ಮಾಗಡಿಗೆ ಕಾವೇರಿ, ಹೇಮೆ, ಎತ್ತಿನಹೊಳೆ ನೀರು

KannadaprabhaNewsNetwork |  
Published : Mar 05, 2026, 01:15 AM IST
4ಕೆಆರ್ ಎಂಎನ್ 8.ಜೆಪಿಜಿಮಾಗಡಿ ತಾಲೂಕಿನ ಚಕ್ರಭಾವಿಯಲ್ಲಿ ನಡೆದ ವೈ.ಜಿ. ಗುಡ್ಡ ಏತ ನೀರಾವರಿ ಯೋಜನೆ ಶಂಕುಸ್ಥಾಪನೆ ಸಮಾರಂಭವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಮಾಗಡಿ: ಮಾಗಡಿ ಜನರಿಗೆ ಕಾವೇರಿ, ಹೇಮಾವತಿ ಹಾಗೂ ಎತ್ತಿನಹೊಳೆಯಿಂದಲೂ ನೀರು ಬರುತ್ತಿದ್ದು, ನೀರಿನ ಅದೃಷ್ಟವಿದೆ. ಇದಕ್ಕೆ ಅಗತ್ಯವಿರುವ ಟೆಂಡರ್‌ಗಳನ್ನು ಈಗಾಗಲೇ ಕರೆಯಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು

ಮಾಗಡಿ: ಮಾಗಡಿ ಜನರಿಗೆ ಕಾವೇರಿ, ಹೇಮಾವತಿ ಹಾಗೂ ಎತ್ತಿನಹೊಳೆಯಿಂದಲೂ ನೀರು ಬರುತ್ತಿದ್ದು, ನೀರಿನ ಅದೃಷ್ಟವಿದೆ. ಇದಕ್ಕೆ ಅಗತ್ಯವಿರುವ ಟೆಂಡರ್‌ಗಳನ್ನು ಈಗಾಗಲೇ ಕರೆಯಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ತಾಲೂಕಿನ ಚಕ್ರಭಾವಿಯಲ್ಲಿ ನಡೆದ ವೈ.ಜಿ.ಗುಡ್ಡ ಏತ ನೀರಾವರಿ ಯೋಜನೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅ‍ವರು, ಸತ್ತೇಗಾಲದಿಂದ ಇಗ್ಗಲೂರಿಗೆ 26 ಕಿ.ಮೀ. ಇಗ್ಗಲೂರಿನಿಂದ ಮೊಗೇನಹಳ್ಳಿಗೆ 58 ಕಿ.ಮೀ. ಮೊಗೇನಹಳ್ಳಿಯಿಂದ ಕಣ್ವಕ್ಕೆ 6 ಕಿ.ಮೀ, ಕಣ್ವದಿಂದ ವೈ.ಜಿ.ಗುಡ್ಡಕ್ಕೆ 25 ಕಿ.ಮೀ ಸೇರಿ ಒಟ್ಟು 115 ಕಿ.ಮೀ ಮಾರ್ಗದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ನೀರನ್ನು ಪಂಪ್ ಮಾಡಿ ಹರಿಸಲಾಗುವುದು ಎಂದರು.

ಈ ನೀರನ್ನು ಅಂತರ್ಜಲ ಹೆಚ್ಚಳ ಮಾಡಲು ತರುತ್ತಿದ್ದೇವೆ. ಇದಕ್ಕೆ 160 ಎಚ್.ಪಿ ಪಂಪ್ ಮೂಲಕ 115 ಕಿ.ಮೀ ದೂರಕ್ಕೆ ಲಿಫ್ಟ್ ಮಾಡಲಾಗುತ್ತಿದೆ. ಆ ಮೂಲಕ ಈ ಭಾಗದ ಕೆರೆಗಳನ್ನು ತುಂಬಿಸುತ್ತಿದ್ದೇವೆ. ಇದರಿಂದ ರೈತರಿಗೆ ಶಕ್ತಿ ತುಂಬುವಂತಾಗುತ್ತದೆ.

