ಮಾಗಡಿ: ನಾವು ಸುಳ್ಳು ಹೇಳಿ ಕೆಲಸ ಮಾಡುವವರಲ್ಲ, ನಿಮ್ಮ ಬಳಿ ಅತ್ತು ಕರೆದು ನಾಟಕ ಮಾಡುವವರಲ್ಲ. ನಾನು ಕೊಟ್ಟ ಮಾತನ್ನು ಉಳಿಸಿಕೊಳ್ಳುವವನು, ಕೊಟ್ಟ ಭರವಸೆ ಈಡೇರುವ ತನಕ ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಮಾಗಡಿ ಜನತೆ ಅದೃಷ್ಟವಂತರು. ನನ್ನನ್ನು ಸೋಲಿಸಿಯೂ ನನ್ನಿಂದಲೂ ಕೆಲಸ ಮಾಡಿಸಿಕೊಳ್ಳುತ್ತಿದ್ದೀರಿ. ಡಿ.ಕೆ.ಶಿವಕುಮಾರ್ ಅವರಿಂದಲೂ ಕೆಲಸ ಮಾಡಿಸಿಕೊಳ್ಳುತ್ತಿದ್ದೀರಿ. ಶಾಸಕ ಬಾಲಕೃಷ್ಣ ಎಲ್ಲೆಲ್ಲಿ ಕೆಲಸ ಆಗುತ್ತದೆಯೋ ಅಲ್ಲೆಲ್ಲ ಕಥೆ ಕಟ್ಟುತ್ತಾ ಇರುತ್ತಾರೆ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಮಾಗಡಿ ಕೆಂಪೇಗೌಡರು ಬೆಂಗಳೂರನ್ನು ಕಟ್ಟಿದರು. ಬೆಂಗಳೂರು ದಕ್ಷಿಣ ಜಿಲ್ಲೆಗೆ ನೀರಿನ ಅಭಾವ ನೀಗಿಸುವ ಕೆಲಸವನ್ನ ಡಿ.ಕೆ.ಶಿವಕುಮಾರ್ ಮಾಡುತ್ತಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲೆಯನ್ನು ರಾಜ್ಯದಲ್ಲಿಯೇ ನಂ.1 ಮಾಡುವ ಕನಸು ಶಿವಕುಮಾರ್ ಅವರದ್ದು. ಮಾಗಡಿಯ ಅಭಿವೃದ್ಧಿ 2027- 28ಕ್ಕೆ ಅಚ್ಚರಿ ಮೂಡಿಸಲಿದೆ. ಪಟ್ಟಣದ ಒಳಗೆ ರಸ್ತೆಗಳು ಅಚ್ಚುಕಟ್ಟಾಗಿವೆ. ಜೊತೆಗೆ ಗ್ರಾಮೀಣ ಪ್ರದೇಶದ ರಸ್ತೆಗಳು ಅತ್ಯುತ್ತಮ ಸ್ಥಿತಿಯಲ್ಲಿವೆ. ಈ ಕ್ಷೇತ್ರದಲ್ಲಿ 1 ಸಾವಿರ ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದು ಸುರೇಶ್ ತಿಳಿಸಿದರು.ಶಾಸಕ ಬಾಲಕೃಷ್ಣ ಮಾತನಾಡಿ, ಹತ್ತು ವರ್ಷಗಳ ಹಿಂದೆಯೇ ಡಿಕೆ ಸಹೋದರರ ಜೊತೆ ಸೇರಿದ್ದರೆ ಮಾಗಡಿ ಕ್ಷೇತ್ರ ಮತ್ತಷ್ಟು ಅಭಿವೃದ್ಧಿ ಆಗುತ್ತಿತ್ತು. ಆದರೆ, ನಾನು ತಪ್ಪಾದ ಜಾಗದಲ್ಲಿದ್ದು ಸಮಯ ವ್ಯರ್ಥ ಮಾಡಿದೆ. ನೀರಾವರಿ ಯೋಜನೆಗಳ ಅನುಷ್ಠಾನದಲ್ಲಿ ಡಿಕೆ ಸಹೋದರರ ಕೊಡುಗೆ ಅಪಾರ. ಎಕ್ಸ್ ಪ್ರೆಸ್ ಕೆನಾಲ್ ಗೆ ತುಮಕೂರಿನ ಜನರ ವಿರೋಧ ಲೆಕ್ಕಿಸದೆ ನೀರು ತರಲು ಶ್ರಮಿಸುತ್ತಿದ್ದಾರೆ ಎಂದರು.
ಡಿಕೆ ಸಹೋದರರು ಕಣ್ಣೀರು ಹಾಕಲ್ಲ. ಮಾಗಡಿ ತಾಲೂಕಿನ ರೈತರಿಗೆ ಉಚಿತ ಟ್ರಾನ್ಸ್‌ಫಾರ್ಮರ್, ನೀರಾವರಿ ಯೋಜನೆ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ನೀಡಿದರು. ಆದರೆ, ಚುನಾವಣೆಯಲ್ಲಿ ಮತ ಹಾಕುವಾಗ ನೀವು ಡಿ.ಕೆ.ಸುರೇಶ್ ಅವರನ್ನು ನೆನಪಿಸಿಕೊಳ್ಳಲಿಲ್ಲ. ನಾವು ಕೆಲಸ ಮಾಡಿ ಕೂಲಿ ಕೇಳುತ್ತಿದ್ದೇವೆ. ಕಣ್ಣೀರು ಹಾಕಿ ಕೂಲಿ ಕೇಳಲ್ಲ ಎಂದು ಬಾಲಕೃಷ್ಣ ಹೇಳಿದರು.
4ಕೆಆರ್ ಎಂಎನ್ 9.ಜೆಪಿಜಿಮಾಗಡಿ ತಾಲೂಕಿನ ಚಕ್ರಭಾವಿಯಲ್ಲಿ ನಡೆದ ವೈ.ಜಿ.ಗುಡ್ಡ ಏತನೀರಾವರಿ ಯೋಜನೆಯ ಶಂಕುಸ್ಥಾಪನೆ ಸಮಾರಂಭದಲ್ಲಿ ಡಿ.ಕೆ.ಸುರೇಶ್ ಮಾತನಾಡಿದರು.