ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
2028ಕ್ಕೆ ಹಿಂದೂ ಸರ್ಕಾರ ಬರಲಿದೆ. ಆಗ ನಾನೇ ಸಿಎಂ ಆಗುತ್ತೇನೆ. 11 ಜೆಸಿಬಿಗಳೊಂದಿಗೆ ವಿಧಾನಸೌಧದ ಮುಂದೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುತ್ತೇನೆ ಎಂದು ಮುಖ್ಯಮಂತ್ರಿ ಆಗುವ ಇಂಗಿತವನ್ನು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯಕ್ತ ಪಡಿಸಿದರು.ತಾಲೂಕಿನ ಆವಲಗುರ್ಕಿ ಪಂಚಾಯಿತಿ ವ್ಯಾಪ್ತಿಯ ಕವರನಹಳ್ಳಿ ಬಳಿ ಹರಿಕೃಷ್ಣ ಫೌಂಡೇಶನ್ ವತಿಯಿಂದ ಭಾನುವಾರ ನಡೆದ ತಿಪ್ಪೇನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಸುಮಾರು ಐದು ನೂರು ಬಡ ಕುಟುಂಬಗಳಿಗೆ ಗೋದಾನ (ಹಸುಗಳವಿತರಣೆ)ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಹಿಂದೂ ಸರ್ಕಾರ ತೆಗೆದುಕೊಂಡು ಬರುತ್ತೇನೆ, ವಿಧಾನಸೌಧದ ಮುಂದೆ ಜೆಸಿಬಿ ನಿಲ್ಲಿಸುತ್ತೇನೆ, ಗಣೇಶನ ಮೆರವಣಿಗೆ ಮೇಲೆ ಕಲ್ಲು ತೂರಿದವರ ಮನೆಗಳು ಡಮಾರ್ ಆಗುತ್ತವೆ ಎಂದು ಹೇಳಿದರು.2028ರಲ್ಲಿ ಜೆಸಿಬಿಗೆ ಮತ, ಹಿಂದೂಗಳಿಗೆ ಹಿತ, ನಮ್ಮ ಸರ್ಕಾರದಲ್ಲಿ ಮಸೀದಿ ಮುಂದೆ ಕುಣಿಯಲು ಆದ್ಯತೆ ನೀಡುವ ಜತೆಗೆ ಡಿಜೆಗೆ ಅನುಮತಿ ನೀಡಲಾಗುವುದು ಎಂದರು.
ರಾಜ್ಯದಲ್ಲಿ ಟಿಪ್ಪು, ಔರಂಗಜೇಬ್ ಸರ್ಕಾರ:ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಿದವರ ಮೇಲೆ ಯಾವುದೇ ಪ್ರಕರಣ ದಾಖಲಿಸಿಲ್ಲ. ಆದರೆ, ಮುಸ್ಲಿಂ ಹಬ್ಬದ ವೇಳೆ ಗಲಾಟೆಯಾದರೆ ಮೊದಲಿಗೆ ಹಿಂದೂಗಳ ಮೇಲೆ ಪ್ರಕರಣ ದಾಖಲಿಸುತ್ತಾರೆ. ಇದು ಸಿಎಂ ಸಿದ್ದರಾಮಯ್ಯನವರ ನಡತೆ ಎಂದು ಕಿಡಿಕಾರಿದರು.
ಕಳೆದ ಮೂರು ವರ್ಷದಿಂದ ರಾಜ್ಯದಲ್ಲಿ ಟಿಪ್ಪು ಸುಲ್ತಾನ್ ಹಾಗೂ ಔರಂಗಜೇಬ್ ಸರ್ಕಾರ ನಡೆಯುತ್ತಿದೆ. ಇದು ಸಾಬರ (ಮುಸ್ಲಿಂ) ಸರ್ಕಾರವಾಗಿದ್ದು, ಹಿಂದೂಗಳು ಒಂದಾಗದಿದ್ದರೆ ಉಳಿಗಾಲವಿಲ್ಲ. ಎಲ್ಲರಿಗೂ ಸಮಾನತೆ ನೀಡಿದ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವನ್ನು ಹಿಂದೂಗಳು ಮನೆಯಲ್ಲಿ ಹಾಕಿಕೊಳ್ಳಬೇಕೆಂದು ಕರೆ ನೀಡಿದರು.ಹಾಲುಮತ ಸಮಾಜದವರು ಪೇಟ ಹಾಕಿ ಸನ್ಮಾನಿಸಲು ಹೋದರೆ ಕಿತ್ತು ಹಾಕಿದ ಸಿದ್ದರಾಮಯ್ಯ, ಮುಸ್ಲಿಂರ ಟೋಪಿ ಹಾಕಿಸಿಕೊಂಡು ಅಪ್ಪಿಕೊಂಡರು. ಗೃಹಸಚಿವ ಪರಮೇಶ್ವರ ನಿಷ್ಕ್ರಿಯ ಸಚಿವರಾಗಿದ್ದು ರಾಜ್ಯದ ಸೌಹಾರ್ದತೆಯ ಬಗ್ಗೆ ಸ್ವಲ್ಪವೂ ಅರಿವಿಲ್ಲ. ವಿಧಾನಸೌಧದಲ್ಲಿ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಾಗಿ ಮುಸ್ಲಿಮರೇ ನೇಮಕಗೊಂಡಿದ್ದು, ಹಿಂದೂಗಳನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದರು.
