ಮತ್ತಿ ಗ್ರಾಮದ ಅಸ್ವಚ್ಛತೆಗೆ ಶಾಸಕ ಕೆ.ಎಸ್.ಬಸವಂತಪ್ಪ ಅಧಿಕಾರಿಗಳಿಗೆ ತರಾಟೆ
ಗ್ರಾಮದೆಲ್ಲೆಡೆ ಬಿದ್ದಿರುವ ಕಸದ ರಾಶಿ, ಚರಂಡಿಯಲ್ಲಿ ಕುಡಿಯುವ ನೀರಿನ ಪೈಪ್‌ಲೈನ್, ಚರಂಡಿ ನೀರು ಪೈಪ್ ಒಳಗೆ ಸೇರುವಂತಿರುವ ನಲ್ಲಿಗಳು ಹಾಗೂ ಸ್ವಚ್ಛತೆ ಇಲ್ಲದ ಶುದ್ಧ ಕುಡಿಯುವ ನೀರಿನ ಘಟಕ ಕಂಡು ಶಾಸಕ ಕೆ.ಎಸ್.ಬಸವಂತಪ್ಪ ಅಧಿಕಾರಿಗಳ ತರಾಟೆಗೆ ತೆಗೆದುಕೊಂಡರು.
ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಮತ್ತಿ ಗ್ರಾಮದಲ್ಲಿ ವಾಂತಿಭೇದಿಯಿಂದ ಮೃತಪಟ್ಟಿದ್ದ ಸೋಮಶೇಖರಪ್ಪ ನಿವಾಸಕ್ಕೆ ಭಾನುವಾರ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಬಳಿಕ ಶಾಸಕ ಕೆ.ಎಸ್.ಬಸವಂತಪ್ಪ ಗ್ರಾಮದಲ್ಲಿ ಸುತ್ತಾಡಿದಾಗ ಚರಂಡಿ ಮೇಲೆಯೇ ಸ್ನಾನದ ಮನೆ, ಶೌಚಾಲಯಗಳು, ರಸ್ತೆಯಲ್ಲೇ ಕೊಳಚೆ ನೀರು, ತಿಪ್ಪೆಗಳ ಕಂಡು ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾದರು.ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವಿದ್ದರೂ ಸರಿಯಾದ ನಿರ್ವಹಣೆ ಇಲ್ಲ, ನೀರು ಶುದ್ಧೀಕರಿಸದೆ ವಿತರಿಸುವುದರಿಂದ ಗ್ರಾಮಸ್ಥರು ನಲ್ಲಿ ನೀರೇ ಕುಡಿಯುತ್ತಿದ್ದಾರೆ. ಶಾಸಕರು ಭೇಟಿ ನೀಡುತ್ತಾರೆ ಎಂಬ ಕಾರಣಕ್ಕೆ ತರಾತುರಿಯಲ್ಲಿ ಘಟಕ ಸ್ವಚ್ಛಗೊಳಿಸಲಾಗಿದೆ ಎಂದು ಹೇಳಿದರು.
ನೀರು ಶುದ್ಧೀಕರಿಸಿ ಪೂರೈಸಿ:
ನಂತರ ಗ್ರಾಮ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಶಾಸಕ ಕೆ.ಎಸ್.ಬಸವಂತಪ್ಪ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಈ ವೇಳೆ ಚರಂಡಿಯಲ್ಲಿ ಹಾಕಿರುವ ಕುಡಿಯುವ ನೀರಿನ ಪೈಪ್‌ಲೈನ್ ಎತ್ತರ ಮಾಡಬೇಕು. ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ನೀರು ಶುದ್ಧೀಕರಿಸಿ ಪೂರೈಸಬೇಕು. ಚರಂಡಿಗಳನ್ನು ಸ್ವಚ್ಛತೆ ಮಾಡಬೇಕು. ಎಲ್ಲೆಂದರಲ್ಲಿ ಬಿದ್ದಿರುವ ಕಸ ತೆರವುಗೊಳಿಸಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದ ಶಾಸಕರು, ಮುಂದಿನ ದಿನಗಳಲ್ಲಿ ವಾಂತಿಭೇದಿ ಪ್ರಕರಣಗಳು ಮರುಕಳಿಸಿದರೆ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ್, ತಾಪಂ ಇಒ ರಾಮಬೋವಿ, ಟಿಎಚ್‌ಒ ದೇವರಾಜ್ ಪಾಟೆಗ, ಕುಡಿಯುವ ನೀರು ಸರಬರಾಜು ಇಲಾಖೆ ಎಇಇ ರವೀಂದ್ರ ನಾಯ್ಕ್, ಗ್ರಾಪಂ ಪಿಡಿಒ ವನಿತಾಬಾಯಿ, ಮತ್ತಿ ಗ್ರಾಪಂ ಅಧ್ಯಕ್ಷ ಸತೀಶ್, ಉಪಾಧ್ಯಕ್ಷ ಕಮಲಮ್ಮ, ಸದಸ್ಯ ಮಂಜುನಾಥ್, ಮುಖಂಡರಾದ ಶಿವಣ್ಣ, ಮುನೀರ್ ಸೇರಿ ಗ್ರಾಮಸ್ಥರಿದ್ದರು.
ನಗರಗಳಲ್ಲಿ ಸ್ಥಳೀಯ ಸಂಸ್ಥೆಗಳು ಪೌರ ಕಾರ್ಮಿಕರ ನೇಮಿಸಿ ನಗರ ಸ್ವಚ್ಛತೆ ಮಾಡಿಸುವಂತೆ ಗ್ರಾಮ ಪಂಚಾಯಿತಿಗಳಲ್ಲಿ ಪೌರ ಕಾರ್ಮಿಕರ ನೇಮಿಸಿಕೊಂಡು ಗ್ರಾಮಗಳ ಪ್ರತಿನಿತ್ಯ ಸ್ವಚ್ಛತೆ ಮಾಡಿದರೆ ಗ್ರಾಮದ ಜನರು ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು.ಕೆ.ಎಸ್.ಬಸವಂತಪ್ಪ, ಶಾಸಕ
.....