ಅಕ್ಷರ ಜಾತ್ರೆ । ಉಪ ಕುಲಪತಿ ಡಾ.ಎಚ್.ಡಿ.ಮಹೇಶಪ್ಪ, ಕುಲಸಚಿವ ಚಾಲನೆ । ವಿವಿಧ ವಿವಿಯ ಗಣ್ಯರ ಆಗಮನ । ಪ್ರವೇಶ ಶುಲ್ಕ, ಪ್ರವೇಶ ಪರೀಕ್ಷೆ ಮಾಹಿತಿ
ನಗರದ ಜಿಎಂ ವಿಶ್ವವಿದ್ಯಾಲಯದಲ್ಲಿ ಇದೇ ಮೊದಲ ಬಾರಿಗೆ ಬೃಹತ್ ಅಂತರಾಷ್ಟ್ರೀಯ ಶಿಕ್ಷಣ ಮೇಳವನ್ನು ಗುರುವಾರ ನಗರದ ಜಿಎಂ ವಿಶ್ವವಿದ್ಯಾಲಯದ ಕೇಂದ್ರ ಗ್ರಂಥಾಲಯದಲ್ಲಿ ಆಯೋಜಿಸಲಾಗಿತ್ತು.
ಮೇಳಕ್ಕೆ ಜಿಎಂ ವಿಶ್ವ ವಿದ್ಯಾಲಯದ ಉಪ ಕುಲಪತಿ ಡಾ.ಎಚ್.ಡಿ.ಮಹೇಶಪ್ಪ, ಕುಲಸಚಿವ ಡಾ.ಬಿ.ಎಸ್.ಸುನಿಲ್ ಕುಮಾರ್ ಸೇರಿದಂತೆ ಗಣ್ಯರು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಡಾ.ಎಚ್.ಡಿ.ಮಹೇಶಪ್ಪ ಮಾತನಾಡಿ, ಯಾವುದೇ ವಿಶ್ವವಿದ್ಯಾಲಯವಿದ್ದರೂ, ಅದರ ಗುಣಮಟ್ಟವೇ ಪ್ರಾಮುಖ್ಯ. ಆದ್ದರಿಂದ, ಕ್ರಮಾಂಕಗಳ ಬಗ್ಗೆ ಊಹೆಗಳನ್ನು ಮಾಡುವುದು ಸಹಜ. ಆ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದ ಕ್ರಮಾಂಕವೇ ಮುಖ್ಯ ಅಂಶವಲ್ಲ. ಕ್ರಮಾಂಕಗಳು ಇರುತ್ತವೆ, ಆದರೆ ಪರಸ್ಪರ ಜನಪ್ರಿಯತೆ ಇರುವ ಅನಿವಾರ್ಯತೆಯಿಲ್ಲ. ಈ ಎಲ್ಲದಕ್ಕೂ ಮಿಗಿಲಾಗಿ, ಗುಣಮಟ್ಟವೇ ಬಹು ಮುಖ್ಯ ಎಂದು ತಿಳಿಸಿದರು.
ಡಾ.ಬಿ.ಎಸ್.ಸುನಿಲ್ ಕುಮಾರ ಮಾತನಾಡಿ, ಈ ಮೇಳದಲ್ಲಿ ಸಿಗುವ ಮಾಹಿತಿಯು ನಿಮಗೆ ಬಹಳಷ್ಟು ಆತ್ಮವಿಶ್ವಾಸವನ್ನು ನೀಡುತ್ತದೆ. ಹಾಗೆಯೇ ನಿಮ್ಮ ನಿರ್ಧಾರಗಳನ್ನು ಸೂಕ್ತವಾಗಿ ತೆಗೆದುಕೊಳ್ಳಬಹುದು. ಮುಖ್ಯವಾಗಿ, ವಿಶ್ವವಿದ್ಯಾಲಯದಿಂದ ನಿಮಗೆ ಸದಾ ಬೆಂಬಲ ದೊರೆಯುತ್ತದೆ. ಆದ್ದರಿಂದ, ನೀವು ತೆಗೆದುಕೊಳ್ಳುವ ಯಾವುದೇ ನಿರ್ಧಾರದ ಕುರಿತು ಗೊಂದಲಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ನೀವು ತೆಗೆದುಕೊಳ್ಳುವ ನಿರ್ಧಾರವನ್ನು ಇನ್ನಷ್ಟು ಸಮರ್ಪಕ ಮತ್ತು ಪರಿಪೂರ್ಣವಾಗಿಸುತ್ತದೆ ಎಂದರು.
ಅರಿಝೋನ ಸ್ಟೇಟ್ ಯೂನಿವರ್ಸಿಟಿ, ಪೇಸ್ ಯೂನಿವರ್ಸಿಟಿ, ಯೂನಿವರ್ಸಿಟಿ ಆಫ್ ಕನೆಕ್ಟಿಕಟ್, ಯೂನಿವರ್ಸಿಟಿ ಆಫ್ ಒರಿಗಾನ್, ಸೈಮ್ಮನ್ಸ್ ಯೂನಿವರ್ಸಿಟಿ, ಯೂನಿವರ್ಸಿಟಿ ಆಫ್ ಅಕ್ರೋನ್, ಹಲ್ಟ್ ಯೂನಿವರ್ಸಿಟಿ, ಡ್ರೆಕ್ಸಲ್ ಯೂನಿವರ್ಸಿಟಿ, ಟೆಂಪಲ್ ಯೂನಿವರ್ಸಿಟಿ, ಮೈಮಿ ಯೂನಿವರ್ಸಿಟಿ ಸೇರಿದಂತೆ ವಿವಿಧ ದೇಶದ ವಿಶ್ವವಿದ್ಯಾಲಯದ ತಜ್ಞರು ಆಗಮಿಸಿದ್ದರು. ಶಿಕ್ಷಣ ಸಾಲಕ್ಕಾಗಿ ಆಕ್ಸಿಲ್ಲೋ ಅಂಡ್ ಐಡಿಎಫ್‌ಸಿ ಬ್ಯಾಂಕ್ ನಿಂದ ಆಗಮಿಸಿದ್ದರು.
ಬೆಂಗಳೂರಿನ ಎಜು ಟ್ರಸ್ಟ್ ಸಂಸ್ಥೆಯ ಸಿಇಓ ಅರುಣ್ ಪ್ರಸಾದ್, ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ಸವಿತಾ ಅರಣ್, ಜಿಎಂಯು ತರಬೇತಿ ಮತ್ತು ಉದ್ಯೋಗ ವಿಭಾಗದ ನಿರ್ದೇಶಕ ಟಿ.ಆರ್.ತೇಜಸ್ವಿ ಕಟ್ಟಿಮನಿ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ಡೀನ್‌ಗಳು, ನಿರ್ದೇಶಕರು, ಅಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.