ಸರ್ಕಾರದಲ್ಲಿ ನನಗೆ ನೀರಾವರಿ ಇಲಾಖೆ ಜವಾಬ್ದಾರಿ ನೀಡಿದೆ. ಇದೇ ಶ್ರೀರಂಗ ಏತ ನೀರಾವರಿ ಯೋಜನೆ ಮೂಲಕ ಕುಣಿಗಲ್ ರೈತರಿಗೆ ನೀರು ಹರಿಸಲು ಮುಂದಾಗಿದ್ದೇವೆ. ಈ ನೀರಿಗಾಗಿ ಹೋರಾಟ ಮಾಡಿದ ವೈ.ಕೆ ರಾಮಯ್ಯ, ಹುಚ್ಚಮಾಸ್ತಿಗೌಡರ ಹೆಸರನ್ನು ಜನ ಇವತ್ತಿಗೂ ಚರ್ಚೆ ಮಾಡುತ್ತಿದ್ದಾರೆ. ಆದರೆ 4 ಬಾರಿ ಗೆದ್ದಿರುವ ನಾಗರಾಜಯ್ಯ ಅವರ ಹೆಸರನ್ನು ಜನ ಮಾತನಾಡುತ್ತಿಲ್ಲ ಏಕೆಂದು ಪ್ರಶ್ನಿಸಿದರು.

ಮೈಸೂರು ಮಹಾರಾಜರ ಕಾಲದಿಂದಲೂ ಕುಣಿಗಲ್‌ನಲ್ಲಿ ಕುದುರೆ ಸಾಕಲಾಗುತ್ತಿದೆ. ಬೆಂಗಳೂರು ರೇಸ್ ಕೋರ್ಸ್ ಅನ್ನು ಇಲ್ಲಿಗೆ ಸ್ಥಳಾಂತರಿಸುತ್ತೇವೆ ಎಂದರೆ ಇದಕ್ಕೆ ವಿರೋಧ ಮಾಡುತ್ತೀರಾ, ಇದರಿಂದ ಸುಮಾರು 2 ಸಾವಿರ ಜನರಿಗೆ ಕೆಲಸ ಸಿಗುತ್ತದೆ. ನಾವು ಕುಣಿಗಲ್ ಜನರಿಗೆ ರೇಸ್ ಆಡಿ ಎಂದು ಹೇಳಿಲ್ಲ. ರೇಸ್ ಕೋರ್ಸ್ ಬೆಂಗಳೂರಿನಲ್ಲಿದೆ ಎಂದು ಬೆಂಗಳೂರಿನ ಎಲ್ಲರೂ ರೇಸ್ ಆಡುತ್ತಿದ್ದಾರಾ? ನೀನು ಕೂಡ ರೇಸ್ ಆಡಬೇಡ. ನೀನು ಎಲ್ಲಿ ಆಡುತ್ತಿದ್ದೀಯಾ, ಆ ಜಾಗ ಯಾವುದು ಎಂದು ನನಗೆ ಗೊತ್ತು. ಕುಣಿಗಲ್‌ಗೆ ಹೆಸರು ಬರುತ್ತದೆ. ಬೇರೆ ಊರುಗಳಿಂದ ಬಂದವರು, ಅದರ ಚಟ ಇರುವವರು ರೇಸ್ ಆಡುತ್ತಾರೆ. ಚಟ ಇರುವವರು ವೈನ್ ಶಾಪಿಗೆ ಹೋಗುವುದಿಲ್ಲವೇ? ಚಟ ಇರುವವರು ಗೋವಾದಲ್ಲಿ ಕ್ಯಾಸಿನೋಗೆ ಹೋಗುವುದಿಲ್ಲವೇ? ರಾಮನಗರದವರು ಹೋಗಿ ಕ್ಯಾಸಿನೋ ಆಡುತ್ತಿರುವ ಫೋಟೋ ನೋಡಿದ್ದೇನೆ. ದೊಡ್ಡವರು ಆಡಿದ್ದಾರೋ, ಚಿಕ್ಕವರು ಆಡಿದ್ದಾರೋ ಎಂದು ನಾನು ಹೇಳುವುದಿಲ್ಲ ಎಂದರು.

