ಮಹದೇವಪ್ಪ ಎಂ. ಸ್ವಾಮಿಶಿರಹಟ್ಟಿ: ಬೇಸಿಗೆ ಪೂರ್ಣವಾಗಿ ಆರಂಭವಾಗುವುದಕ್ಕೂ ಮುನ್ನವೇ ತಾಲೂಕಿನ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದ್ದು, ಬೋರ್‌ವೆಲ್‌ಗಳಲ್ಲೂ ನೀರಿನ ಕೊರತೆ ಕಂಡುಬರುತ್ತಿದೆ.
ಫಲ ಕೊಡದ ಜೆಜೆಎಂ: ತಾಲೂಕಿನ ೧೪ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲೂ ಜಲಜೀವನ್ ಮಿಷನ್ ಕಾಮಗಾರಿ ನಡೆದಿದೆ. ಕೆಲವು ಕಡೆ ನಡೆಯುತ್ತಲೇ ಇದೆ. ಆದರೆ ಎಲ್ಲಿಯೂ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ಕೆಲವು ಗ್ರಾಮಗಳಲ್ಲಿ ಮನೆ ಮನೆಗೆ ಅಳವಡಿಸಿರುವ ನಳಗಳು ತುಕ್ಕು ಹಿಡಿದಿವೆ. ಕೋಟ್ಯಂತರ ರುಪಾಯಿ ಜೆಜೆಎಂ ಕಾಮಗಾರಿ ಫಲ ಕೊಟ್ಟಿಲ್ಲ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿಬಂದಿವೆ.ಹಲವೆಡೆ ಜೆಜೆಎಂ ಕಾಮಗಾರಿ ಪೂರ್ಣಗೊಂಡಿದ್ದು, ಆದರೆ ನೀರು ಪೂರೈಕೆಯಾಗುತ್ತಿಲ್ಲ. ಕೆಲವೊಂದು ಕಡೆ ಇನ್ನೂ ಸಂಪರ್ಕವನ್ನೇ ಒದಗಿಸಿಲ್ಲ. ಈ ಬಾರಿ ಬೇಸಿಗೆಯಲ್ಲಿ ಬಹುತೇಕ ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಲೆದೋರುವ ಎಲ್ಲ ಸಾಧ್ಯತೆ ಕಂಡುಬರುತ್ತಿದೆ.
ತಾಲೂಕಿನ ಹೊಳೆಇಟಗಿ ಗ್ರಾಮದಲ್ಲಿ ಹರಿದಿರುವ ತುಂಗಭದ್ರಾ ನದಿ ನೀರು ಪೂರೈಕೆ ಕಳೆದ ಆರೇಳು ವರ್ಷಗಳಿಂದ ಸ್ಥಗಿತಗೊಂಡಿದೆ. ಶಿರಹಟ್ಟಿ ಪಟ್ಟಣಕ್ಕೆ ಪಟ್ಟಣ ಪಂಚಾಯಿತಿ ವತಿಯಿಂದ ತಾತ್ಕಾಲಿಕವಾಗಿ ಏಳು ದಿನಗಳಿಗೊಮ್ಮೆ ಎಲ್ ಆ್ಯಂಡ್ ಟಿ ಕಂಪನಿ ಮೂಲಕ ನೀರು ಪೂರೈಸಲಾಗುತ್ತಿದೆ. ರಸ್ತೆ ಕಾಮಗಾರಿ ನೆಪದಲ್ಲಿ ನೀರು ಪೂರೈಕೆಗೆ ಕೋಟ್ಯಂತರ ರು. ಹಣ ವಿನಿಯೋಗ ಮಾಡಿ ರಸ್ತೆ ಪಕ್ಕದಲ್ಲಿ ಹಾಕಲಾಗಿದ್ದ ಎಲ್ಲ ಪೈಪ್‌ಗಳನ್ನು ಕಿತ್ತೆಸೆಯಲಾಗಿದೆ.ಸಧ್ಯ ಮತ್ತೆ ಪೈಪ್‌ಲೈನ್ ಕಾಮಗಾರಿ ಆರಂಭಿಸಿದ್ದು, ಬೇಸಿಗೆ ಮುಗಿದರೂ ಈ ಕಾಮಗಾರಿ ಪೂರ್ಣಗೊಳ್ಳುವುದಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಕಾಮಗಾರಿ ಕೈಗೆತ್ತಿಕೊಂಡಿರುವ ಗುತ್ತಿಗೆದಾರರು ಯಾರೆಂಬುದೇ ತಿಳಿಯುತ್ತಿಲ್ಲ. ರಸ್ತೆಯ ಎರಡು ಬದಿಗಳಲ್ಲಿಯೂ ಪೈಪ್‌ಗಳನ್ನು ಇಳಿಸಿದ್ದಾರೆ. ಆದರೆ ಜೋಡಣೆ ಕಾರ್ಯ ಮಾತ್ರ ಮಂದಗತಿಯಲ್ಲಿ ಸಾಗಿದ್ದು, ಸಾರ್ವಜನಿಕರಿಗೆ ಯಾವಾಗ ನೀರು ದೊರೆಯುತ್ತದೆ ಎನ್ನುವ ಪ್ರಶ್ನೆ ಕಾಡತೊಡಗಿದೆ.
ಪ್ರಯೋಜನವಾಗಿಲ್ಲ: ಬನ್ನಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಗ್ನಳ್ಳಿ, ಹಡಗಲಿ ಗ್ರಾಮಗಳಲ್ಲಿ ಸಧ್ಯ ೩- ೪ ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಜೆಜೆಎಂ ಕಾಮಗಾರಿಯಿಂದ ಯಾವುದೇ ಪ್ರಯೋಜನವಾಗಿಲ್ಲ. ಇವತ್ತಿನವರೆಗೂ ಹನಿ ನೀರು ಕೂಡ ಬಂದಿಲ್ಲ. ಸಧ್ಯ ಈ ಎಲ್ಲ ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ಮೋಟರ್‌ನಿಂದ ನೀರು ಎತ್ತಿ ಜನರಿಗೆ ನೀರು ಪೂರೈಸಲಾಗುತ್ತಿದೆ ಎಂದು ಬನ್ನಿಕೊಪ್ಪದ ಪಿಡಿಒ ಸುರೇಶ ಲಮಾಣಿ ತಿಳಿಸಿದರು.