ನನ್ನ ಸಿಎಂ ಆಗುವ ಹೇಳಿಕೆಯನ್ನು ಸಂಜೆ ಮಾಧ್ಯಮಗಳು ಯತ್ನಾಳ್ ಸಿಎಂ ಆಗುವುದು ಸಾಧ್ಯವೇ ಎಂದು ಚರ್ಚೆ ನಡೆಸುತ್ತವೆ. ಇದರಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಡೆಯಿಂದ ಸಂಪಾದಕರಿಗೆ ಕರೆ ಬರುತ್ತದೆ. ಕೊನೆಯಲ್ಲಿ ರಾಜಾಹುಲಿ ಮಗ ಮರಿ ರಾಜಾಹುಲಿ ಸಿಎಂ ಆಗುವ ಸಾಧ್ಯತೆ ಅಂತ ತೀರ್ಪು ಕೊಡ್ತಾರೆ. ನಾನು ಮಾತಾಡೋದನ್ನು ಎಡಿಟ್ ಮಾಡೋ ಕಳ್ಳರು ಇದ್ದಾರೆ ಎಂದು ಮಾಡಿದರು.ಶಾಸಕ ಪ್ರದೀಪ್ ಈಶ್ವರ್ ಬಗ್ಗೆ ಲೇವಡಿ:
ನನ್ನ ಮೇಲೆ 72 ಪ್ರಕರಣಗಳನ್ನು ದಾಖಲಿಸಿದ್ದಾರೆ. ನಾನು ದೇಶ, ಹಿಂದೂ ಧರ್ಮದ ಪರವಾಗಿ ಮಾತನಾಡುತ್ತಿದ್ದೇನೆ. ಯತ್ನಾಳ್ ಕೆಟ್ಟ ಕೆಲಸ ಮಾಡುವುದಿಲ್ಲ. ದೇಶ ಮತ್ತು ಹಿಂದೂ ಧರ್ಮದ ಪರವಾಗಿ ಮಾತನಾಡುತ್ತಾನೆ ಎಂದು ನ್ಯಾಯಾಲಯಗಳಿಗೂ ಗೊತ್ತು. ನ್ಯಾಯಾಲಯಗಳು ಇಲ್ಲದಿದ್ದರೆ ನಾವು ಕಾಯಂ ಜೈಲಿನಲ್ಲಿಯೇ ಇರಬೇಕಾಗಿತ್ತು ಎಂದರು.ಸದ್ಯ ಗೋ ಹಂತಕರ ಸರ್ಕಾರಗಳು ಬರ್ತಿವೆ. ಗೋವು ರಾಷ್ಟ್ರೀಯ ಚಿನ್ಹೆ ಆಗದ ಹೊರತು ಗೋವುಗಳಿಗೆ ಉಳಿಗಾಲ ಇಲ್ಲ. ಉತ್ತರ ಪ್ರದೇಶದ ಯೋಗಿ ಸರ್ಕಾರದ ರೀತಿಯಲ್ಲಿ ರಾಜ್ಯದಲ್ಲಿ ಹಿಂದೂಗಳ ಜೆಸಿಬಿ ಸರ್ಕಾರ ಬರುತ್ತದೆ. ಆಗ ನಾನೇ ಮುಖ್ಯಮಂತ್ರಿಯಾಗಿ ಹಿಂದೂಗಳ ರಕ್ಷಣೆಗೆ ಟೊಂಕ ಕಟ್ಟಿ ನಿಲ್ಲುವೆ ಎಂದರು.
