ಡಾ.ಸಿ.ಎಂ. ಜೋಶಿ
ಬೂದಿನಗಡ ಮಾರ್ಗದ ರಸ್ತೆ ಅಕ್ಕಪಕ್ಕ ಸಾಕಷ್ಟು ಅರಣ್ಯ ಪ್ರದೇಶದಲ್ಲಿ ಗಿಡಮರಗಳು ಬೆಳೆದಿದ್ದು, ನಿತ್ಯ ಅವುಗಳ ಮಧ್ಯೆ ಅನೈತಿಕ ಚಟುವಟಿಕೆ ನಡೆಯುತ್ತಿದ್ದು, ಅವುಗಳಿಂದಾಗುವ ಅಪಾಯ ತಪ್ಪಿಸಲು ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ತಾಲೂಕಿನ ನಾಗರಿಕರು ಆಗ್ರಹಿಸಿದ್ದಾರೆ.
ತಾಲೂಕಿನ ಬೂದಿನಗಡ ಗ್ರಾಮದಿಂದ ಮುಂದಕ್ಕೆ ಒಂದು ಕಿಮೀ ಅಂತರದ ಶಿರೂರ ಮಾರ್ಗದ ಮತ್ತು ಬೆನಕಟ್ಟಿ ಮಾರ್ಗದಲ್ಲಿ ಅರಣ್ಯ ಪ್ರದೇಶವಿದೆ. ಇದು ಸಾಕಷ್ಟು ವಿಸ್ತಾರವಾಗಿ ಹರಡಿಕೊಂಡಿದೆ. ಒಂದು ವರ್ಷದಿಂದ ಈ ಅರಣ್ಯ ಪ್ರದೇಶದಲ್ಲಿ ಹೆಚ್ಚಿನ ಗಿಡಮರಗಳು ಬೆಳೆದಿವೆ. ಇಲ್ಲಿ ದಿನನಿತ್ಯ ಅನೇಕ ಬಗೆಯ ಅನೈತಿಕ ಚಟುವಟಿಕೆ ನಡೆದಿರುತ್ತವೆ ಎಂದು ಈ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರು ಆರೋಪಿಸಿದ್ದಾರೆ.ಮದ್ಯಪಾನ ಮಾಡುವವರು ಈ ಅರಣ್ಯ ಪ್ರದೇಶದಲ್ಲಿ ನಿತ್ಯ ಕುಳಿತು ಮದ್ಯ ಸೇವಿಸಿ ಪರಸ್ಪರ ಕಚ್ಚಾಟ ಮಾಡುವ, ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿ ಅಪಘಾತಕ್ಕೆ ಬಲಿಯಾಗಿರುವ ಉದಾಹರಣೆಗಳಿವೆ. ಇಂತಹ ಘಟನೆಗಳು ನಿತ್ಯ ನಡೆದಿರುತ್ತವೆ. ಆದರೂ ಅರಣ್ಯ ಇಲಾಖೆಯ ಸಿಬ್ಬಂದಿ ಇಂತಹ ಘಟನೆಗಳಿಗೆ ಕಡಿವಾಣ ಹಾಕುತ್ತಿಲ್ಲ ಎಂಬುದು ನಾಗರಿಕರ ಆರೋಪ.
ಇನ್ನು ಕೆಲವರು ಗಾಂಜಾ, ಜೂಜು ಆಡಲು ಈ ಸ್ಥಳಗಳನ್ನೂ ಅಡ್ಡೆ ಮಾಡಿಕೊಂಡಿದ್ದಾರೆಂದು ಹೇಳಲಾಗುತ್ತದೆ. ಈ ಅರಣ್ಯ ಪ್ರದೇಶದಲ್ಲಿ ನವಿಲು, ಮೊಲ, ಜಿಂಕೆ, ತೋಳ, ನರಿ ಮುಂತಾದ ವನ್ಯ ಜೀವಿಗಳು ವಾಸವಾಗಿವೆ. ಕೆಲ ಪುಂಡರ ಅನೈತಿಕ ಚಟುವಟಿಕೆಗಳ ತಾಣವಾಗಿರುವುದರಿಂದ ಈ ಪ್ರದೇಶದಲ್ಲಿ ವನ್ಯ ಜೀವಿಗಳ ಸಂರಕ್ಷಣೆ ಆಗುತ್ತಿಲ್ಲ ಎಂಬುವುದು ಪರಿಸರವಾದಿಗಳ ಅಳಲು.
- ರಂಗನಾಥ ಹೊಸಮನಿ ಸಹಾಯಕ ವಲಯ ಅರಣ್ಯಾಧಿಕಾರಿ ಗುಳೇದಗುಡ್ಡ