ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಅನುದಾನ ಬಿಡುಗಡೆಗೆ ಆಗ್ರಹಿಸಿ ಹತ್ತು ದಿನಗಳ ಹಿಂದೆ ಎಲ್ಲ ತಾಲೂಕುಗಳ ಬಂದ್ ಮಾಡಿದ್ದ ರೈತ ಸಂಘ ನಂತರ ಹಿರಿಯೂರು ಹಾಗೂ ಹೊಳಲ್ಕೆಯಿಂದ ಪಾದಯಾತ್ರೆ ನಡೆಸಿ ಒನಕೆ ಓಬವ್ವ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಅನುದಾನ ಬಿಡುಗಡೆಗೆ ಆಗ್ರಹಿಸಿತ್ತು. ಸ್ಥಳಕ್ಕೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಈ ಸಂಬಂಧ ಸಿಎಂ ಗಮನಕ್ಕೆ ತರಲಾಗುವುದು. ಜಿಲ್ಲೆಯ ಎಲ್ಲ ಶಾಸಕರು ಸಿಎಂ ಭೇಟಿ ಮಾಡಿ ಭದ್ರಾ ಮೇಲ್ದಂಡೆಗೆ ಬಜೆಟ್‌ನಲ್ಲಿ 5 ಸಾವಿರ ಕೋಟಿ ರು. ನಿಗದಿ ಮಾಡುವಂತೆ ಮನವಿ ಮಾಡಿರುವುದಾಗಿ ರೈತ ಹೋರಾಟಗಾರರಿಗೆ ತಿಳಿಸಿದ್ದರು.
ಈ ಹೋರಾಟದ ನಂತರದಲ್ಲಿ ಗಂಭೀರ ಹೆಜ್ಜೆ ತುಳಿದ ರೈತ ಸಂಘ ಅಮರಣಾಂತ ಉಪವಾಸ ಘೋಷಣೆ ಮಾಡಿತು. ಮಾ.2 ರಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಸ್ಟೇಜ್ ನಿರ್ಮಿಸಿದ ರೈತ ಸಂಘದ ಕಾರ್ಯಕರ್ತರು ಸಾರ್ವಜನಿಕ ಸಭೆ ನಡೆಸಿ ನಂತರ ಆಮರಣಾಂತ ಉಪವಾಸ ಆರಂಭಿಸಿದರು. ರಾತ್ರಿ ವೇಳೆಗೆ ಆರು ಮಂದಿ ವೇದಿಕೆಯಲ್ಲಿ ಕಾಣಿಸಿಕೊಂಡು ಅಹೋರಾತ್ರಿ ದಾಟಿ ಬೆಳಗಾಗಿಸಿದರು. ನಂತರ ಮರುದಿನ ಮುಂಜಾನೆ ದೃಶ್ಯ ಬದಲಾಯಿತು. ಕೆಲವು ಸಂಘಟನೆಗಳ ನಾಲ್ಕಾರು ಮಂದಿ ಮುಖಂಡರು ಸ್ಥಳಕ್ಕೆ ಆಗಮಿಸಿ ಉಪವಾಸ ಸತ್ಯಾಗ್ರಹ ಬೆಂಬಲಿಸುವುದಾಗಿ ಹೇಳಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ದ ವಾಗ್ದಾಳಿ ನಡೆಸಿ ಅಲ್ಲಿಂದ ನಿರ್ಗಮಿಸಿದರು. ಉಪವಾಸಕ್ಕೆ ಬೆಂಬಲಿಸುವುದು ಅಂದರೆ ಸ್ವಯಂ ಪಾಲ್ಗೊಳ್ಳುವುದು ಎಂಬ ಬದ್ದತೆ ಮರೆತಿದ್ದರು. ಹೇಗಿತ್ತು ನನ್ ಭಾಷಣ, ಸ್ಟೇಟ್, ಸೆಂಟ್ರಲ್‌ನ ಹೆಂಗೆ ಝಾಡಿಸಿದೆ ಎಂದು ಸ್ವಯಂ ಸಂಪ್ರೀತರಾಗುತ್ತಿದ್ದ ದೃಶ್ಯಗಳು ಕಂಡು ಬಂದವು. ರಾತ್ರಿ ಉಪವಾಸ ಸತ್ಯಾಗ್ರಹ ನಡೆಸುವರ ಸಂಖ್ಯೆ ಇಳಿ ಮುಖವಾಗಿತ್ತು. ಕೆಲವು ಮುಖಗಳು ಬದಲಾವಣೆ ಆಗಿದ್ದವು. ಒಂದಿಬ್ಬರು ಅಸ್ವಸ್ಥರಾದ ಹಿನ್ನೆಲೆ ಮಂಗಳವಾರ ರಾತ್ರಿ ವೈದ್ಯ ಸಿಬ್ಬಂದಿ ಆಸ್ಪತ್ರೆಗೆ ಕರೆದೊಯ್ದು ಗ್ಲುಕೋಸ್ ಹಾಕಿ ಮತ್ತೆ ಕರೆತಂದರು.ಬುಧವಾರ ಬೆಳಿಗ್ಗೆ ಉಪವಾಸ ಸತ್ಯಾಗ್ರಹದ ಸ್ಥಳದಲ್ಲಿ ರಂಗಭೂಮಿ ಕಲಾವಿದರು ಕಾಣಿಸಿಕೊಂಡು ಹಾಡುಗಳ ಹೇಳಿದರು. ಭಜನಾ ತಂಡಗಳು ಕಾಣಿಸಿಕೊಂಡವು. ನಂತರ ಒಂದಿಬ್ಬರು ಭಾಷಣಗಳ ಮಾಡಿ ನಿರ್ಗಮಿಸಿದರು. ಈ ಬಗೆಯ ಆರ್ಭಟಕ್ಕೆ ಅಕ್ಷರಶಃ ಉಪವಾಸ ಕುಳಿತವರು ಮೂಲೆ ಗುಂಪಾಗಿದ್ದರು. ಉಪವಾಸ ಕುಳಿತವರ ಬಳಿಗೆ ಜಿಲ್ಲಾಧಿಕಾರಿ ಸೌಜನ್ಯಕ್ಕೂ ಆಗಮಿಸಿ ಮನವಿ ಆಲಿಸಲಿಲ್ಲ ಎಂಬ ಅಸಮಾಧಾನ ಅಲ್ಲಿ ನೆಲೆಗೊಂಡಿತ್ತು.
