ಕನ್ನಡಪ್ರಭ ವಾರ್ತೆ ಕೋಲಾರ
ಜಿಲ್ಲಾ ಉಪಾಧ್ಯಕ್ಷ ವಿಜಯಕುಮಾರ್ ಮಾತನಾಡಿ, ತಮ್ಮ ಜೀವನವಿಡೀ ದೇಶಕ್ಕಾಗಿ ಬದುಕು ಮುಡಿಪಾಗಿಟ್ಟ ವಾಜಪೇಯಿಯವರಿಗೆ ಭಾರತ ರತ್ನ ನೀಡಲು ಮೋದಿ ಸರ್ಕಾರವೇ ಬರಬೇಕಾಯಿತು. ಕೆಲವು ನಾಯಕರೆನಿಸಿದವರು ತಮಗೆ ತಾವೇ ಭಾರತ ರತ್ನ ಕೊಟ್ಟುಕೊಂಡ ನಿದರ್ಶನಗಳ ನಡುವೆ ವಾಜಪೇಯಿಯವರಂತಹ ಪ್ರಾಮಾಣಿಕ ನಾಯಕರನ್ನು ಮರೆತು ಹೋಗಿದ್ದು ಮಾತ್ರ ದುರಂತದ ಸಂಗತಿ ಎಂದು ಬೇಸರಗೊಂಡರು.
ಆಜಾತ ಶತ್ರು, ಕವಿ ಹೃದಯಿ ರಾಜಕಾರಣಿ ವಾಜಪೇಯಿ ತಮ್ಮ ಆಡಳಿತಾವಧಿಯಲ್ಲಿ ಭಾರತದ ಹಿರಿಮೆ ಹೆಚ್ಚಿಸಿದ್ದಾರೆ. ಉನ್ನತ ಆದರ್ಶ ಹಾಗೂ ಮೌಲ್ಯಾಧಾರಿತ ರಾಜಕಾರಣದ ಮೂಲಕ ಮಾದರಿಯಾಗಿದ್ದು, ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತನೂ ಇವರ ಆದರ್ಶಗಳನ್ನು ಪಾಲಿಸುವ ಮೂಲಕ ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿಸಲು ಪಣತೊಟ್ಟು ನಿಲ್ಲಬೇಕಾಗಿದೆ ಎಂದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಓಂ ಶಕ್ತಿ ಚಲಪತಿ ಮಾತನಾಡಿ, ಅಟಲ್ ಬಿಹಾರಿ ವಾಜಪೇಯಿಯವರು ಮೂರು ಬಾರಿ ಕೋಲಾರಕ್ಕೆ ಬಂದಿದ್ದರು. ಕೋಲಾರಕ್ಕೆ ಪವರ್ ಗ್ರೀಡ್ ವಾಜಪೇಯಿ ಪ್ರಧಾನಿಯಾಗಿದ್ದಾಗ ನೀಡಿದ ಕೊಡುಗೆ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕ ಕೆಂಬೋಡಿ ನಾರಾಯಣಸ್ವಾಮಿ ಮಾತನಾಡಿ, ಮಾಜಿ ಪ್ರಧಾನಿ ವಾಜಪೇಯಿಯವರು ೧೦ ಬಾರಿ ಲೋಕಸಭಾ ಸದಸ್ಯರಾಗಿ, ಎರಡು ಬಾರಿ ರಾಜ್ಯಸಭಾ ಸದಸ್ಯರಾಗಿ ಮುರಾರ್ಜಿ ದೇಸಾಯಿ ಅವರ ಸರ್ಕಾರದಲ್ಲಿ ವಿದೇಶಾಂಗ ಮಂತ್ರಿಯಾಗಿ ಸೇವೆ ಸಲ್ಲಿಸಿ ಮೂರು ಬಾರಿ ಪ್ರಧಾನಮಂತ್ರಿಯಾಗಿ ದೇಶಕ್ಕಾಗಿ ದುಡಿದಿದ್ದಾರೆ ಎಂದರು.
ಗ್ರಾಮ ಸಡಕ್ ಯೋಜನೆಯಿಂದ ಪ್ರತಿ ಹಳ್ಳಿಗೂ ರಸ್ತೆ, ಪ್ರತಿ ಹಳ್ಳಿಗೂ ವಿದ್ಯುತ್, ಪ್ರತಿ ಶಾಲೆಗೂ ಸರ್ವ ಶಿಕ್ಷಣ ಅಭಿಯಾನದಲ್ಲಿ ಸುಣ್ಣ ಬಣ್ಣ ಬಳಿಯುವ ಕಾರ್ಯಕ್ರಮ ,ಆರು ಪಥದ ರಸ್ತೆಗಳು, ಇಡೀ ವಿಶ್ವಕ್ಕೆ ಭಾರತ ಬಲಿಷ್ಠ ದೇಶವೆಂದು ತೋರಿಸಿಕೊಟ್ಟಂಥ ಮಹಾನ್ ವ್ಯಕ್ತಿ ವಾಜಪೇಯಿ. ದೇಶದ ಜನತೆಗೆ ಹಲವಾರು ಯೋಜನೆಗಳು ನೀಡಿದಂಥ ಮಹಾನ್ ನಾಯಕನನ್ನು ದೇಶವು ಸದಾ ನೆನಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಈಗ ಪ್ರಧಾನಿ ನರೇಂದ್ರ ಮೋದಿಯವರು ವಾಜಪೇಯಿಯವರ ಆದರ್ಶಗಳನ್ನೇ ಮೈಗೂಡಿಸಿಕೊಂಡಿದ್ದು, ಭಾರತಕ್ಕೆ ವಿಶ್ವಮಾನ್ಯತೆ ತಂದುಕೊಟ್ಟಿದ್ದಾರೆ, ವಾಜಪೇಯಿ ಅವರು ತೋರಿಸಿದ ಮಾರ್ಗದಲ್ಲೇ ಸಾಗುತ್ತಿರುವ ಮೋದಿಯವರಿಂದ ಮಾತ್ರ ಭಾರತ ವಿಶ್ವ ಮಾನ್ಯತೆ ಪಡೆಯಲು ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.