ಲಕ್ಷ್ಮೇಶ್ವರ: ಮಾನವ ಬಂಧುತ್ವ ವೇದಿಕೆ ರಾಜ್ಯಾದ್ಯಂತ ಕ್ರಾಂತಿ ಮೂಡಿಸುತ್ತಿದ್ದು, ಅದರ ಗುರಿ ಮತ್ತು ಉದ್ದೇಶಗಳು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿವೆ ಎಂದು ಕೆಪಿಸಿಸಿ ಕಾರ್ಯದರ್ಶಿ ಹಾಗೂ ರಾಜ್ಯ ಅರಣ್ಯ ನಿಗಮದ ಮಾಜಿ ಅಧ್ಯಕ್ಷ ಟಿ. ಈಶ್ವರ ತಿಳಿಸಿದರು.
ಮಾನವ ಬಂಧುತ್ವ ವೇದಿಕೆಯು ಜಾತಿ, ಧರ್ಮ, ಪಂಥ, ಭಾಷೆ ಹಾಗೂ ಪ್ರಾದೇಶಿಕ ಭೇದಗಳನ್ನು ಮೀರಿ ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಸಹಬಾಳ್ವೆಯ ಸಂದೇಶವನ್ನು ಸಾರುತ್ತಿದೆ ಎಂದರು.
ಬಂಡಾಯ ಸಾಹಿತಿ, ನಿವೃತ್ತ ಶಿಕ್ಷಕ ಸಿ.ಜಿ. ಹಿರೇಮಠ ಮಾತನಾಡಿ, ಮನುಷ್ಯ ಉಸಿರಿರುವರೆಗೂ ಒಳ್ಳೆಯ ಕಾರ್ಯಗಳಲ್ಲಿ ತೊಡಗಿದಾಗ ಅವರ ಹೆಸರು ಉಳಿಯುತ್ತದೆ. ಕಾನೂನಿನ ವಿಷಯಗಳಲ್ಲಿ ಎಲ್ಲರೂ ಒಂದೇ ಎಂಬ ಭಾವನೆಯನ್ನು ಸಂವಿಧಾನದಲ್ಲಿ ಅಳವಡಿಸಿಕೊಳ್ಳಲಾಗಿದ್ದು, ಅಂಬೇಡ್ಕರ್ ಅವರ ದೂರದೃಷ್ಟಿಯ ಯೋಜನೆ ಮಾನವ ಬಂಧುತ್ವದ ಸಂಕೇತವಾಗಿದೆ ಎಂದರು.ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ಬಸವರಾಜ ಈರಣ್ಣವರ ಪ್ರಾಸ್ತಾನಿಕವಾಗಿ ಮಾತನಾಡಿದರು. ಮಾನ್ವಿ ಸರ್ಕಾರಿ ಪಪೂ ಕಾಲೇಜಿನ ಪ್ರಾಚಾರ್ಯ ಮಂಜುನಾಥ ಕೊಕ್ಕರಗುಂದಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ದಲಿತ ಯುವ ಮುನ್ನಡೆ ರಾಜ್ಯ ಅಧ್ಯಕ್ಷ ಡಿ.ಬಿ. ಫಕೀರಪ್ಪ, ಜಿಲ್ಲಾ ಮಾದಿಗ ಮಹಾಸಭಾದ ಅಧ್ಯಕ್ಷ ರಾಜೇಶ ಕಮತದ, ರಾಜು ಭೀಮಣ್ಣವರ, ಹನುಮಂತಪ್ಪ ಹರಿಜನ, ಕರಿಯಪ್ಪ ಶಿರಹಟ್ಟಿ, ಮಹಾಂತೇಶ ಮುಶಪ್ಪನವರ, ಆನಂದ ತಳಗೇರಿ, ಮಂಜುನಾಥ ದೊಡ್ಮನಿ, ಚೇತನ ಯತ್ತಿನಹಳ್ಳಿ, ರವಿ ಬಜಕ್ಕನವರ, ಗುಡ್ಡಪ್ಪ ಮತ್ತೂರ ಭಾಗವಹಿಸಿದ್ದರು. ಮಾನವ ಬಂಧುತ್ವ ವೇದಿಕೆಯ ತಾಲೂಕು ಸಂಚಾಲಕ ಸೋಮಣ್ಣ ಎತ್ತಿನಹಳ್ಳಿ ಸ್ವಾಗತಿಸಿದರು. ನಾಗರಾಜ ಸಾತಪೂತೆ ಕಾರ್ಯಕ್ರಮ ನಿರೂಪಿಸಿದರು.