ಕೆರೆ ತುಂಬಿಸುವ ಯೋಜನೆ ಸೇರಿದಂತೆ ಮಾಗಡಿ ಕ್ಷೇತ್ರದ ನೀರಾವರಿ ಯೋಜನೆಗೆ 1 ಸಾವಿರ ಕೋಟಿ ಅನುದಾನ ನೀಡಿದ್ದೇನೆ. ಕುಣಿಗಲ್ ಕ್ಷೇತ್ರದ ನೀರಾವರಿ ಯೋಜನೆಗಳಿಗೆ 1 ಸಾವಿರ ಕೋಟಿ, ರಾಮನಗರ ಹಾಗೂ ಕನಕಪುರ ಕ್ಷೇತ್ರಗಳಿಗೆ 1 ಸಾವಿರ ಕೋಟಿ ಅನುದಾನ ನೀಡಲಾಗಿದೆ. ಈ ಬಗ್ಗೆ ಬಿಜೆಪಿಯವರು ಉತ್ತರ ನೀಡಬೇಕು. ನಿಮ್ಮ ಕಾಲದಲ್ಲಿ ನೀವು ಏನು ಮಾಡಿದ್ದೀರಿ ಎಂದು ಹೇಳಿ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬುದಕ್ಕೆ ಇದೇ ಸಾಕ್ಷಿ ಎಂದರು.

ದೇವರು ಬಾಲಕೃಷ್ಣರಿಗೆ ಇನ್ನಷ್ಟು ಶಕ್ತಿ ನೀಡಲಿ:

“ಮನುಷ್ಯ ಸತ್ತಾಗ ಭೂಮಿಯೊಳಗೆ ಹೂತು ಬಿಡುತ್ತೇವೆ, ಆದರೆ ಅವರು ಮಾಡಿರುವ ಕೆಲಸಗಳು ಭೂಮಿಯ ಮೇಲೆ ಬದುಕಿರುತ್ತವೆ. ಇಂತಹ ನೀರಾವರಿ ಯೋಜನೆಗಳು ಸಾಕ್ಷಿಯಾಗಿ ಉಳಿದಿವೆ. ನಿಮಗೆ ಉತ್ತಮ ಜೀವನ ನೀಡಬೇಕು, ರೈತರನ್ನು ಕಾಪಾಡಬೇಕು. ತಾವರೆಕೆರೆ, ಕುಣಿಗಲ್‌ನಿಂದ ಇಲ್ಲಿಯವರೆಗೂ ಅತ್ಯುತ್ತಮ ರಸ್ತೆಗಳು ನಿರ್ಮಾಣ ಮಾಡಲಾಗಿದೆ. ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ, ಜನನ ಉಚಿತ, ಮರಣ ಖಚಿತ. ಈ ಹುಟ್ಟು ಸಾವಿನ ಮಧ್ಯೆ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ. ಅದೇರೀತಿ ನೀವು ಆಯ್ಕೆ ಮಾಡಿರುವ ಬಾಲಕೃಷ್ಣ ನಿಮಗೆ ಇಷ್ಟೆಲ್ಲಾ ಕೆಲಸ ಮಾಡಿದ್ದಾರೆ. ಅವರಿಗೆ ಇನ್ನಷ್ಟು ಶಕ್ತಿ ತುಂಬಬೇಕು. ನಾನು, ರಂಗನಾಥ್, ಸುರೇಶ್ ಇಲ್ಲಿಗೆ ಬಂದಿರುವುದೇ ಬಾಲಕೃಷ್ಣ ಅವರ ಕೈಬಲಪಡಿಸಲು, ಅವರು ಉತ್ತಮ ಕಾರ್ಯ ಮಾಡುತ್ತಿದ್ದು, ಅವರಿಗೆ ದೇವರು ಇನ್ನಷ್ಟು ಶಕ್ತಿ ಕೊಡುತ್ತಾನೆ ಎಂಬ ವಿಶ್ವಾಸ ನನಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಶಾಸಕರಾದ ಎಚ್.ಸಿ.ಬಾಲಕೃಷ್ಣ, ಡಾ.ರಂಗನಾಥ್ , ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್, ಬಿಎಂಟಿಸಿ ಉಪಾಧ್ಯಕ್ಷ ನಿಕೇತ್ ರಾಜ್ ಮೌರ್ಯ ಮಾತನಾಡಿದರು. ಗ್ರೇಟರ್ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಗಾಣಕಲ್ ನಟರಾಜ್, ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಎಸ್.ಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪೂಜಾರಿಪಾಳ್ಯ ಕೃಷ್ಣಮೂರ್ತಿ, ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್, ಜಿಪಂ ಸಿಇಒ ಅನ್ಮೋಲ್ ಜೈನ್, ಎಸ್ಪಿ ಶ್ರೀನಿವಾಸ ಗೌಡ ಮತ್ತಿತರರು ಉಪಸ್ಥಿತರಿದ್ದರು.