ಮೊದಲು ಸರ್ಕಸ್, ನಾಟಕದಲ್ಲಿ ಜೋಕರ್ ಗಳನ್ನು ನೋಡುತ್ತಿದ್ದೆವು. ಈಗ ವಿಧಾನಸೌಧಕ್ಕೆ ಬಂದಿದ್ದಾರೆ, ಟಿವಿ ಚಾನೆಲ್ ಗಳು ಈ ಜೋಕರ್ ಗಳನ್ನು ಕರೆಸಿಕೊಂಡು ಚರ್ಚೆ ಮಾಡ್ತಾರೆ. ಚಿಕ್ಕಬಳ್ಳಾಪುರದ ಜನ ಮುತ್ತು ರತ್ನನ ಆಯ್ಕೆ ಮಾಡಿದ್ದೀರಿ, ಈ ಮುತ್ತು ಮುಂದಿನ ಸಲ ಬಿಜಾಪುರದಲ್ಲಿ ನನ್ನ ವಿರುದ್ಧ ನಿಲ್ತಾನಂತೆ. ಮುಂದಿನ ಸಲ ಈ ಮುತ್ತಿನ ರತ್ನಗೆ ಚಿಕ್ಕಬಳ್ಳಾಪುರದಲ್ಲಿ ಡೆಪಾಸಿಟ್ ಕೂಡ ಬರೋದಿಲ್ಲ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಹೆಸರೇಳದೆ ಅವರ ವಿರುದ್ಧ ವಾಗ್ದಾಳಿ ನಡೆಸಿದರು.ಗಾಂಧಿ, ನೆಹರು ವಿರುದ್ಧವೂ ಕಿಡಿ:
ಬಾಬಾ ಸಾಹೇಬರು ದೇಶ ವಿಭಜನೆ ಆದಾಗ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಲಿ, ಪಾಕಿಸ್ತಾನದ ಹಿಂದೂ ಭಾರತಕ್ಕೆ ಬರಲಿ ನಂತರ ದೇಶ ವಿಭಜನೆ ಮಾಡೋಣ ಅಂತ ಹೇಳಿದ್ದರು. ಆದರೆ ಅಧಿಕಾರ ಹಿಡಿಯಲು ದೇಶವನ್ನು ಒಡೆದು ಒಬ್ಬ ಪ್ರಧಾನಿ ಆದ, ಮತ್ತೊಬ್ಬ ರಾಷ್ಟ್ರಪಿತ ಆದ ಎಂದು ಗಾಂಧಿ, ನೆಹರು ವಿರುದ್ಧವೂ ಕಿಡಿ ಕಾರಿದರು.ಅಂಬೇಡ್ಕರ್ ನಿಧನರಾದಾಗ ಅವರ ಪಾರ್ಥೀವ ಶರೀರ ಸಾಗಿಸುವುದಕ್ಕೆ ಕಾಂಗ್ರೆಸ್ ವಿಮಾನದ ವ್ಯವಸ್ಥೆ ಮಾಡಲಿಲ್ಲ. ಆಗ ಬಾಬಾ ಸಾಹೇಬರ ಕಾರು ಮಾರಿ ಅಂತ್ಯಕ್ರಿಯೆ ಮಾಡಲಾಯಿತು. ಭಾರತದಲ್ಲಿ ಮುಸ್ಲಿಮರು ಇರುವವರೆಗೂ ಶಾಂತಿ ಇರಲ್ಲ. ಹಿಂದೂಗಳು ಎಂದಾದರೂ ಮುಸ್ಲಿಮರ ಹಬ್ಬದ ಮೆರವಣಿಗೆಯಲ್ಲಿ ಕಲ್ಲು ಹೊಡೆದಿದ್ದಾರಾ ಎಂದು ಪ್ರಶ್ನಿಸಿದರು. ನಾವು ಡಿಜೆ ಹಾಕಿದರೆ ಕೇಸ್ ಹಾಕುತ್ತೀರಿ, ಹಾಗಾದರೆ ದಿನಕ್ಕೆ ಐದು ಬಾರಿ ನಮಾಜ್ ಮಾಡಿದಾಗ, ಡಿಜೆ ಹಾಕಿದಾಗ ಏನು ಮಾಡಿದ್ದೀರಿ, ರಾಜ್ಯದಲ್ಲಿ ಸಾಬರ ಸರ್ಕಾರ ಇದೆ, ಕುಂಕುಮ ಹಚ್ಚೋಕೆ ಸಿದ್ದರಾಮಯ್ಯ ಹಿಂಜರಿಯುತ್ತಾರೆ. 2028ಕ್ಕೆ ಸನಾತನ ಧರ್ಮ ಉಳಿಯವ ಸರ್ಕಾರ ಬರಬೇಕು. ಹಿಂದೂಗಳ ಕುಂಕುಮ ಉಳಿಯಬೇಕು. ಹಿಂದೂ ಮುಸ್ಲಿಂ ಬಾಯಿ ಬಾಯಿ ಅಂತಾರೆ. ಮುಸ್ಲಿಮರು ಶೇ. 50ರಷ್ಟು ಆದರೆ ಹಿಂದೂಗಳ ಪರಿಸ್ಥಿತಿ ಊಹಿಸುವುದು ಅಸಾಧ್ಯ. ಕಾಂಗ್ರೆಸ್ ನಾಯಕರು ಬಿಜೆಪಿಯ ಕೆಲವರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಈ ವೇಳೆ ಹರಿಕೃಷ್ಣ ಫೌಂಡೇಶನ್ ಅಧ್ಯಕ್ಷ ಹರೀಶ್.ಕೆ.ರೆಡ್ಡಿ ವತಿಯಿಂದ ಸುಮಾರು 500 ಕುಟುಂಬಗಳಿಗೆ ಹಸುಗಳನ್ನು ಮತ್ತು ಮೂರು ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ಸೀರೆಗಳನ್ನು ವಿತರಿಸಲಾಯಿತು.ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಬ್ರಹ್ಮಾಂಡ ಗುರೂಜಿ ನರೇಂದ್ರ, ಮತ್ತಿತರರು ಇದ್ದರು.
----------