ಉಪವಾಸ ಸತ್ಯಾಗ್ರಹ ಎಂಬುವುದು ಯಾವುದೇ ಹೋರಾಟದ ಅಂತಿಮ ಘಟ್ಟ. ಆದರೆ ಹೋರಾಟದ ಆಯ್ಕೆಯಲ್ಲಿ ರೈತ ಸಂಘ ಎಡವಿತೇ ಎಂಬ ಪ್ರಶ್ನೆಗಳು ಮೂಡಿವೆ. ಉಪವಾಸ ಸತ್ಯಾಗ್ರಹ ಮಾಡುವಾಗ ಯಾರ್ಯಾರು ಕುಳಿತುಕೊಳ್ಳುತ್ತಾರೆ ಎಂಬಿತ್ಯಾದಿ ಮಾಹಿತಿಗಳ ಮಾದ್ಯಮಕ್ಕೆ ಹಾಗೂ ಜಿಲ್ಲಾಡಳಿತಕ್ಕೆ ನೀಡಬೇಕು. ಅವರೇನಾದರೂ ಮಧುಮೇಹ ಸೇರಿದಂತೆ ಇತ್ಯಾದಿ ರೋಗಗಳಿಂದ ಬಳಲುತಿದ್ದಾರೆಯೇ ಎಂಬ ಅಂಶವನ್ನು ಸ್ಪಷ್ಟಪಡಿಸಬೇಕು. ಆದರೆ ಇಂತಹ ಯಾವುದೇ ಪೂರ್ವ ತಯಾರಿಗಳ ಮಾಡಿಕೊಳ್ಳದೇ ಸಂಘಟನೆ ಮುಖಂಡರು ಉಪವಾಸಕ್ಕೆ ಕುಳಿತರು.
ಭಾಷಣ ಸೇರಿದಂತೆ ಗದ್ದಲಗಳೇ ಮೇಳೆೈಸಿದವು. ಉಪವಾಸ ಸತ್ಯಾಗ್ರಹ ತೀರ್ಮಾನ ಕೈಗೊಂಡ ಮುಖಂಡ ಕೆ.ಟಿ.ತಿಪ್ಪೇಸ್ವಾಮಿ ಮಾತ್ರ ಮೂರು ದಿನ ಕಾಣಿಸಿಕೊಂಡರು. ತಿಪ್ಪೇಸ್ವಾಮಿ ಅವರಿಗೆ ಮಧುಮೇಹ ಖಾಯಿಲೆ ಇದೆ. ಇದು ಎಲ್ಲ ರೈತ ಹೋರಾಟಗಾರರಿಗೆ ಗೊತ್ತಿದೆ. ಮಧುಮೇಹಿಗಳು ದಿನವಿಡೀ ಉಪವಾಸವಿದ್ದು ದೇಹವ ದಂಡಿಸುವುದು ತ್ರಾಸದಾಯಕ ಕೆಲಸ. ಆದರೂ ಎರಡು ದಿನಗಳಿಂದ ತಿಪ್ಪೇಸ್ವಾಮಿ ಉಪವಾಸವಿದ್ದರು. ಮಂಗಳವಾರ ರಾತ್ರಿ ರಕ್ತದೊತ್ತಡ ಕಡಿಮೆಯಾಯಿತೆಂಬ ಕಾರಣಕ್ಕೆ ತಿಪ್ಪೇಸ್ವಾಮಿ ಸೇರಿದಂತೆ ಒಂದಿಬ್ಬರ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ನಂತರ ಮರಳಿ ಉಪವಾಸ ಸತ್ಯಾಗ್ರಹದ ಸ್ಥಳಕ್ಕೆ ಕರೆತರಲಾಗಿತ್ತು.