ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ ತಳಮಟ್ಟದ ಶ್ರಮಿಕ ವರ್ಗದವರಿಂದಲೇ ಕಟ್ಟಲ್ಪಟ್ಟಿರುವ ಕನ್ನಡದ ಈ ನೆಲ ಸ್ವಾಭಿಮಾನದ ಸಂಕೇತವಾಗಿದ್ದು, ಶರಣು ಶರಣಾರ್ಥಿಗಳ ನಾಡಾಗಿದೆ. ಜಾಗತೀಕರಣದ ಪ್ರಭಾವದಿಂದ ಕನ್ನಡದ ಅಸ್ಮಿತೆಗೆ ಧಕ್ಕೆ ಉಂಟಾಗಿದ್ದು, ಕನ್ನಡಿಗರು ಹೊಣೆಗಾರಿಕೆ ಅರಿತು ಕನ್ನಡತನವನ್ನು ಮೆರೆಯಬೇಕಾಗಿದೆ ಎಂದು ಶಿವಮೊಗ್ಗ ಸಹ್ಯಾದ್ರಿ ಕಲಾ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಮೋಹನ್ ಚಂದ್ರಗುತ್ತಿ ಹೇಳಿದರು.ತುಂಗಾ ಮಹಾವಿದ್ಯಾಲಯದ ರಜತ ಸಭಾಂಗಣದಲ್ಲಿ ಗುರುವಾರ ನಡೆದ ಕನ್ನಡ ರಾಜ್ಯೋತ್ಸವ ಆಚರಣೆ ಮತ್ತು 2024-25 ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್‍ಎಸ್‍ಎಸ್, ಎನ್‍ಸಿಸಿ, ರೆಡ್‍ಕ್ರಾಸ್ ರೇಂಜರ್ಸ್ ಮತ್ತು ರೋವರ್ಸ್ ಹಾಗೂ ಕಲಾ ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳ ವಿದ್ಯಾರ್ಥಿ ವೇದಿಕೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡನಾಡು ತಳಮಟ್ಟದ ಶ್ರಮಿಕ ವರ್ಗದವರಿಂದಾಗಿ ಕಟ್ಟಲ್ಪಟ್ಟಿದೆಯೇ ಹೊರತು ರಾಜಮಹಾರಾಜರು, ಋಷಿ ಮುನಿಗಳಿಂದಾಗಲೀ ಅಥವಾ ಯಾವುದೇ ವಿದ್ವಾಂಸ ಅಥವಾ ಸಾಹಿತಿಗಳಿಂದಾಗಲಿ ಅಲ್ಲ. ಅವೆಲ್ಲ ಕಟ್ಟು ಕಥೆಗಳಾಗಿವೆ. ಕನ್ನಡದ ಈ ನೆಲ ಸ್ವಾಭಿಮಾನದ ಸಂಕೇತವಾಗಿದ್ದು, ಶರಣು ಶರಣಾರ್ಥಿಗಳ ನಾಡಾಗಿದೆ. ಜಾಗತೀಕರಣ ಕನ್ನಡದ ಅಸ್ಮಿತೆಗೇ ವಿರುದ್ದವಾಗಿ ಮೋಸ ಮಾಡಿ ದುಡಿಯುವಂತೆ ಪ್ರೇರೇಪಿಸುತ್ತಿದ್ದು, ಇಂದಿನ ನಮ್ಮ ಶಿಕ್ಷಣ ಕೂಡ ಅದೇ ಹಾದಿಯಲ್ಲಿ ಸಾಗುತ್ತಿರುವುದು ವಿಷಾದನೀಯ ಎಂದರು.
ತುಂಗಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪಿ.ವಿ. ಮಹಾಬಲೇಶ್, ಉಪಾಧ್ಯಕ್ಷ ಎಂ.ಎನ್. ರಮೇಶ್, ಕಾರ್ಯದರ್ಶಿ ಡಾನ್ ರಾಮಣ್ಣ ಶೆಟ್ಟಿ, ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಆರ್. ಕುಮಾರಸ್ವಾಮಿ, ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ. ಪ್ರಶಾಂತ್ ಸಮಯೋಚಿತವಾಗಿ ಮಾತನಾಡಿದರು. ಕಾಲೇಜಿನ ಐಕ್ಯೂಎಸಿ ಮುಖ್ಯಸ್ಥ ಡಾ. ನಾಗರಾಜ್ ಇದ್ದರು.