ಬಾಕ್ಸ್‌.................

ಕುಮಾರಸ್ವಾಮಿಯಿಂದ ಬುಡು ಬುಡುಕೆ ಬಣ್ಣದ ಮಾತುಗಳು: ಡಿಕೆಶಿ

ಕನ್ನಡಪ್ರಭ ವಾರ್ತೆ ಮಾಗಡಿ

ಶಾಸಕರಾಗಿ, ಸಂಸದರಾಗಿ, ಮುಖ್ಯಮಂತ್ರಿ ಹಾಗೂ ಈಗ ಕೇಂದ್ರ ಸಚಿವರಾಗಿ ದೊಡ್ಡ ಸ್ಥಾನಕ್ಕೆ ಹೋದವರು ಇಲ್ಲಿಗೆ ಬಂದು ಬುಡುಬುಡುಕೆ, ಬಣ್ಣಬಣ್ಣದ ಮಾತುಗಳನ್ನಾಡುತ್ತಾರೆ. ಇಷ್ಟಕ್ಕೂ ಜಿಲ್ಲೆಗೆ ಅವರ ಕೊಡುಗೆ ಏನೆಂದು ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.

ತಾಲೂಕಿನ ಚಕ್ರಭಾವಿಯಲ್ಲಿ ನಡೆದ ವೈ.ಜಿ.ಗುಡ್ಡ ಏತ ನೀರಾವರಿ ಯೋಜನೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅ‍ವರು, ನಾನು ಇಲ್ಲಿ ನಮ್ಮ ಕೆಲಸ ತೋರಿಸಲು ನಿಂತಿದ್ದೇನೆ ಹೊರತು, ಮುಂದೆ ಇಂತಹ ಕೆಲಸ ಮಾಡುತ್ತೇನೆ ಎಂದು ಹೇಳಲು ನಿಂತಿಲ್ಲ. ನಾಳೆ ಕೆಲಸ ಮಾಡುತ್ತೇವೆ ಎಂಬುದು ಶತೃತ್ವ, ಇವತ್ತೇ ಕೆಲಸ ಮಾಡುತ್ತೇವೆ ಎಂಬುದು ಮಿತ್ರತ್ವ. ನಾಳೆ ಯಾರು ಇರುತ್ತಾರೋ ಇರುವುದಿಲ್ಲವೋ ಗೊತ್ತಿಲ್ಲ. ಅಧಿಕಾರ ಇದ್ದಾಗ ನಾವು ಏನು ಮಾಡಿದೆವು ಎಂಬುದು ಮುಖ್ಯ. ನಮ್ಮದು ನಾಳೆ ಎನ್ನುವ ಸರ್ಕಾರವಲ್ಲ, ಇಂದೇ ಎನ್ನುವ ಸರ್ಕಾರ ಎಂದು ತಿಳಿಸಿದರು.

