ರಸ್ತೆ ಮೇಲೆ ಗುಡ್ಡ ಜರಿತ: ದ್ವೀಪವಾಗಿದೆ ‘ಮಠತ್ತಡ್ಕ’

KannadaprabhaNewsNetwork |  
Published : Jun 10, 2025, 02:36 AM IST
ಮುಂಡಾಜೆ -  ಮಠತ್ತಡ್ಕ ರಸ್ತೆ ಬದಿಯ ಬೃಹತ್ ಗುಡ್ಡವೊಂದು ಜರಿದು ರಸ್ತೆಗೆ ಬಿದ್ದಿರುವುದು | Kannada Prabha

ಸಾರಾಂಶ

ಕಳೆದ ವಾರ ನಿರಂತರವಾಗಿ ಸುರಿದ ಧಾರಾಕಾರ ಮಳೆಯ ಪ್ರತಾಪವೇನೋ ಕಡಿಮೆಯಾಗಿದೆ. ಆದರೆ ಈ ಸಂದರ್ಭದಲ್ಲಿ ಆದ ಅವಘದಿಂದಾಗಿ ಸುಳ್ಯ ತಾಲೂಕು ಬೆಳ್ಳಾರೆ ಸಮೀಪದ ಪ್ರದೇಶವೊಂದರ 25ಕ್ಕೂ ಅಧಿಕ ಮನೆಗಳು ದ್ವೀಪದಂತಾಗಿದೆ.

ದುರ್ಗಾಕುಮಾರ್ ನಾಯರ್‌ಕೆರೆ

ಕನ್ನಡಪ್ರಭ ವಾರ್ತೆ ಸುಳ್ಯ

ಕಳೆದ ವಾರ ನಿರಂತರವಾಗಿ ಸುರಿದ ಧಾರಾಕಾರ ಮಳೆಯ ಪ್ರತಾಪವೇನೋ ಕಡಿಮೆಯಾಗಿದೆ. ಆದರೆ ಈ ಸಂದರ್ಭದಲ್ಲಿ ಆದ ಅವಘದಿಂದಾಗಿ ಬೆಳ್ಳಾರೆ ಸಮೀಪದ ಪ್ರದೇಶವೊಂದರ 25ಕ್ಕೂ ಅಧಿಕ ಮನೆಗಳು ದ್ವೀಪದಂತಾಗಿದೆ.ಇದು ಪೆರುವಾಜೆ ಗ್ರಾಮದ ಮಠತ್ತಡ್ಕ ಪ್ರದೇಶದಲ್ಲಿ ನಡೆದ ಪ್ರಾಕೃತಿಕ ದುರಂತ. ಮೇ ೩೦ ರಂದು ಸುರಿದ ಧಾರಾಕಾರ ಮಳೆಯ ವೇಳೆ ಮುಂಡಾಜೆ - ಮಠತ್ತಡ್ಕ ರಸ್ತೆ ಬದಿಯ ಬೃಹತ್ ಗುಡ್ಡ ಜರಿದು ರಸ್ತೆಗೆ ಬಿತ್ತು. ಬೃಹತ್ ಗಾತ್ರದ ಮರಗಳು, ಗಿಡಗಳು, ಬಂಡೆಕಲ್ಲು, ಮಣ್ಣಿನ ರಾಶಿ ಸಹಿತ ಸುಮಾರು ೭೫ ಮೀಟರ್‌ನಷ್ಟು ಉದ್ದಕ್ಕೆ ರಸ್ತೆ ಸಂಪೂರ್ಣವಾಗಿ ಮುಚ್ಚಲ್ಪಟ್ಟು ರಸ್ತೆಯ ಕುರುಹೇ ಇಲ್ಲದಂತೆ ಗೋಚರಿಸಿತು. ಈ ರಸ್ತೆಯ ಆಚೆಗೆ ೨೫ ಕ್ಕೂ ಹೆಚ್ಚು ಮನೆಗಳಿದ್ದು, ಈ ಪೈಕಿ ಪರಿಶಿಷ್ಟ ಜಾತಿ ಸಮುದಾಯದ ಮನೆಗಳೇ ಹೆಚ್ಚು. ಈ ಮನೆಗಳಿಗೆಲ್ಲಾ ಮೇ ೩೦ ರಿಂದ ರಸ್ತೆ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ. ಅಂದು ರಾತ್ರಿಯೇ ಸುಳ್ಯದಿಂದ ತಹಸೀಲ್ದಾರ್ ಸಹಿತ ಅಧಿಕಾರಿಗಳು ಭೇಟಿ ನೀಡಿದರು. ಗ್ರಾ.ಪಂ. ಅಧ್ಯಕ್ಷರು, ಶಾಸಕರು ಕೂಡಾ ಸ್ಥಳಕ್ಕೆ ಬಂದರು.ಆದರೆ ಬಿದ್ದಿರುವ ಮಣ್ಣಿನ ರಾಶಿಯನ್ನು ತಕ್ಷಣಕ್ಕೆ ಏನೂ ಮಾಡುವಂತಿರಲಿಲ್ಲ. ಆದರೆ ಘಟನೆ ನಡೆದು ಒಂದು ವಾರ ಕಳೆದರೂ ಈ ಕೆಲಸ ಆಗದ ಕಾರಣ ಆ ಪ್ರದೇಶ ದ್ವೀಪದಂತಾಗಿದೆ.ಘಟನೆಯ ಮರು ದಿನದಿಂದ ಅಲ್ಲಿ ಬಿದ್ದಿದ್ದ ಮರಗಳನ್ನು ಕಡಿದು ಕಾಲ್ದಾರಿಯೊಂದನ್ನು ಮಾತ್ರ ನಿರ್ಮಾಣ ಮಾಡಲಾಗಿದ್ದು, ತುರ್ತು ಅಗತ್ಯಕ್ಕೆ ಇಲ್ಲಿ ಕಷ್ಟದಲ್ಲಿ ನಡೆದು ಹೋಗಲು ಮಾತ್ರ ಸಾಧ್ಯವಾಗುತ್ತಿದೆ ಹೊರತು ಈ ಮನೆಯವರಿಗೆ ಈಗ ಯಾವುದೇ ರಸ್ತೆ ಸಂಪರ್ಕವಿಲ್ಲ.

