ಆರ್‌ಸಿಬಿ ದುರಂತ: ಸಿಎಂ, ಡಿಸಿಎಂ, ಗೃಹ ಸಚಿವರ ವಿರುದ್ಧವೇ ಕೇಸು ದಾಖಲಿಸಲು ದ.ಕ. ಬಿಜೆಪಿ ಆಗ್ರಹ

KannadaprabhaNewsNetwork |  
Published : Jun 10, 2025, 02:33 AM IST
ಸಿಎಂ, ಡಿಸಿಎಂ, ಗೃಹ ಸಚಿವರ ಭಾವಚಿತ್ರ ದಹಿಸಿ ಮಂಗಳೂರಲ್ಲಿ ದ.ಕ. ಬಿಜೆಪಿ ಪ್ರತಿಭಟನೆ  | Kannada Prabha

ಸಾರಾಂಶ

ಬೆಂಗಳೂರು ಕಾಲ್ತುಳಿತ ಪ್ರಕರಣದಲ್ಲಿ ಸಿಎಂ, ಡಿಸಿಎಂ, ಗೃಹಸಚಿವರು ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ಮಂಗಳೂರು ಪಿವಿಎಸ್‌ ವೃತ್ತದ ಬಳಿ ಪ್ರತಿಭಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಬೆಂಗಳೂರಿನಲ್ಲಿ ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ದುರಂತಕ್ಕೆ ರಾಜ್ಯ ಕಾಂಗ್ರೆಸ್‌ ಸರ್ಕಾರವೇ ನೇರ ಹೊಣೆಯಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌, ಗೃಹ ಸಚಿವ ಡಾ. ಪರಮೇಶ್ವರ್‌ ರಾಜಿನಾಮೆ ನೀಡಬೇಕು. ಈ ಪ್ರಕರಣದಲ್ಲಿ ಸಿಎಂ, ಡಿಸಿಎಂ, ಗೃಹ ಸಚಿವರನ್ನು ಕ್ರಮವಾಗಿ ಎ1, ಎ2, ಎ3 ಆರೋಪಿಗಳನ್ನಾಗಿ ಎಫ್‌ಐಆರ್‌ ದಾಖಲಿಸಬೇಕು ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್‌ ಆಗ್ರಹಿಸಿದರು.

ಬೆಂಗಳೂರು ಕಾಲ್ತುಳಿತ ಪ್ರಕರಣದಲ್ಲಿ ಸಿಎಂ, ಡಿಸಿಎಂ, ಗೃಹಸಚಿವರು ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ನಗರದ ಪಿವಿಎಸ್‌ ವೃತ್ತದ ಬಳಿ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.ವಿಜಯೋತ್ಸವ ಕಾರ್ಯಕ್ರಮಕ್ಕೆ ಬನ್ನಿ, ಭಾಗವಹಿಸಿ ಎಂದು ಸಿದ್ದರಾಮಯ್ಯ ಅವರೇ ಸಾಮಾಜಿಕ ಜಾಲತಾಣದಲ್ಲಿ ಕರೆ ನೀಡಿದ್ದರು. ರಾಜಕೀಯ ಕಾರಣಕ್ಕಾಗಿ ವಿಜಯೋತ್ಸವ ಏರ್ಪಡಿಸಿದ್ದರು. ಜನರನ್ನು ಬನ್ನಿ ಎಂದು ಕರೆದು ಲಾಠಿಚಾರ್ಜ್‌ ಮಾಡಿದ್ದಾರೆ. ಘಟನೆ ನಡೆದ ಬಳಿಕ ಪೊಲೀಸ್‌ ಅಧಿಕಾರಿಗಳ ಮೇಲೆ ದೋಷಾರೋಪಣೆ ಮಾಡಿ ಅಮಾನತು ಮಾಡಿದ್ದಾರೆ. ಪಹಲ್ಗಾಮ್‌ ಘಟನೆಗೆ ಪ್ರಧಾನ ಮಂತ್ರಿ ರಾಜಿನಾಮೆ ಕೇಳಿದ ಸಿದ್ದರಾಮಯ್ಯ ಅವರು ಬೆಂಗಳೂರು ಕಾಲ್ತುಳಿತ ಪ್ರಕರಣದ ಹೊಣೆ ಹೊತ್ತು ರಾಜಿನಾಮೆ ನೀಡಲೇಬೇಕು ಎಂದರು.ವಿಜಯೋತ್ಸವಕ್ಕೆ ಯಾವುದೇ ಪೂರ್ವ ಸಿದ್ಧತೆ ನಡೆಸಿರಲಿಲ್ಲ. ಮೊದಲ ಪಾಸ್‌ ನೀಡುತ್ತೇವೆ ಎಂದು ಹೇಳಿದ್ದರು. ಬಳಿಕ ಉಚಿತ ಪ್ರವೇಶ ಎಂದಿದ್ದರು. ಗೊಂದಲದಿಂದ ಕಾಲ್ತುಳಿತ ಉಂಟಾಗಿದೆ. ಸರ್ಕಾರದ ತೆವಲಿಗೆ ಅಮಾಯಕರು ಬಲಿಯಾಗಬೇಕಾಯಿತು ಎಂದು ಶಾಸಕ ವೇದವ್ಯಾಸ್‌ ಕಾಮತ್‌ ಆಕ್ರೋಶ ವ್ಯಕ್ತಪಡಿಸಿದರು.ಪೊಲೀಸರನ್ನೂ ಸರ್ಕಾರ ಕೈಹಿಡಿಯದು:

ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್‌ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಹೇಗಿದೆ ಎಂಬುದಕ್ಕೆ ಬೆಂಗಳೂರು ಕಾಲ್ತುಳಿತ ಪ್ರಕರಣ ಸಾಕ್ಷಿಯಾಗಿದೆ. ಸಿದ್ದರಾಮಯ್ಯ, ಡಿಕೆಶಿ ಅವರು ಆತುರದ ನಿರ್ಧಾರ ಕೈಗೊಂಡು ಅಮಾಯಕರನ್ನು ಬಲಿ ಪಡೆದಿದ್ದಾರೆ. ಕಾರ್ಯಕ್ರಮ ನಡೆಸಲು ಸಾಧ್ಯವಿಲ್ಲ ಎಂದು ಪೊಲೀಸ್‌ ಇಲಾಖೆ ಹೇಳಿದ್ದರೂ, ಸಿಎಂ, ಡಿಸಿಎಂ, ಗೃಹ ಸಚಿವರ ಕುಟುಂಬಸ್ಥರು ಆರ್‌ಸಿಬಿ ಆಟಗಾರರ ಜತೆ ಸೆಲ್ಫಿ ತೆಗೆದುಕೊಳ್ಳಲು ತರಾತುರಿಯಲ್ಲಿ ವಿಜಯೋತ್ಸವ ನಡೆಸಿದ್ದಾರೆ ಎಂದು ಆರೋಪಿಸಿದರು.ಬೆಂಗಳೂರು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್‌ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ದಕ್ಷಿಣ ಕನ್ನಡದಲ್ಲಿ ಪೊಲೀಸರು ಅಮಾಯಕರ ಮನೆಗಳಿಗೆ ರಾತ್ರಿ ವೇಳೆ ತೆರಳಿ ಪೋಟೋ ತೆಗೆಯುತ್ತಿದ್ದಾರೆ. ಮುಂದಕ್ಕೆ ದಕ್ಷಿಣ ಕನ್ನಡ ಪೊಲೀಸರನ್ನೂ ಕಾಂಗ್ರೆಸ್‌ ಸರ್ಕಾರ ಕೈಹಿಡಿಯದು ಎಂಬುದನ್ನು ಪೊಲೀಸರು ಅರ್ಥ ಮಾಡಿಕೊಳ್ಳಬೇಕು ಎಂದು ಸತೀಶ್‌ ಕುಂಪಲ ಹೇಳಿದರು.ವಿಧಾನ ಪರಿಷತ್‌ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ, ಯತೀಶ್‌ ಆರ್ವಾರ್‌, ಮಂಡಲ ಅಧ್ಯಕ್ಷ ರಮೇಶ್‌ ಕಂಡೆಟ್ಟು, ರಾಜೇಶ್‌ ಕೊಟ್ಟಾರಿ, ಜಗದೀಶ್‌ ಆಳ್ವ ಕುವೆತ್ತಬೈಲ್‌, ಪ್ರಮುಖರಾದ ನಿತಿನ್‌ ಕುಮಾರ್‌, ರವಿಶಂಕರ ಮಿಜಾರ್‌, ಸುಧೀರ್‌ ಶೆಟ್ಟಿ ಕಣ್ಣೂರು, ರವೀಂದ್ರ ಶೆಟ್ಟಿ ಉಳಿದೊಟ್ಟು, ಸಂತೋಷ್‌ ಕುಮಾರ್‌ ರೈ ಬೋಳಿಯಾರ್‌, ಭಾಸ್ಕರಚಂದ್ರ ಶೆಟ್ಟಿ, ವಿಜಯಕುಮಾರ್‌ ಶೆಟ್ಟಿ, ರಾಮ ಅಮೀನ್‌ ಪಚ್ಚನಾಡಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ನಂದನ್‌ ಮಲ್ಯ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಂಜುಳಾ ರಾವ್‌ ಭಾಗವಹಿಸಿದ್ದರು.ಈ ವೇಳೆ ಸಿಎಂ, ಡಿಸಿಎಂ, ಗೃಹ ಸಚಿವರ ಭಾವಚಿತ್ರ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