ಕನ್ನಡಪ್ರಭ ವಾರ್ತೆ ಮಂಗಳೂರು
ರೈತರು ಮತ್ತು ಉತ್ಪಾದಕರಿಗೆ ನೇರ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಕಳೆದ 10 ವರ್ಷಗಳಿಂದ ನಡೆಸಲಾಗುತ್ತಿರುವ ಹಣ್ಣುಗಳ ಬೃಹತ್ ಉತ್ಸವ ಮತ್ತು ಹಲಸು ಮೇಳ ಈ ಬಾರಿ ಜೂ.22,23ರಂದು ಪಿಲಿಕುಳದ ಅರ್ಬನ್ ಹಾಥ್ ಮಳಿಗೆಗಳ ಸಂಕೀರ್ಣದಲ್ಲಿ ನಡೆಯಲಿದೆ.ಪಿಲಿಕುಳ ವಿಜ್ಞಾನ ಕೇಂದ್ರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಾಧಿಕಾರದ ಆಯುಕ್ತ ಪ್ರವೀಣ್ ನಾಯಕ್, ಈ ಬಾರಿ ಮಳಿಗೆ ತೆರೆಯಲು 72 ಮಂದಿ ನೋಂದಣಿ ಮಾಡಿಕೊಂಡಿದ್ದು, 100ಕ್ಕೂ ಅಧಿಕ ಮಳಿಗೆಗಳಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ರಾಮನಗರ, ತಿಪಟೂರು, ಕೋಲಾರ, ಧಾರವಾಡ, ಕುಶಾಲನಗರ, ಮಡಿಕೇರಿ ಮೊದಲಾದ ಕಡೆಗಳಿಂದ ರೈತರು ಹಾಗೂ ಬೆಳೆಗಾರರು ತಮ್ಮ ಹಣ್ಣು ಹಂಪಲು, ಹಲಸು ಸೇರಿದಂತೆ ಇತರ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಇದರಲ್ಲಿ ರೈತರಿಂದ ನೇರವಾಗಿ ಹಣ್ಣು ಮತ್ತು ಉತ್ಪನ್ನಗಳು ದೊರೆಯುವುದರಿಂದ ಬಹುತೇಕ ರಾಸಾಯನಿಕ ಮುಕ್ತವಾಗಿತ್ತವೆ. ಹಣ್ಣು ಹಂಪಲುಗಳ ಜತೆಗೆ ಔಷಧೀಯ ಗಿಡಗಳು, ಕಸಿ ಗಿಡಗಳು, ಬೀಜಗಳು, ಸಾವಯವ ಬಳಗದ ವಿವಿಧ ಆಹಾರ ಮತ್ತಿತರ ಪದಾರ್ಥಗಳು, ಹಣ್ಣುಗಳಿಂದ ತಯಾರಿಸಿದ ಖಾದ್ಯಗಳು, ಪಾನೀಯಗಳ ಪ್ರದರ್ಶನವೂ ಇರಲಿದೆ ಎಂದರು.ಅಂದು ಪ್ರವೇಶ ಉಚಿತ:ಜೂ. 22ರಂದು ಬೆಳಗ್ಗೆ 10 ಗಂಟೆಗೆ ಉದ್ಘಾಟನೆ ನಡೆಯಲಿದೆ. ಮೇಳಕ್ಕೆ ಪ್ರವೇಶ ಉಚಿತವಾಗಿದ್ದು, ಮೇಳ ನಡೆಯುವ ಅರ್ಬನ್ ಹಾಥ್ ಸುತ್ತಮುತ್ತ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಸಾರ್ವಜನಿಕರು ತಮ್ಮ ವಾಹನಗಳ ಮೂಲಕ ನೇರವಾಗಿ ಅರ್ಬನ್ ಹಾಥ್‌ವರೆಗೂ ಶುಲ್ಕ ರಹಿತವಾಗಿ ಆಗಮಿಸಬಹುದು ಎಂದು ಪ್ರವೀಣ್ ನಾಯಕ್ ತಿಳಿಸಿದರು.
ಪ್ರಾಧಿಕಾರದ ಆಡಳಿತಾಧಿಕಾರಿ ಡಾ. ಅಶೋಕ್ ಇದ್ದರು.ನೂರಾರು ತಳಿ ತರಕಾರಿ ಬೀಜಗಳು!
ಈ ಬಾರಿಯ ಮೇಳದಲ್ಲಿ ನೂರಾರು ದೇಸಿ ತಳಿಯ ತರಕಾರಿ ಬೀಜಗಳ ಪ್ರದರ್ಶನ ಮತ್ತು ಮಾರಾಟದ ವಿಶೇಷತೆ ಇದೆ. ಕುಶಾಲನಗರದ ಅಫ್ತಾಬ್ ಎಂಬವರು ಬದನೆಯ 238 ತಳಿ, ಮೂಲಂಗಿಯ 15, ಅಲಸಂಡೆ ಹಾಗೂ ಬೆಂಡೆಕಾಯಿಯ ತಲಾ 40 ತಳಿಗಳು, ಸೋರೆಕಾಯಿಯ 20 ತಳಿ, ಟೊಮೋಟೋ 100, ಮೆಣಸಿನಕಾಯಿ 70, ಕುಂಬಳಕಾಯಿಯ 20 ತಳಿಗಳ ಬೀಜಗಳನ್ನು ಸಂರಕ್ಷಿಸಿದ್ದಾರೆ. ಈ ಬೀಜಗಳನ್ನು ಮೇಳದಲ್ಲಿ ಪ್ರದರ್ಶನ ಹಾಗೂ ಮಾರಾಟ ಮಾಡಲಿದ್ದಾರೆ ಎಂದು ಪ್ರವೀಣ್ ನಾಯಕ್ ತಿಳಿಸಿದರು.ಪಿಲಿಕುಳ ನಿಸರ್ಗಧಾಮವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೆಪಿಎಸ್‌ಇ ಪರೀಕ್ಷೆಯ ಮೂಲಕ ವೃಂದ ಮತ್ತು ನೇಮಕಾತಿ ನಿಯಮದಡಿ ಅಗತ್ಯ ಅಧಿಕಾರಿ ಹಾಗೂ ಸಿಬ್ಬಂದಿ ನೇಮಕಕ್ಕೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಪಿಲಿಕುಳವನ್ನು ವ್ಯವಸ್ಥಿತವಾಗಿ ಅಭಿವೃದ್ಧಿಯತ್ತ ಕೊಂಡೊಯ್ಯಲು ಇದು ಪೂರಕವಾಗಲಿದೆ. ಸುಮಾರು 365 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಪಿಲಿಕುಳ ನಿಸರ್ಗಧಾಮಕ್ಕೆ ಸುತ್ತ ಆವರಣಗೋಡೆ ಇಲ್ಲದಿರುವ ಕಾರಣ ಭದ್ರತಾ ಸಿಬ್ಬಂದಿ ಅತಿ ಅಗತ್ಯವಾಗಿದೆ ಎಂದು ಪ್ರವೀಣ್ ನಾಯಕ್ ತಿಳಿಸಿದರು. ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.