಿಂದ ನೂರಾರು ಮಂದಿಗೆ ಕೆಲಸ ಸಿಕ್ಕಿದೆ. ಅಂತಹ ಫ್ಯಾಕ್ಟರಿ ಮುಚ್ಚಿ ನಾವೇ ನಮ್ಮ ಜನರಿಗೆ ಯಾಕೆ ತೊಂದರೆ ಕೊಡೋಣ, ಅಲ್ಲದೇ ಫ್ಯಾಕ್ಟರಿ ಮುಚ್ಚುವುದರಿಂದ ನಮಗೆ ತೊಂದರೆ, ಹಾಗಾಗಿ ಯಾವುದೇ ಕಾರಣಕ್ಕೂ ಫ್ಯಾಕ್ಟರಿ ಮುಚ್ಚುವುದಿಲ್ಲ ಎಂದು ತಿಳಿಸಿದರು. ಸುಳ್ಳು ಸುದ್ದಿ ಹಬ್ಬಿಸ್ತಿದ್ದಾರೆಕೆಎಸ್ ಐಸಿ ಫ್ಯಾಕ್ಟರಿ ಆವರಣದಲ್ಲಿ ಕ್ರೀಡಾಂಗಣ ನಿರ್ಮಿಸುತ್ತೇವೆ, ಆದರೆ ಫ್ಯಾಕ್ಟರಿ ಮುಚ್ಚುವುದಿಲ್ಲ. ಆದರೂ ಕೂಡ ಕೆಲವರು ಫ್ಯಾಕ್ಟರಿ ಮುಚ್ಚುತ್ತಾರೆ ಎಂದು ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಕಾರ್ಮಿಕರು ಕೆಲವು ತಾಂತ್ರಿಕ ತೊಂದರೆಗಳನ್ನು ತಿಳಿಸಿದ್ದಾರೆ.ಆದರೆ ಅಧಿಕಾರಿಗಳು ಎಲ್ಲ ಕಡೆ ಕ್ರೀಡಾಂಗಣಕ್ಕೆ ಸೂಕ್ತವಾದ ಜಾಗ ಹುಡುಕಿ ತಾಂತ್ರಿಕ ಆಂಶಗಳ ತಕರಾರರನ್ನು ಗಮನದಲ್ಲಿಟ್ಟುಕೊಂಡು ಕೆಎಸ್ಐಸಿಯ 5 ಎಕರೆ ಜಾಗ ಕ್ರೀಡಾಂಗಣ ನಿರ್ಮಾಣಕ್ಕೆ ಸೂಕ್ತ ಎಂದು ವರದಿ ನೀಡಿದ್ದಾರೆ.ಹಾಗಾಗಿ ಇಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಚಾಲನೆ ನೀಡಿದ್ದೇವೆ. ಆದಾಗ್ಯೂ ಕೂಡ ಇನ್ನೂ ಏನಾದ್ರು ಅನುಮಾನ ಸಂದೇಹಗಳಿದ್ದರೆ ನಮ್ಮ ಬಳಿ ಬಂದು ಚರ್ಚೆ ಮಾಡಲಿ, ಇರುವ ತಾಂತ್ರಿಕ ತೊಂದರೆಗಳನ್ನು ಬಗೆ ಹರಿಸಿ, ಕಾರ್ಮಿಕರಿಗೆ ಮನದಟ್ಟು ಮಾಡಿ ಕ್ರೀಡಾಂಗಣ ನಿರ್ಮಾಣ ಮಾಡುತ್ತೇವೆ ಎಂದು ಯತೀಂದ್ರ ಹೇಳಿದರು.ಅದೇ ಜಾಗದಲ್ಲೇ ಕ್ರೀಡಾಂಗಣ ನಿರ್ಮಾಣ ಮಾಡುತ್ತೀರಾ ಎಂಬ ಪ್ರಶ್ನೆಗೆ ಹೌದು ಎಂದು ಉತ್ತರಿಸಿದರು.ಕ್ರೀಡಾಂಗಣ ನಿರ್ಮಾಣಕ್ಕೆ ತೀವ್ರವಾದ ವಿರೋಧ ವ್ಯಕ್ತವಾಗಿರುವ ಬೆನ್ನ ಹಿಂದೆಯೇ ಯತೀಂದ್ರ ಸಿದ್ದರಾಮಯ್ಯರವರ ಹೇಳಿಕೆ ಯಾವ ರೀತಿ ತಿರುವು ಪಡೆದುಕೊಳ್ಳಲಿದೆಯೋ ಎಂಬುದನ್ನು ಕಾದು ನೋಡಬೇಕಿದೆ.