ಕನ್ನಡಪ್ರಭ ವಾರ್ತೆ ಮಂಗಳೂರು ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ 34ನೇ ವರ್ಷದ ನವರಾತ್ರಿ ಉತ್ಸವದ ನವದುರ್ಗೆಯರ ಆರಾಧನೆ ಹಾಗೂ ಸಾಂಸ್ಕೃತಿಕ ಉತ್ಸವಗಳಿಗೆ ಭಾನುವಾರ ಅದ್ದೂರಿ ಚಾಲನೆ ನೀಡಲಾಯಿತು. ಕರ್ಣಾಟಕ ಬ್ಯಾಂಕ್ ಅಧ್ಯಕ್ಷ ಪ್ರದೀಪ್ ಕುಮಾರ್ ಪಂಜ ಅವರು ದೀಪ ಬೆಳಗಿಸಿ ಒಂಭತ್ತು ದಿನಗಳ ನವರಾತ್ರಿ ಉತ್ಸವಕ್ಕೆ ಶಾರದಾ ಮಾತೆಯ ಮಂಟಪ ಎದುರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಮೈಸೂರು ದಸರಾ ಹೊರತುಪಡಿಸಿದರೆ ನಾಡಿನೆಲ್ಲೆಡೆ ಮಂಗಳೂರು ದಸರಾ ಕೂಡ ಪ್ರಸಿದ್ಧಿ ಪಡೆದಿದೆ. ಕುದ್ರೋಳಿಯಲ್ಲಿ ನಡೆಯುತ್ತಿರುವ ಈ ನವರಾತ್ರಿ ಉತ್ಸವ ನೋಡಿ ಸಂತಸಗೊಂಡಿದ್ದೇನೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಆರಂಭದ ದಿನವೇ ಭಕ್ತರ ಗಢಣವನ್ನು ನೋಡಿದ್ದೇನೆ. ಅತ್ಯಂತ ಯಶಸ್ವಿಯಾಗಿ ಈ ದಸರಾ ಉತ್ಸವ ನಡೆಯಲಿ ಎಂದು ಹಾರೈಸಿದರು. ಶಾಸಕ ವೇದವ್ಯಾಸ್ ಕಾಮತ್, ಮಹಾನಗರ ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ವಿಪಕ್ಷ ನಾಯಕ ಪ್ರವೀಣ್‌ಚಂದ್ರ ಶೆಟ್ಟಿ, ಪಾಲಿಕೆ ಸದಸ್ಯ ಕಿರಣ್ ಕುಮಾರ್, ಬಿಜೆಪಿ ಮುಖಂಡ ಕ್ಯಾ.ಬ್ರಿಜೇಶ್ ಚೌಟ, ಜಿ.ಪಂ. ಮಾಜಿ ಸದಸ್ಯೆ ಮಮತಾ ಗಟ್ಟಿ, ಕರ್ಣಾಟಕ ಬ್ಯಾಂಕ್ ಮಾಜಿ ಅಧಿಕಾರಿ ಶ್ರೀನಿವಾಸ್ ದೇಶಪಾಂಡೆ, ದೇವಸ್ಥಾನದ ನವೀಕರಣದ ರೂವಾರಿ, ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಎಚ್.ಎಸ್.ಸಾಯಿರಾಂ, ಉಪಾಧ್ಯಕ್ಷೆ ಉರ್ಮಿಳಾ ರಮೇಶ್, ಪ್ರಧಾನ ಕಾರ್ಯದರ್ಶಿ ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮರಾಜ್ ಆರ್., ಸಮಿತಿ ಸದಸ್ಯರಾದ ರವಿಶಂಕರ್ ಮಿಜಾರ್, ಮಹೇಶ್ಚಂದ್ರ, ಶೇಖರ್ ಪೂಜಾರಿ, ಸಂತೋಷ್ ಕುಮಾರ್, ಜಗದೀಪ್ ಡಿ.ಸುವರ್ಣ, ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಸಹ ಅಧ್ಯಕ್ಷೆ ಡಾ.ಅನಸೂಯಾ ಬಿ.ಟಿ.ಸಾಲಿಯಾನ್, ಉಪಾಧ್ಯಕ್ಷ ಡಾ.ಬಿ.ಜಿ.