ಸಿಂಡಿಕೇಟ್ ಸದಸ್ಯತ್ವದಿಂದ ಕನ್ನಾಳೆ ವಜಾಗೊಳಿಸಿ

ಕನ್ನಡಪ್ರಭ ವಾರ್ತೆ, ತುಮಕೂರುಕೆಪಿಎಸ್‌ಸಿ ಪಶು ವೈದ್ಯಾಧಿಕಾರಿ ನೇಮಕಾತಿ ಹಗರಣದಲ್ಲಿ ಭಾಗಿಯಾಗಿರುವ ತುಮಕೂರು ವಿಶ್ವವಿದ್ಯಾನಿಲಯದ ರಾಜ್ಯಪಾಲರ ನಾಮನಿರ್ದೇಶಿತ ಸಿಂಡಿಕೇಟ್ ಸದಸ್ಯ ಬಸವರಾಜ ಕನ್ನಾಳೆ ಅವರನ್ನು ಸಿಂಡಿಕೇಟ್ ಸದಸ್ಯತ್ವದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ತುಮಕೂರು ವಿವಿ ಕುಲಪತಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿಗಳ ಕಚೇರಿ ಮುಂಭಾಗ ಜಮಾಯಿಸಿದ ಎಬಿವಿಪಿ ಕಾರ್ಯಕರ್ತರು ವಿವಿ ಸಿಂಡಿಕೇಟ್ ಸದಸ್ಯ ಬಸವರಾಜ ಕನ್ನಾಳೆ ರವರ ಭಾವಚಿತ್ರವನ್ನು ದಹಿಸಿ ಆಕ್ರೋಶ ಹೊರ ಹಾಕಿ, ಕೂಡಲೇ ಸಿಂಡಿಕೇಟ್ ಸದಸ್ಯತ್ವದಿಂದ ವಜಾ ಮಾಡಬೇಕು ಎಂದು ಪ್ರಭಾರ ಕುಲಪತಿಗಳಿಗೆ ಮನವಿ ಸಲ್ಲಿಸಿದರು.ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಪ್ರಕ್ರಿಯೆಯಲ್ಲಿ ಕೋಟ್ಯಂತರ ರುಪಾಯಿ ಅವ್ಯವಹಾರ ನಡೆದು ಪ್ರವೇಶಾತಿ ಪರೀಕ್ಷೆಯಲ್ಲಿ ಭಾರೀ ಅಕ್ರಮ ಬೆಳಕಿಗೆ ಬಂದಿದೆ. ದುರಾದೃಷ್ಟವಶಾತ್ ಆಕಾಂಕ್ಷಿತ ಅಭ್ಯರ್ಥಿಗಳ ಹಿತ ಕಾಯಬೇಕಾದ ಆಗಿನ ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕರಾಗಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಹಾಗೂ ತುಮಕೂರು ವಿವಿ ರಾಜ್ಯಪಾಲರ ನಾಮ ನಿರ್ದೇಶಿತ ಸಿಂಡಿಕೇಟ್ ಸದಸ್ಯರಾದ ಬಸವರಾಜ್ ಕನ್ನಾಳೆ ಅಕ್ರಮದಲ್ಲಿ ನೇರವಾಗಿ ಭಾಗಿಯಾಗಿರುವುದು ಇಡಿ ಮತ್ತು ಸಿಐಡಿ ತನಿಖೆಯಿಂದ ಹೊರ ಬಂದಿದೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.ಈಗಾಗಲೇ ಸಿಐಡಿ ತನಿಖೆ ಎದುರಿಸುತ್ತಿರುವ ಬಸವರಾಜ್ ಕನ್ನಾಳೆ ರವರನ್ನು ಸಿಂಡಿಕೇಟ್ ಸದಸ್ಯತ್ವದಿಂದ ವಜಾಗೊಳಿಸಬೇಕು ಹಾಗೂ ಇವರ ಅವಧಿಯಲ್ಲಿ ತುಮಕೂರು ವಿವಿಯಲ್ಲಿ ನಡೆದಿರಬಹುದಾದ ಅಕ್ರಮಗಳ ತನಿಖೆಯನ್ನು ಮಾಡಬೇಕು ಎಂದು ಒತ್ತಾಯಿಸಿದರು.

ಅಷ್ಟೇ ಅಲ್ಲದೆ ಕೆಪಿಎಸ್‌ಸಿ ಹಗರಣದ ಸಮಗ್ರ ತನಿಖೆಯನ್ನು ಸಿಬಿಐಗೆ ವಹಿಸುವುದರ ಮೂಲಕ ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗ ಆಕಾಂಕ್ಷೆಗಳಿಗೆ ನ್ಯಾಯ ಒದಗಿಸಬೇಕು ಎಂದು ಪ್ರತಿಭಟನಾನಿರತ ಎಬಿವಿಪಿ ಕಾರ್ಯಕರ್ತರು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಎಬಿವಿಪಿ ತುಮಕೂರು ವಿಭಾಗದ ಸಂಚಾಲಕರಾದ ಗುರುಪ್ರಸಾದ್ ಹೆಚ್.ಆರ್., ಜೆ.ಬಿ. ರಂಗನಾಥ್, ಅಪ್ಪು, ಗಣಪತಿ, ಚಿರಂಜೀವಿ, ಪ್ರಶಾಂತ್, ಶರಣ್, ಮನೋಜ್, ಅಭಿಷೇಕ್ ಮತ್ತಿತರರು ಪಾಲ್ಗೊಂಡಿದ್ದರು.