ಸುಧೀಕ್ಷ ಇಂಟರ್ ನ್ಯಾಷನಲ್ ಸ್ಕೂಲ್ ಮತ್ತು ಪಿಯು ಕಾಲೇಜಿಗೆ ಭೇಟಿ
ಕನ್ನಡಪ್ರಭ ವಾರ್ತೆ ಸಿರುಗುಪ್ಪಭೂಮಿಗೆ ಬಿತ್ತಿದ ಬೀಜ. ಎದೆಗೆ ಬಿದ್ದ ಅಕ್ಷರ ಎಂದೂ ವ್ಯರ್ಥವಾಗುವುದಿಲ್ಲ. ಅವು ಉತ್ತಮ ಫಲ ನೀಡೇ ನೀಡುತ್ತದೆ ಎಂದು ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿ ಹೇಳಿದರು.
ತಾಲೂಕಿನ ಇಬ್ರಾಹಿಂಪುರ ಗ್ರಾಮದ ಸುಧೀಕ್ಷ ಇಂಟರ್ ನ್ಯಾಷನಲ್ ಸ್ಕೂಲ್ ಮತ್ತು ಪಿಯು ಕಾಲೇಜಿಗೆ ಭಾನುವಾರ ಭೇಟಿ ನೀಡಿದ ವೇಳೆ ಭಕ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.ನಮ್ಮ ಭಾಗದ ಮಕ್ಕಳು ಗುಣಮಟ್ಟ ಹಾಗೂ ಉನ್ನತ ಶಿಕ್ಷಣಕ್ಕಾಗಿ ರಾಜ್ಯದ ದಕ್ಷಿಣ ಭಾಗವಾದ ಮಂಗಳೂರು, ಮೈಸೂರು, ತುಮಕೂರು, ಬೆಂಗಳೂರು ಪ್ರದೇಶಗಳಿಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಈ ಭಾಗದಲ್ಲಿ ಉತ್ತಮವಾದ ಸೌಲಭ್ಯ ಹೊಂದಿರುವ ಶಾಲೆಗಳು ಪ್ರಾರಂಭವಾಗಿರುವುದರಿಂದ ಬೇರೆ ಜಿಲ್ಲೆಯ ಮಕ್ಕಳು ಉತ್ತರ ಕರ್ನಾಟಕದ ಗವಿಮಠ ಸೇರಿದಂತೆ ಅನೇಕ ಶಾಲೆಗಳಿಗೆ ಬರುತ್ತಿದ್ದಾರೆ.
ಗ್ರಾಮೀಣ ಭಾಗದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಉದ್ದೇಶದಿಂದ ಸುಸಜ್ಜಿತವಾದ ಕಟ್ಟಡ ನಿರ್ಮಾಣ ಮಾಡಿರುವ ಸುಧೀಕ್ಷ ಇಂಟರ್ ನ್ಯಾಷನಲ್ ಸ್ಕೂಲ್ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುತ್ತಿದೆ. ಈ ಮೂಲಕ ಕಲ್ಯಾಣ ಕರ್ನಾಟಕದ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಶ್ರಮಿಸುತ್ತಿದೆ ಎಂದು ಹೇಳಿದರು.ಮಕ್ಕಳು ತಮ್ಮ ಮುಂದಿನ ಗುರಿಯ ಬಗ್ಗೆ ಕನಸು ಇರಬೇಕು. ಕನಸು ನನಸಾಗಿಸಿಕೊಳ್ಳುವ ಸದೃಢತೆ ಬೇಕು. ದೂರದ ನಗರ ಪ್ರದೇಶಗಳಿಗೆ ಹೋಗದೆ ನಮ್ಮಲ್ಲಿರುವ ಶಿಕ್ಷಣ ಸಂಸ್ಥೆಗಳಲ್ಲಿ ಕಲಿತು ಶೈಕ್ಷಣಿಕ ಉನ್ನತಿ ಸಾಧಿಸಬೇಕು.
ವಿದ್ಯಾರ್ಥಿ ದಿಸೆಯಲ್ಲಿಯೇ ಉತ್ತಮ ಆಚಾರ ವಿಚಾರ, ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಶ್ರೀಗಳು ತಿಳಿಸಿದರು.ಸಂಸ್ಥೆಯ ಅಧ್ಯಕ್ಷ ಪುಲ್ಲಪತ್ತಿ ರಾಮ್ ಬಾಬು, ವ್ಯವಸ್ಥಾಪಕಿ ಪಿ.ನಾಗಶಿವಾನಿ ಲಕ್ಷ್ಮಿ, ಪ್ರಾಂಶುಪಾಲರಾದ ಸ್ವಪ್ನ, ರಾಘವ ರಾವ್, ಮುಖಂಡರಾದ ಡಿ.ವೆಂಕಟ ಸ್ವಾಮಿ ನಾಯ್ಡು ಇದ್ದರು.