ರಾಜಕಾರಣಿಗಳು ಐದು ವರ್ಷಕ್ಕೊಮ್ಮೆ ಮತಕ್ಕಾಗಿ ಬಂದಾಗ ಯಾರು ಏನು ಮಾಡಿದ್ದಾರೆ ಎಂದು ಕೇಳಬೇಕು. ಕಾಂಗ್ರೆಸ್ ಕಾರ್ಯಕರ್ತರು ನೀವು ಬೇರೆ ಪಕ್ಷಗಳ ನಿಮ್ಮ ಸ್ನೇಹಿತರ ಜತೆ ಯಾರ ಕಾಲದಲ್ಲಿ ಯಾವ ಕೆಲಸ ಆಗಿದೆ ಎಂದು ಲೆಕ್ಕಾಚಾರ ಹಾಕಬೇಕು. ಅಧಿಕಾರ ಯಾರಿಗೆ ಇರಲಿಲ್ಲ? ದಳದ ಸಿಎಂ, ಪ್ರಧಾನಿ ಎಲ್ಲರಿಗೂ ಅಧಿಕಾರ ಇತ್ತಲ್ಲವೇ? ಅಧಿಕಾರದಲ್ಲಿದ್ದಾಗ ಯಾವ ಸಾಕ್ಷಿ ಗುಡ್ಡೆ ಬಿಟ್ಟು ಹೋಗಿದ್ದಾರೆ ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿ ಜಮೀನಿಗೂ 2.50 ಕೋಟಿ ನಿಗದಿ:

ಮಾಗಡಿ ಗುಡ್ಡಗಾಡು ಪ್ರದೇಶ. ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಈ ಜಿಲ್ಲೆಯನ್ನು ರಾಮನಗರ ಎಂದು ಮಾಡುವಾಗ ನಮ್ಮ ಹೆಸರು, ಗುರುತನ್ನು ಏಕೆ ತೆಗೆಯುತ್ತಿದ್ದೀರಿ? ನಾನು ಜಿಪಂ ಸದಸ್ಯನಾದಾಗ ಬೆಂ.ಗ್ರಾ.ಜಿಪಂ ಅಂತಾ ಇತ್ತು. ಸುರೇಶ್ ಸಂಸದರಾಗಿದ್ದು ಬೆಂಗಳೂರು ಗ್ರಾಮಾಂತರಕ್ಕೆ. ಜಿಲ್ಲೆಯ ಕೇಂದ್ರಾಡಳಿತ ರಾಮನಗರದಲ್ಲೇ ಇರಲಿ, ಆದರೆ ಜಿಲ್ಲೆಯ ಹೆಸರಿನಲ್ಲಿ ಬೆಂಗಳೂರು ಹೆಸರನ್ನು ತೆಗೆಯಬೇಡಿ ಎಂದು ಕೇಳಿದೆ. ಆದರೆ ಅವರದ್ದು ಬೇರೆಯದೇ ಲೆಕ್ಕಾಚಾರ. ಆದರೆ, ನೀವು ನಮಗೆ ಅಧಿಕಾರ ಮರಳಿ ನೀಡಿದ್ದೀರಿ, ಹೀಗಾಗಿ ನಮ್ಮ ಈ ಹಿಂದಿನ ಹೆಸರನ್ನು ಉಳಿಸಿಕೊಂಡು ಬೆಂಗಳೂರು ದಕ್ಷಿಣ ಎಂದು ಹೆಸರು ಬದಲಿಸಿದ್ದೇವೆ ಎಂದು ತಿಳಿಸಿದರು.

ನಮ್ಮ ಕೆಲಸ, ತೀರ್ಮಾನಗಳಿಂದ ಈ ಭಾಗದ ಜನರ ಆಸ್ತಿ ಮೌಲ್ಯ ಹೆಚ್ಚಾಗಿದೆ. ಬಿಡದಿ ಟೌನ್ ಶಿಪ್ ಯೋಜನೆ ಭೂಸಂತ್ರಸ್ತರಿಗೆ ನಾನು ಎಕರೆಗೆ 2.50 ಕೋಟಿ ಪರಿಹಾರ ನಿಗದಿ ಮಾಡಿದ್ದೇನೆ. ಕುಮಾರಸ್ವಾಮಿ ಅವರು ಅಲ್ಲಿ ಎಕರೆಗೆ 6-7 ಸಾವಿರಕ್ಕೆ ಜಮೀನು ತೆಗೆದುಕೊಂಡಿದ್ದರು. ನಾನು ಕೂಡ ಎಕರೆಗೆ 7-8 ಲಕ್ಷಕ್ಕೆ 10-20 ಎಕರೆ ಜಮೀನು ಖರೀದಿಸಿದ್ದೇನೆ. ಭೂಸ್ವಾಧೀನವಾಗುವ ಕುಮಾರಸ್ವಾಮಿ ಅವರ ಜಮೀನಿಗೂ 2.50 ಕೋಟಿ ನಿಗದಿ ಮಾಡಿದ್ದೇವೆ. ನಾವು ಅಧಿಕಾರಕ್ಕೆ ಬಂದಾಗ ನಾವು ತೆಗೆದುಕೊಳ್ಳುವ ಒಂದು ತೀರ್ಮಾನ ಜನರಿಗೆ ಶಕ್ತಿ ತುಂಬುವಂತಿರಬೇಕು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಕೋಟ್..............