ಸುವರ್ಣ, ಸದಸ್ಯರಾದ ಹರಿಕೃಷ್ಣ ಬಂಟ್ವಾಳ್, ಲೀಲಾಕ್ಷ ಕರ್ಕೇರ ಮತ್ತಿತರರಿದ್ದರು. ನವದುರ್ಗೆಯರ ಪ್ರತಿಷ್ಠೆ: ಇದೇ ಸಂದರ್ಭ ಗಣಪತಿ, ಶಾರದೆ ಸಹಿತ ನವದುರ್ಗೆಯರ ಪ್ರತಿಷ್ಠಾಪನೆ ನೆರವೇರಿಸಲಾಯಿತು. ಮಹಾಗಣಪತಿ, ಶಾರದೆ, ಆದಿಶಕ್ತಿ, ಸ್ಕಂದ ಮಾತೆ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ಧಿಧಾತ್ರಿ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ ದೇವಿ ಪ್ರತಿಷ್ಠಾಪನೆ ಪೂಜೆ ಭಾನುವಾರ ವೈಭವದಿದ ನಡೆಯಿತು. ದರ್ಬಾರು ಮಂಟಪದಲ್ಲಿ ಗಣಪತಿ, ಆದಿಶಕ್ತಿ ಮತ್ತು ನವದುರ್ಗೆಯರನ್ನು ತಂದ ಬಳಿಕ ದೇವಸ್ಥಾನದಲ್ಲಿ ಗುರುಪ್ರಾರ್ಥನೆ, ಕಲಶ ಪ್ರತಿಷ್ಠೆ, ಧಾರ್ಮಿಕ ಕಾರ್ಯಕ್ರಮಗಳು ನೆರವೇರಿತು. ಇದಾದ ನಂತರ ಸ್ಯಾಕ್ಸ್‌ಫೋನ್ ತಂಡ, ಬ್ಯಾಂಡ್, ಚೆಂಡೆ ತಂಡ, ಹುಲಿ ವೇಷದೊಂದಿಗೆ ಶಾರದೆ ಮೂರ್ತಿಯನ್ನು ದೇವಾಲಯಕ್ಕೆ ಪ್ರದಕ್ಷಿಣೆ ಹಾಕಿ ಬಳಿಕ ಪ್ರತಿಷ್ಠಾಪನೆ ನಡೆಯಿತು. ಈ ಅಪೂರ್ವ ಕ್ಷಣಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ಬೆಳಗ್ಗೆ ಮಹಾನವಮಿ ಉತ್ಸವ, ಗುರು ಪ್ರಾರ್ಥನೆ, ಪುಣ್ಯಾಹ ಹೋಮ, ನವಕ ಕಲಶಾಭಿಷೇಕ, ಕಲಶ ಪ್ರತಿಷ್ಠಾಪನೆ, ಮಧ್ಯಾಹ್ನ ಪುಷ್ಪಾಲಂಕಾರ ಪೂಜೆ, ರಾತ್ರಿ ಭಜನೆ, ಉತ್ಸವ ನಡೆಯಿತು. ಇಂದು ಮಂಗಳೂರು ದಸರಾ ಉತ್ಸವಕ್ಕೆ ಡಿಕೆಶಿ ಚಾಲನೆ ಕುದ್ರೋಳಿ ದೇವಸ್ಥಾನದ ನವರಾತ್ರಿ ದಸರಾ ಉತ್ಸವಕ್ಕೆ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅ.16ರಂದು ಸಂಜೆ 6.30ಕ್ಕೆ ಚಾಲನೆ ನೀಡಲಿದ್ದಾರೆ. ಕ್ಷೇತ್ರದ ನವೀಕರಣದ ರೂವಾರಿ, ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ. ಕಣ್ಮನ ಸೆಳೆಯುವ ದರ್ಬಾರ್ ಮಂಟಪ ಈ ಬಾರಿ ನವದುರ್ಗೆಯರನ್ನು ಪ್ರತಿಷ್ಠಾಪಿಸಿದ ದರ್ಬಾರ್ ಮಂಟಪಕ್ಕೆ ಐತಿಹಾಸಿಕ ಬೇಲೂರಿನ ಮಾದರಿಯಲ್ಲಿ ಕೆತ್ತನೆಯ ಟಚ್ ನೀಡಲಾಗಿದೆ. ಹಾಗಾಗಿ ಈ ದರ್ಬಾರ್ ಮಂಟಪ ಸುತ್ತಮುತ್ತ ವಿದ್ಯುದ್ದೀಪಗಳಿಂದ ಅಲಂಕೃತಗೊಂಡು ಅತ್ಯಾಕರ್ಷಕವಾಗಿ ನೋಡುಗರ ಕಣ್ಮನ ಸೆಳೆಯುತ್ತಿದೆ. ಶಾರದಾ ದೇವಿಯ ಮಂಟಪವನ್ನು ಆಂಟಿಕ್ ಮಾದರಿಯ ಕಲಾಕೃತಿ ಬಳಸಿ ರಚಿಸಲಾಗಿದ್ದು, ಮೇಲ್ಭಾಗದಲ್ಲಿ ಗಾಳಿಯ ವೇಗದಿಂದ ತಿರುಗುವ ಮೇಲ್ಛಾವಣಿ ರಚಿಸಲಾಗಿದ್ದು ಗಮನ ಸೆಳೆಯುತ್ತಿದೆ. ಮಂಗಳೂರು ನಗರ ಅಲಂಕಾರ: ದಸರಾ ಸಲುವಾಗಿ ಮಂಗಳೂರು ನಗರಕ್ಕೆ ನಗರವೇ ಅಲಂಕಾರಗೊಂಡಿದೆ. ಪ್ರಮುಖ ರಸ್ತೆಯುದ್ಧಕ್ಕೂ ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದ್ದು, ಅಲ್ಲಲ್ಲಿ ಕೇಸರಿ ಪತಾಕೆ, ಬ್ಯಾನರ್, ಕಟೌಟ್ ರಾರಾಜಿಸುತ್ತಿದೆ. ಸಾಕ್ಷಾತ್ ದೇವಿಯೇ ಧರೆಗಿಳಿದು ಬಂದಂತೆ ಇಲ್ಲಿ ಪ್ರತಿಷ್ಠಾಪಿಸಿದ ನವದುರ್ಗೆಯರ ಮೂರ್ತಿ ಹೃನ್ಮನ ತಣಿಸುತ್ತಿದೆ. ಇಲ್ಲಿ ಜಾತಿ, ಭೇದ, ರಹಿತವಾಗಿ ಸೇರುತ್ತಾರೆ, ಮಂಗಳೂರು ದಸರೆಗೆ ಬರಲು ಎಲ್ಲರೂ ವರ್ಷಂಪ್ರತಿ ಕಾಯುತ್ತಾರೆ. ಇಲ್ಲಿ ಎಲ್ಲರಿಗೂ ಮುಕ್ತ ಆಹ್ವಾನವಿದೆ. ಇದೊಂದು ಸಾಮರಸ್ಯದ ಧಾರ್ಮಿಕ ಕ್ಷೇತ್ರ. -ಜನಾರ್ದನ ಪೂಜಾರಿ, ಕ್ಷೇತ್ರದ ನವೀಕರಣ ರೂವಾರಿ ಈ ಬಾರಿ ಕುದ್ರೋಳಿ ದಸರಾದಲ್ಲಿ ಹೊಸತನ ಅಳವಡಿಸಲಾಗಿದೆ. ಹೊಸ ಕಲ್ಪನೆಯಲ್ಲಿ ದರ್ಬಾರ್ ಮಂಟಪ, ರಾತ್ರಿ ಮ್ಯಾರಾಥಾನ್, ಫೋಟೋಗ್ರಫಿ, ವಿಡಿಯೋಗ್ರಫಿ ಸ್ಪರ್ಧೆಗಳು ನಡೆಯಲಿದೆ. ಮುಂದಿನ ವರ್ಷ ಕೃಷಿ ಮೇಳ ನಡೆಯುವ ಇರಾದೆ ಇದೆ. ಕೊನೆಯ ದಿನ ದಸರಾ ಮೆರವಣಿಗೆಯಲ್ಲಿ ಸಾಮರಸ್ಯದ ಪ್ರತೀಕವಾಗಿ ಕ್ರೈಸ್ತರಿಂದಲೂ ಟ್ಯಾಬ್ಲೋ ಇರಲಿದೆ. ಈ ಬಾರಿ ದೈವಾರಾಧನೆಗೆ ಅವಹೇಳನ ಮಾಡುವ ಯಾವುದೇ ಟ್ಯಾಬ್ಲೋಗೆ ಅವಕಾಶ ಇರುವುದಿಲ್ಲ. -ಪದ್ಮರಾಜ್ ಆರ್, ಕೋಶಾಧಿಕಾರಿ ಕಳೆದ 33 ವರ್ಷಗಳಿಂದ ಮಂಗಳೂರು ದಸರಾ ವಿಜೃಂಭಣೆಯಿಂದ ನಡೆಯುತ್ತಿದೆ. ಅದ್ಳೈತ ಸಿದ್ಧಾಂತದಡಿ ಆಗಮ ಶಾಸ್ತ್ರ ಪ್ರಕಾರ ಇಲ್ಲಿ ಉತ್ಸವಗಳು ನಡೆಯುತ್ತವೆ. ನಾರಾಯಣಗುರುಗಳ ಒಂದೇ ಜಾತಿ, ಧರ್ಮಗಳ ಬೋಧನೆಗೆ ಪೂರಕವಾಗಿ ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಲ್ಲಿ ಸನಾತನ ಧರ್ಮಕ್ಕೆ ಪೂರಕವಾಗಿ ಕುದ್ರೋಳಿ ಕ್ಷೇತ್ರ ಬೆಳಗುತ್ತಿದೆ. -ಹರಿಕೃಷ್ಣ ಬಂಟ್ವಾಳ್, ಅಭಿವೃದ್ಧಿ ಸಮಿತಿ ಸದಸ್ಯ