ಮತ್ತೊಂದು ಬದಿಯಲ್ಲಿ ನಡೆದುಕೊಂಡಾದರೆ ಸುತ್ತಿ ಬಳಸಿ ಪೆರುವಾಜೆ, ಬೆಳ್ಳಾರೆಗೆ ಹೋಗಬಹುದಷ್ಟೆ. ಇಲ್ಲಿಂದ ಶಾಲಾ, ಕಾಲೇಜುಗಳಿಗೆ ಹೋಗುವ ಹಲವು ವಿದ್ಯಾರ್ಥಿಗಳಿದ್ದಾರೆ. ಮೊದಲಾದರೆ ಇವರೆಲ್ಲಾ ರಿಕ್ಷಾಗಳ ಮೂಲಕ ತೆರಳುತ್ತಿದ್ದರು. ಈಗ ನಡೆದುಕೊಂಡೇ ಶಾಲೆ, ಕಾಲೇಜುಗಳಿಗೆ ಸೇರಬೇಕಾಗಿದೆ.ಈ ಭಾಗದಲ್ಲಿ ಹಲವು ಜೀಪು, ರಿಕ್ಷಾ, ಬೈಕ್, ಸ್ಕೂಟಿ ಸಹಿತ ವಾಹನಗಳಿವೆ. ಈಗ ರಸ್ತೆ ಬಂದ್ ಆದ ಕಾರಣ ಈ ವಾಹನಗಳ ಓಡಾಟ ಸಾಧ್ಯವಾಗದೆ ಮನೆಗಳ ಆವರಣದಲ್ಲೇ ನಿಂತಿದೆ. ಕೆಲವೊಂದು ದ್ವಿಚಕ್ರ ವಾಹನಗಳನ್ನು ಹಗ್ಗ ಕಟ್ಟಿ ಅವುಗಳ ಮೂಲಕ ಮತ್ತೊಂದು ಕಡೆಗೆ ಸಾಗಿಸುವ ಪ್ರಯತ್ನ ಮಾಡಲಾಗಿದೆ. ಒಂದು ಮನೆಯವರು ಬದುಕಿಗಾಗಿ ಹೊಸದಾಗಿ ರಿಕ್ಷಾ ಖರೀದಿಸಿದ್ದು, ರಿಕ್ಷಾ ಮನೆಯಲ್ಲೇ ಬಾಕಿಯಾದ ಕಾರಣ ಬಾಡಿಗೆ ಮಾಡಲು ಸಾಧ್ಯವಾಗದೇ ಸಂಕಷ್ಟ ಎದುರಿಸುವಂತಾಗಿದೆ.ವೃದ್ಧರೂ ಸೇರಿದಂತೆ ಈ ಮನೆಗಳ ಒಂದಷ್ಟು ಮಂದಿ ಕಾಯಿಲೆಯಿಂದ ಬಳಲುತ್ತಿದ್ದು ಇವರನ್ನು ಆಸ್ಪತ್ರೆಗೆ ಸಾಗಿಸಲು ಕೂಡಾ ಅಡ್ಡಿಯಾಗಿದೆ. ತುರ್ತು ಸಂದರ್ಭದಲ್ಲಿ ಆಂಬ್ಯುಲೆನ್ಸ್ ಬರಲು ಕೂಡಾ ದಾರಿ ಇಲ್ಲ. ಇಲ್ಲಿಯ ಮನೆಯೊಂದರಲ್ಲಿ ಜೂ.