ಕುಮಾರಣ್ಣ ಮಂಡ್ಯ ಸಂಸದರಾಗಿದ್ದಾರೆ. ಮದ್ದೂರಿನಲ್ಲಿ ರೈತರಿಗೆ ನಮ್ಮ ರೀತಿ ಟ್ರಾನ್ಸ್‌ಫಾರ್ಮರ್ ಹಾಕಿಸಲಿ ನೋಡೋಣ. ಕೇಂದ್ರದಿಂದ ಹಣ ತಂದು ಮಂಡ್ಯದ ರೈತರಿಗೆ ಟ್ರಾನ್ಸ್‌ಫಾರ್ಮರ್ ಹಾಕಿಸಲಿ ಸಾಕು. ರೈತರ ಪಂಪ್ ಸೆಟ್ ಗಳಿಗೆ 10 ಹೆಚ್.ಪಿ ಉಚಿತ ವಿದ್ಯುತ್ ಕಾಂಗ್ರೆಸ್ ಸರ್ಕಾರ ನೀಡಿತು. ಸುಮಾರು 2.20 ಲಕ್ಷ ಜನರಿಗೆ ಆಸ್ತಿ ದಾಖಲೆ ನೀಡುವ ಮೂಲಕ ಭೂಮಿ ಗ್ಯಾರಂಟಿ ನೀಡಿದ್ದೇವೆ. ಅಶೋಕಣ್ಣ ನಿಮ್ಮ ಅವಧಿಯಲ್ಲಿ, ಜನತಾದಳದ ಅವಧಿಯಲ್ಲಿ ಇಂತಹ ಕೆಲಸ ಮಾಡಲು ಆಗುತ್ತಿರಲಿಲ್ಲವೇ? ಉಳುವವನಿಗೆ ಭೂಮಿ, ಬಗರ್ ಹುಕುಂ, ಅರಣ್ಯ ಭಾಗದ ರೈತರಿಗೆ ಜಮೀನು ಸೇರಿದಂತೆ ರೈತರ ಪರವಾಗಿ ದೆಹಲಿಯಲ್ಲಾದರೂ ಸರಿ, ರಾಜ್ಯದಲ್ಲಾದರೂ ಸರಿ ಯೋಜನೆ ರೂಪಿಸಿದ್ದರೆ ಅದು ಕಾಂಗ್ರೆಸ್ ಮಾತ್ರ. ಇಂತಹ ಒಂದೇ ಒಂದು ಕೆಲಸ ಮಾಡಲು ಆಗದಿದ್ದರೆ ಮತ್ಯಾಕೆ ಜನ ಮತ ಹಾಕಬೇಕು.

-ಡಿ.ಕೆ.ಶಿವಕುಮಾರ್‌, ಉಪಮುಖ್ಯಮಂತ್ರಿ

4ಕೆಆರ್ ಎಂಎನ್ 8.ಜೆಪಿಜಿ

ಮಾಗಡಿ ತಾಲೂಕಿನ ಚಕ್ರಭಾವಿಯಲ್ಲಿ ನಡೆದ ವೈ.ಜಿ.ಗುಡ್ಡ ಏತ ನೀರಾವರಿ ಯೋಜನೆ ಶಂಕುಸ್ಥಾಪನೆ ಸಮಾರಂಭವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇನ್ನೂ ನಿರ್ಮಾಣವಾಗದ ಹೈಟೆಕ್‌ ಮಾರುಕಟ್ಟೆ
ಕೆಎಸ್‌ಐಸಿ ಕಾರ್ಖಾನೆ ಆವರಣದಲ್ಲೇ ಕ್ರೀಡಾಂಗಣ