ಸಾತನೂರು ಬೆಟ್ಟದಲ್ಲಿ ಭಾರೀ ದನಗಳ ಜಾತ್ರೆ ಯಶಸ್ವಿ

KannadaprabhaNewsNetwork |  
Published : May 23, 2024, 01:06 AM IST
೨೨ಕೆಎಂಎನ್‌ಡಿ-೧ಮಂಡ್ಯ ತಾಲೂಕು ಸಾತನೂರು ಬೆಟ್ಟದಲ್ಲಿ ನಡೆದ ಭಾರೀ ದನಗಳ ಜಾತ್ರೆಯಲ್ಲಿ ಗಮನಸೆಳೆದ ಪಾಂಡವಪುರ ತಾಲೂಕು ತಿಮ್ಮನಕೊಪ್ಪಲು ಗ್ರಾಮದ ಕೆಂಪೇಗೌಡರಿಗೆ ಸೇರಿದ ೮.೫ ಲಕ್ಷ ರು. ಮೌಲ್ಯದ ಎತ್ತುಗಳು. | Kannada Prabha

ಸಾರಾಂಶ

ಸಾತನೂರು ಬೆಟ್ಟದಲ್ಲಿ ನಡೆದ ಜಾತ್ರೆಗೆ ಹಾವೇರಿ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ೩೫೬ ದನಗಳು ಭಾಗವಹಿಸಿದ್ದವು. ೫೬ ಜೋಡಿಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದವು. ಹಾಲು ಹಲ್ಲು, ಎರಡು ಹಲ್ಲು, ನಾಲ್ಕು ಹಲ್ಲು, ಆರು ಹಲ್ಲು, ಕಡೇ ಹಲ್ಲುಗಳನ್ನು ನೋಡಿ ಬಹುಮಾನಕ್ಕೆ ಆಯ್ಕೆ ಮಾಡಲಾಯಿತು. ಹಸುಗಳಲ್ಲೂ ಇದೇ ಮಾದರಿಯನ್ನು ಅನುಸರಿಸಲಾಯಿತು.

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಸಾತನೂರು ಬೆಟ್ಟದಲ್ಲಿ ಶ್ರೀಕಂಬದ ನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಪ್ರಯುಕ್ತ ಆಯೋಜಿಸಿದ್ದ ಭಾರೀ ದನಗಳ ಜಾತ್ರೆ ಯಶಸ್ವಿಯಾಗಿ ನಡೆಯಿತು.

ಜಾತ್ರೆಗೆ ಹಾವೇರಿ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ೩೫೬ ದನಗಳು ಭಾಗವಹಿಸಿದ್ದವು. ೫೬ ಜೋಡಿಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದವು. ಹಾಲು ಹಲ್ಲು, ಎರಡು ಹಲ್ಲು, ನಾಲ್ಕು ಹಲ್ಲು, ಆರು ಹಲ್ಲು, ಕಡೇ ಹಲ್ಲುಗಳನ್ನು ನೋಡಿ ಬಹುಮಾನಕ್ಕೆ ಆಯ್ಕೆ ಮಾಡಲಾಯಿತು. ಹಸುಗಳಲ್ಲೂ ಇದೇ ಮಾದರಿಯನ್ನು ಅನುಸರಿಸಲಾಯಿತು.

ಚಾಂಪಿಯನ್ ಜೋಡಿಗೆ ೨೦ ಸಾವಿರ ರು., ಪ್ರಥಮ-೧೫ ಸಾವಿರ ರು., ದ್ವಿತೀಯ-೧೦ ಸಾವಿರ ರು., ತೃತೀಯ-೫ ಸಾವಿರ ರು.ಗಳನ್ನು ಬಹುಮಾನವಾಗಿ ನೀಡಲಾಯಿತು. ಜಾತ್ರೆಯಲ್ಲಿ ಆಕರ್ಷಣೀಯವಾಗಿ ಹಾಕಲಾಗಿದ್ದ ಚಪ್ಪರಕ್ಕೆ ೩ ಸಾವಿರ ರು. ಪ್ರಥಮ, ೨ ಸಾವಿರ ರು. ದ್ವಿತೀಯ ಹಾಗೂ ೧ ಸಾವಿರ ರು. ತೃತೀಯ ಬಹುಮಾನ ನೀಡಿದ್ದು ವಿಶೇಷವಾಗಿತ್ತು.

ಜಾತ್ರೆಗೆ ಬಂದಿದ್ದ ದನಗಳು ಮತ್ತು ಹಸುಗಳಿಗೆ ಕುಡಿಯುವ ನೀರು, ಮೇವು, ನೆರಳಿನ ವ್ಯವಸ್ಥೆ, ಹೊರ ಜಿಲ್ಲೆಗಳಿಂದ ಬಂದವರಿಗೆ ಊಟ, ತಿಂಡಿ ವ್ಯವಸ್ಥೆಯನ್ನು ದೇವಸ್ಥಾನದ ಆಡಳಿತ ಮಂಡಳಿಯವರು ಅಚ್ಚುಕಟ್ಟಾಗಿ ಮಾಡಿದ್ದರು.