೪ ಕ್ಕೆ ಮದುವೆಯೊಂದು ನಿಗದಿಯಾಗಿತ್ತು. ಅಂಗಾರ ಎಂಬವರ ಇಬ್ಬರು ಪುತ್ರರಿಗೆ ವಿವಾಹ ನಿಗದಿಯಾಗಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾದ ಹಿನ್ನಲೆಯಲ್ಲಿ ಈ ಮನೆಯಲ್ಲಿ ನಿಗದಿಯಾಗಿದ್ದ ಮದುವೆಯನ್ನು ಮತ್ತೊಂದು ಊರಿನ ಮನೆಗೆ ಸ್ಥಳಾಂತರ ಮಾಡಲಾಗಿದೆ.ಇದೇ ಪ್ರದೇಶದ ಮತ್ತೊಂದು ಮನೆಯಲ್ಲಿ ಮದುವೆ ಕಾರ್ಯಕ್ರಮ ಕಳೆದ ವಾರವಷ್ಟೇ ಮುಗಿದಿದ್ದು, ಮರುದಿನವೇ ಈ ಅವಘಡ ಸಂಭವಿಸಿದ ಕಾರಣ , ಸಮಾರಂಭಕ್ಕೆ ಬಂದಿದ್ದ ಶಾಮಿಯಾನ, ಕುರ್ಚಿ ಸಹಿತ ಸಾಮಾನುಗಳು ವಾಪಾಸ್ ಹೋಗಲಾಗದೆ ಬಾಕಿಯಾಗಿ ನಿಂತಿದೆ. ಇಲ್ಲಿನ ಮನೆಯವರು ದಿನಸಿ ಸಾಮಾನುಗಳನ್ನು ತರಲು ಕೂಡಾ ಸಂಕಷ್ಟ ಪಡುವಂತಾಗಿದೆ. ಹೀಗೇ ಒಂದೊಂದು ಮನೆಯವರು ಒಂದೊಂದು ಸಮಸ್ಯೆ ಎದುರಿಸುತ್ತಿದ್ದು, ಆಡಳಿತ ಈ ಸಮಸ್ಯೆ ಮನಗಂಡು ಪರಿಹಾರ ಒದಗಿಸಬೇಕೆಂಬುದು ಇವರ ಬೇಡಿಕೆಯಾಗಿದೆ.

........................ಇಲ್ಲಿ ಸಂಭವಿಸಿದ್ದು ವಯನಾಡನ್ನು ನೆನಪಿಸುವಂತಹ ದೊಡ್ಡ ಅವಘಡ. ಇಲ್ಲಿನ ಮನೆಯವರು ಬದುಕು ನಡೆಸಲು ಕಷ್ಟ ಪಡುವಂತಾಗಿದೆ. ಇದಕ್ಕೆ ಪರಿಹಾರ ಪಂಚಾಯಿತಿ ಮಟ್ಟದಲ್ಲಿ ಕಷ್ಟ ಸಾಧ್ಯ. ಹೀಗಾಗಿ ಜಿಲ್ಲಾಡಳಿತ, ಶಾಸಕರು, ಸರಕಾರ ಗಮನ ಹರಿಸಬೇಕು.

-ಜಗನ್ನಾಥ ಪೂಜಾರಿ, ಮುಕ್ಕೂರು, ಪೆರುವಾಜೆ ಗ್ರಾ.ಪಂ. ಅಧ್ಯಕ್ಷ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