ರಾಮನಗರ: ಗಣಿತ ಎಂದರೆ ಸಾಕು ಮಕ್ಕಳ ಮುಖದಲ್ಲಿ ಆತಂಕ ಮೂಡುತ್ತದೆ. ಬಹುತೇಕ ಮಕ್ಕಳಿಗೆ ಗಣಿತ ಎಂದರೆ ಕಷ್ಟದ ವಿಷಯವೇ ಸರಿ. ಆದರೆ, ಇದಕ್ಕೆ ಪರಿಹಾರವಾಗಿ ಉಪನ್ಯಾಸಕ ಕೆ.ಪಿ.ಬಾಬು ಅವರು ರಚಿಸಿರುವ ಗಣಿತ ಪ್ರಯೋಗಾಲಯ ''''ಗಣಿತ ಕಬ್ಬಿಣದ ಕಡಲೆಯಲ್ಲ ಅದು ಸುಲಿದ ಬಾಳೆಹಣ್ಣಿನಂತೆ ಎಂಬ ಸತ್ಯಾಂಶ ಅರಿಯುವುದರಲ್ಲಿ ಯಾವುದೇ ಸಂದೇಹವಿಲ್ಲ.
ಮಂಡ್ಯ ಜಿಲ್ಲೆಯಲ್ಲಿ ಶಿಕ್ಷಕ ವೃತ್ತಿ ಪ್ರಾರಂಭಿಸಿದ ಕೆ.ಪಿ.ಬಾಬು, ಚಿಕ್ಕಬ್ಯಾಡರಹಳ್ಳಿ, ಬೇಲೂರು ಸರ್ಕಾರಿ ಪ್ರೌಢಶಾಲೆ ಹಾಗೂ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಾರಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಮಕ್ಕಳ ಕಲಿಕಾ ಮಟ್ಟ ವೃದ್ಧಿಸಲು ಹೊಸ ಪ್ರಯೋಗಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ ಮಕ್ಕಳ ಪಾಲಿಗೆ ಅಚ್ಚುಮೆಚ್ಚಿನ ಶಿಕ್ಷಕರಾದವರು. 2022ರಿಂದ ಡಯಟ್ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬಾಬು ರಚಿಸಿರುವ ಪ್ರಯೋಗಾಲಯದಲ್ಲಿ ಕಲಿಕೋಪಕರಣಗಳು ವಿದ್ಯಾರ್ಥಿಗಳಿಗೆ ಕುತೂಹಲ, ತಾರ್ಕಿಕ ಚಿಂತನೆ ಬೆಳೆಸುವುದರ ಜೊತೆಗೆ ಮನರಂಜನೆಯನ್ನೂ ನೀಡುತ್ತವೆ. ಕಲಿಕೋಪಕರಣಗಳ ಬಳಕೆ, ಅಗತ್ಯತೆ ಮತ್ತು ತಯಾರಿಕಾ ವಿಧಾನವನ್ನು ಬಹಳ ಅರ್ಥಪೂರ್ಣವಾಗಿ ಮನದಟ್ಟಾಗುವಂತೆ ಬಾಬು ವಿವರಿಸುತ್ತಾರೆ. ಈ ಪ್ರಯೋಗಾಲಯ ವಿದ್ಯಾರ್ಥಿಗಳು ಮಾತ್ರವಲ್ಲ ಶಿಕ್ಷಕರಿಗೂ ಹೊಸ ಹೊಸ ವಿಷಯಗಳನ್ನು ಕಲಿಯಲು ಪ್ರೇರೇಪಿಸುತ್ತದೆ.ಪ್ರಯೋಗಾಲಯದಲ್ಲಿರುವ ಭಾರತೀಯ ಮತ್ತು ವಿದೇಶಿ ಗಣಿತಜ್ಞರ ಭಾವಚಿತ್ರಗಳು, Low Cost, No Cost ಮೆಟಿರಿಯಲ್ ಗಳನ್ನು ಬಳಸಿ ರಚಿಸಿರುವ ವಿವಿಧ ಕಲಿಕೋಪಕರಣಗಳನ್ನು ತೋರಿಸಿ, ಬರುವಂತಹ ಕಲಿಕಾರ್ಥಿಗಳಿಗೆ ಮನಮುಟ್ಟುವಂತೆ, ಅರ್ಥಪೂರ್ಣವಾಗಿ ವಿಷಯಗಳನ್ನು ತಿಳಿಸುತ್ತಾ ಮತ್ತಷ್ಟು ಕಲಿಯಲು- ಕಲಿಸಲು ಪ್ರೇರಣೆ ನೀಡುತ್ತಾರೆ.
ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ವಿಜ್ಞಾನ ಮಾದರಿಯಲ್ಲಿ ಗಣಿತವನ್ನು ಪ್ರಯೋಗಾತ್ಮಕವಾಗಿ ಕಲಿಸಿಕೊಡಲಾಗುತ್ತಿದೆ. ಕೇವಲ ಕ್ಲಾಸ್‌ರೂಮಿನ ಬೋರ್ಡ್ ಹಾಗೂ ಪುಸ್ತಕಗಳಲ್ಲಿ ರೇಖೆ ಹಾಗೂ ಗಣಿತದ ಚಿಹ್ನೆಗಳ ಮೂಲಕ ಕಲಿಯುತ್ತಿದ್ದ ವಿದ್ಯಾರ್ಥಿಗಳಿಗೆ ಈಗ ಅವುಗಳ ಆಕೃತಿಗಳನ್ನು ಸ್ಪರ್ಶಿಸುತ್ತ ಹಾಗೂ ಅವುಗಳನ್ನು ಅವಿಷ್ಕರಿಸಿದವರು ಮತ್ತು ಅದರ ಉದ್ದೇಶಗಳನ್ನು ಸಹ ತಿಳಿಯಬಹುದಾಗಿದೆ. ಕೂಡುವುದು, ಕಳೆಯುವುದು, ಗುಣಾಕಾರ, ಭಾಗಾಕಾರ ಮಾತ್ರವಲ್ಲದೆ ರೇಖಾಗಣಿತವನ್ನು ಸಹ ಆಟಿಕೆ ಮೂಲಕ ಆಸ್ವಾದಿಸುತ್ತ ಕಲಿಯಲು ಈ ಪ್ರಯೋಗಾಲಯ ವೇದಿಕೆಯಾಗಿದೆ.
ಮಗ್ಗಿಗಳನ್ನು ಬರೆಯಲು ಅನುಕೂಲವಾಗುವಂತೆ ಫಲಕ ಹಾಗೂ ಕೋಡಿಂಗ್ ಮತ್ತು ಡಿಕೋಡಿಂಗ್ ಮೂಲಕ ಇತಿಹಾಸದ ದಿನಾಂಕಗಳನ್ನು ತಕ್ಷಣ ಕಂಡುಕೊಳ್ಳುವ ಮಾದರಿ ರಚಿಸಿದ್ದಾರೆ. ಸರಳ ನಿಯಮದಿಂದ ವರ್ಗ ಕಂಡು ಹಿಡಿಯುವ ಮಾದರಿ ಜೊತೆಗೆ ವಿವಿಧ ಬಗೆಯ ಫಲಕಗಳನ್ನು ಜೋಡಿಸಲಾಗಿದೆ.
ಗಣಿತವೇ ವಿಜ್ಞಾನ ಹಾಗೂ ತಂತ್ರಜ್ಞಾನದ ಮೂಲ ಭಾಷೆ. ಗಣಿತ ಕೇವಲ ಲೆಕ್ಕ ಹಾಕುವ ವಿಷಯವಲ್ಲ, ಅದು ಲಾಜಿಕ್ ತರ್ಕಶಕ್ತಿ, ವಿವೇಚನಾ ಶಕ್ತಿ, ನಿರ್ಣಯ ಶಕ್ತಿ, ಆಲ್ ರೌಂಡ್ ಡೆವಲಪ್ ಮೆಂಟ್ ಗೆ ಪೂರಕ. ಗಣಿತವನ್ನು ಮನರಂಜನೆ ತಂತ್ರ, ಆಟ, ಗುಂಪು ಚರ್ಚೆ ವಿಧಾನ, ರಸಪ್ರಶ್ನೆ, ಗಣಿತದ ಒಗಟುಗಳ ಮೂಲಕ ಮನಮುಟ್ಟುವಂತೆ ತಿಳಿಸಬೇಕು.
4ಕೆಆರ್ ಎಂಎನ್ 1,2,3.ಜೆಪಿಜಿ
2.ಕೆ.ಪಿ.ಬಾಬುರವರು ಮಕ್ಕಳಿಗೆ ಪಾಠ ಮಾಡುತ್ತಿರುವುದು.