ಅಧ್ಯಕ್ಷ ಎಸ್.ಪಿ.ಮಹೇಶ್, ಕಾರ್ಯದರ್ಶಿ ವಕೀಲ ಶ್ರೀಕಾಂತ್, ಸುರೇಶ್, ನರಸಿಂಹರಾಜು, ಯೋಗರಾಜು ಮತ್ತು ಎಸ್‌ಎಲ್‌ಎನ್ ಯುವಕರ ಬಳಗದ ನೇತೃತ್ವದಲ್ಲಿ ದನಗಳ ಜಾತ್ರೆ ಅದ್ಧೂರಿಯಾಗಿ ನಾಲ್ಕು ದಿನಗಳ ಕಾಲ ನಡೆಯಿತು.

೮.೫೦ ಲಕ್ಷ ರು. ಮೌಲ್ಯದ ದನಗಳ ಆಕರ್ಷಣೆ:

ಪಾಂಡವಪುರ ತಾಲೂಕು ತಿಮ್ಮನಕೊಪ್ಪಲು ಗ್ರಾಮದ ೮.೫೦ ಲಕ್ಷ ರು. ಮೌಲ್ಯದ ದನಗಳು ಜಾತ್ರೆಯಲ್ಲಿ ವಿಶೇಷವಾಗಿ ಗಮನ ಸೆಳೆದವು. ಈ ದನಗಳನ್ನು ಜಾತ್ರೆಗೆ ಬಂದವರು ೧೦.೫೦ ಲಕ್ಷ ರು. ನೀಡುವುದಾಗಿ ಹೇಳಿದರೂ ಕೊಡುವುದಕ್ಕೆ ಸುತರಾಂ ಒಪ್ಪಲಿಲ್ಲ. ನಾವು ದನಗಳನ್ನು ಮಾರಾಟಕ್ಕೆ ತಂದಿಲ್ಲ. ಪ್ರದರ್ಶನಕ್ಕೆ ತಂದಿರುವುದಾಗಿ ಮಾಲೀಕ ಕೆಂಪೇಗೌಡ ಹೇಳಿದರು.

ನಟ ದರ್ಶನ್ ಸಾಕಿದ್ದ ದನಗಳು ೪.೫೦ ಲಕ್ಷ ರು.ಗೆ ಮಾರಾಟ:

ಚಿತ್ರನಟ ದರ್ಶನ್ ಸಾಕಿದ್ದ ದನಗಳು ಜಾತ್ರೆಯಲ್ಲಿ ಪಾಲ್ಗೊಂಡಿದ್ದವು. ಆ ದನಗಳನ್ನು ಹೊಳಲು ಗ್ರಾಮದ ಚೇತನ್ ಎಂಬುವರು ೪.೫೦ ಲಕ್ಷ ರು.ಗೆ ಖರೀದಿ ಮಾಡಿ ಊರಿಗೆ ಕೊಂಡೊಯ್ದರು. ಜಾತ್ರೆಯಲ್ಲಿ ನನ್ನ ಹೆಸರನ್ನು ಸೇರಿಸದಂತೆ ದರ್ಶನ್ ಮನವಿ ಮಾಡಿಕೊಂಡಿದ್ದರಿಂದ ಆ ಜಾಗಕ್ಕೆ ಚೇತನ್ ಹೆಸರನ್ನು ಸೇರ್ಪಡೆ ಮಾಡಲಾಯಿತು ಎಂದು ಆಯೋಜಕರು ತಿಳಿಸಿದರು.

ಅಧ್ಯಕ್ಷ ಎಸ್.ಪಿ.ಸತೀಶ್ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಭಾರೀ ದನಗಳ ಜಾತ್ರೆಯನ್ನು ಶ್ರೀಕಂಬದ ನರಸಿಂಹಸ್ವಾಮಿ ಬ್ರಹ್ಮೋತ್ಸವದ ಅಂಗವಾಗಿ ಆಯೋಜಿಸಲಾಗುತ್ತಿದೆ. ದೇಶೀ ತಳಿಯ ಹಸುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ದೇಶದ ಜನರು ದೇಶೀ ತಳಿಗಳ ಹಸುಗಳ ಮಹತ್ವವನ್ನುಆರಿತು ಅವುಗಳ ಸಾಕಾಣಿಕೆಗೆ ಒಲವು ತೋರಬೇಕು. ಇದರಿಂದ ರೈತರು ಆರ್ಥಿಕವಾಗಿ ಉನ್ನತ ಸ್ಥಾನಕ್ಕೇರಬಹುದು ಎಂದು ಹೇಳಿದರು.

ಶ್ರೀ ಕಂಬದ ನರಸಿಂಹಸ್ವಾಮಿ ಬ್ರಹ್ಮರಥೋತ್ಸವದ ಪ್ರಯುಕ್ತ ಬುಧವಾರದಂದು ಗರುಡ ವಾಹನೋತ್ಸವ ನಡೆಸಲಾಯಿತು. ಅನೇಕ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