
ಕನ್ನಡಪ್ರಭ ವಾರ್ತೆ, ತುಮಕೂರು
ಮಂಗಳವಾರ ಸಂಜೆ ಫ್ಲೆಕ್ಸ್ ವಿಚಾರವಾಗಿ ಉದ್ಭವಿಸಿದ ಗಲಾಟೆಯಿಂದ ಬೆಳ್ಳಾವಿ ಕಾರದ ಮಠದ ವೀರಬಸವ ಸ್ವಾಮೀಜಿ ಅವರು ಮನನೊಂದು ಬುಧವಾರ ಬೆಳಗ್ಗೆಯಿಂದ ನಾಪತ್ತೆಯಾಗಿದ್ದರು. ಸ್ವಾಮೀಜಿ ಮೊಬೈಲ್ ನಂಬರ್ ಸ್ವೀಚ್ಡ್ ಆಫ್ ಆಗಿದ್ದು ಭಕ್ತರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿತ್ತು.ಘಟನೆ ಹಿನ್ನೆಲೆ: ಬೆಳ್ಳಾವಿ ಗ್ರಾಮದ ಯುವಕ ವೀರಗಾಸೆ ವೀರೇಶ್ ಎಂಬಾತನ ಹುಟ್ಟುಹಬ್ಬದ ನಿಮಿತ್ತ ಮಠದ ಆವರಣದಲ್ಲಿ ಶುಭಾಶಯ ಕೋರಿದ ಪ್ಲೆಕ್ಸ್ ಕಟ್ಟಲಾಗಿತ್ತು. ಆದರೆ ಕೆಲ ಕಿಡಿಗೇಡಿಗಳು ಆ ಫ್ಲೆಕ್ಸ್ ಅನ್ನು ಹರಿದು ಹಾಕಿದ್ದರು. ಈ ವಿಚಾರ ತಿಳಿದು ಯುವಕರ ಗುಂಪು ಮಠಕ್ಕೆ ಆಗಮಿಸಿ, ಸಿಸಿಟಿವಿ ದೃಶ್ಯ ತೋರಿಸುವಂತೆ ಸ್ವಾಮೀಜಿಯನ್ನು ಪ್ರಶ್ನಿಸಿದೆ. ಸ್ವಾಮೀಜಿ ಸಿಸಿಟಿವಿ ದೃಶ್ಯವನ್ನು ತೋರಿಸಿದರೂ, ಕೆಲ ಯುವಕರು ಸುಖಸುಮ್ಮನೆ ಗಲಾಟೆ ಮಾಡಿದ್ದಾರೆ. ನೀವೆ ಫ್ಲೆಕ್ಸ್ ಹರಿಸಿದ್ದೀರಾ ಅಂತ ಅವಾಚ್ಯ ಶಬ್ದಗಳಿಂದ ಸ್ವಾಮೀಜಿಯನ್ನು ಯುವಕರ ಗುಂಪು ನಿಂದಿಸಿತ್ತು. ಇದರಿಂದ ಮನನೊಂದು ಸ್ವಾಮೀಜಿ ತಮ್ಮ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿ ಯಾರ ಸಂಪರ್ಕಕ್ಕೂ ಸಿಗದೇ ಮಠ ತೊರೆದು ಹೊರಟಿದ್ದರು. ಸ್ವಾಮೀಜಿ ನಾಪತ್ತೆ ಹಿನ್ನೆಲೆಯಲ್ಲಿ ಮಠದ ಆಡಳಿತ ಮಂಡಳಿ ಸ್ವಾಮೀಜಿ ಮಿಸ್ಸಿಂಗ್ ಆಗಿದ್ದಾರೆಂದು ಬೆಳ್ಳಾವಿ ಪೊಲೀಸ್ ಠಾಣೆಗೆ ದೂರು ನೀಡಿತ್ತು. ದೂರು ಸ್ವೀಕರಿಸಿದ ಪೊಲೀಸರು ತನಿಖೆ ಆರಂಭಿಸಿ ಗಲಾಟೆ ನಡೆಸಿದ ಯುವಕರ ಗುಂಪನ್ನು ವಶಕ್ಕೆ ಪಡೆದುಕೊಂಡರು. ಸ್ವಾಮೀಜಿ ನಾಪತ್ತೆಯಾಗಿದ್ದ ಸುದ್ದಿ ವೇಗವಾಗಿ ಹಬ್ಬಿ ಚರ್ಚೆಗೆ ಗ್ರಾಸವಾಗಿತ್ತು. ಈ ನಡುವೆ ಸ್ವಾಮೀಜಿ ತಾವು ಸಿದ್ಧಗಂಗಾ ಮಠದಲ್ಲಿ ಆಶ್ರಯ ಪಡೆದಿರುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿತು. ಘಟನೆ ಹಿನ್ನೆಲೆಯಲ್ಲಿ ಮಾತನಾಡಿದ ಸ್ವಾಮೀಜಿ, ನಾನು ಸಿದ್ದಗಂಗಾ ಮಠದ ಹಳೆಯ ವಿದ್ಯಾರ್ಥಿ. ಈ ಮಠದೊಂದಿಗೆ ನನಗೆ ಅವಿನಾಭಾವ ಸಂಬಂಧ ಇದೆ. ಇಲ್ಲಿಂದಲೇ ಆಶುಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದೆ. ಆ ನಂಟಿನ ನೆಲೆಯಲ್ಲಿ ಪಾದಯಾತ್ರೆ ಮೂಲಕ ಬುಧವಾರ ಬೆಳಗ್ಗೆ 4.30ಕ್ಕೆ ಮಠಕ್ಕೆ ಬಂದು ಶಿವಕುಮಾರ ಅವರ ಗದ್ದಿಗೆ ದರ್ಶನ ಪಡೆದಿದ್ದಾಗಿ ತಿಳಿಸಿದರು.ಇನ್ನು, ಮೌನವೃತಾಚರಣೆ ಇರುವ ಕಾರಣದಿಂದ ನಮ್ಮ ಮಠದ ಪರಿಚಾರಕರಿಗೆ ತಿಳಿಸಲು ಸಾಧ್ಯವಾಗಲಿಲ್ಲ. ಹೇಳದೇ ಬಂದಿರುವುದು ನನ್ನ ಎಡವಟ್ಟು. ಅದರಿಂದಲೇ ನಾಪತ್ತೆ ಎಂಬ ವದಂತಿ ಹರಡಿದೆ ಎಂದು ಸ್ಪಷ್ಟನೆ ನೀಡಿದರು. ಸಿದ್ದಲಿಂಗಸ್ವಾಮೀಜಿ ಅವರೊಂದಿಗೆ ಶಿವಪೂಜೆ ನೆರವೇರಿಸಿ ಪ್ರಸಾದ ಸ್ವೀಕರಿಸಿದ್ದೇನೆ. ಈಗ ನಮ್ಮ ಬೆಳ್ಳಾವಿಯ ಕಾರದ ಮಠಕ್ಕೆ ಮರಳುತ್ತೇನೆ. ಭಕ್ತಾದಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದು ಭಕ್ತರಿಗೆ ಭರವಸೆ ನೀಡಿದ್ದಾರೆ. ಇದರೊಂದಿಗೆ ನಾಪತ್ತೆ ಕುರಿತು ಹರಿದಾಡುತ್ತಿದ್ದ ಊಹಾಪೋಹಗಳಿಗೆ ತೆರೆ ಬಿದ್ದಿದೆ.