ನವಲಿ:
ಹೌದು. ನವಲಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆಟದ ಮೈದಾನ ಮಳೆ ಬಂದರೆ ಜಲಾವೃತವಾಗುತ್ತದೆ. ಇದರಿಂದ ಮಕ್ಕಳು ನೀರಿನಲ್ಲಿ ನಡೆದುಕೊಂಡು ಹೋಗಿ ಪಾಠ ಆಲಿಸಬೇಕು. ಮಳೆಗಾಲ ಮುಗಿಯುವರೆಗೂ ಇವರಿಗೆ ಆಟೋಟಗಳಿಂದ ದೂರವೇ ಇರುವಂತೆ ಆಗುತ್ತದೆ.
ಗ್ರಾಮದಲ್ಲಿ ಮಳೆಯಾದರೆ ತಗ್ಗು ಪ್ರದೇಶಗಳಿಂದ ಹರಿದು ಬರುವ ನೀರು ಶಾಲಾ ಆವರಣದೊಳಗೆ ನುಗ್ಗುತ್ತದೆ. ಹೀಗಾಗಿ ಕ್ಷಣ ಮಾತ್ರದಲ್ಲಿಯೇ ಜಲಾವೃತವಾಗುತ್ತಿದೆ. ಇದರಿಂದ ಶಾಲಾ ಕೊಠಡಿಯೊಳಗೆ ಹೋಗಲು ಹರಸಾಹಸಪಡಬೇಕು. ಕೆಲ ಸಂದರ್ಭದಲ್ಲಿ ಜಾರಿಬಿದ್ದು ಪಠ್ಯಪುಸ್ತಕಗಳೆಲ್ಲವೂ ತೋಯ್ದ ಉದಾಹರಣೆಯೂ ಇದೆ. ದೊಡ್ಡ ಹೊಂಡಗಳಿಗೆ ಮೊರಂ ಹಾಕಿ ಅಲ್ಪ ಪ್ರಮಾಣದಲ್ಲಿ ಮುಚ್ಚಲಾಗಿದೆ. ಆದರೂ ಸಹ ಅಪಾರ ಪ್ರಮಾಣದ ನೀರು ನಿಂತುಕೊಳ್ಳುತ್ತದೆ.ಪ್ರಾರ್ಥನೆಗೂ ಸ್ಥಳಾವಕಾಶವಿಲ್ಲ:
ಮಳೆ ಬಂದಾಗ ಶಾಲೆಯಲ್ಲಿ ಪ್ರಾರ್ಥನೆಗೂ ಸ್ಥಳಾವಕಾಶವೂ ಇಲ್ಲ. ಹೀಗಾಗಿ ಕೊಠಡಿಯೊಳಗೆ ಪ್ರಾರ್ಥನೆ ಸಲ್ಲಿಸಬೇಕಾದ ಅನಿವಾರ್ಯ ಶಿಕ್ಷಕರಿಗೆ ಎದುರಾಗಿದೆ. ಶಾಲಾ ಆವರಣದೊಳಗೆ ನುಗ್ಗುವ ನೀರನ್ನು ತಡೆಹಿಡಿಯಬೇಕು. ಇಲ್ಲದಿದ್ದರೆ ಈ ವರ್ಷವೂ ಮಕ್ಕಳು ಮಳೆಗಾಲ ಮುಗಿಯುವ ವರೆಗೂ ಕೊಠಡಿಯೊಳಗೆ ಕಾಲ ಕಳೆಯಬೇಕಾಗುತ್ತದೆ.ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಶಾಲಾ ಆವರಣದೊಳಗೆ ಹರಿದು ಬರುವ ನೀರಿಗೆ ತಡೆವೊಡ್ಡಬೇಕಾಗಿದೆ.