ಜೀವಕ್ಕೆ ಅಪಾಯ ತಂದೊಡ್ಡುವ ಪಾರ್ಶ್ವವಾಯು

KannadaprabhaNewsNetwork |  
Published : Oct 30, 2024, 12:50 AM IST
ವಾಕ್ಥಾನ | Kannada Prabha

ಸಾರಾಂಶ

ಯುವಕರು, ವಯಸ್ಕರು ಸೇರಿದಂತೆ ಎಲ್ಲ ವರ್ಗದ ಜನರಲ್ಲಿ ಕಂಡು ಬರುತ್ತಿರುವ ಪಾರ್ಶ್ವವಾಯು ಕಾಯಿಲೆಯು ಅನೇಕರ ಜೀವಕ್ಕೆ ಅಪಾಯ ತಂದೊಡ್ಡುವ ಜತೆಗೆ ಕೆಲವರಲ್ಲಿ ಶಾಶ್ವತ ಅಂಗವೈಕಲ್ಯ ಸಹ ಉಂಟು ಮಾಡುತ್ತಿದೆ.

ಹುಬ್ಬಳ್ಳಿ:

ಇತ್ತೀಚಿನ ದಿನಗಳಲ್ಲಿ ಪಾರ್ಶ್ವವಾಯು ಕಾಯಿಲೆ ಎಲ್ಲ ವರ್ಗದ ಜನರನ್ನು ಬಾಧಿಸುತ್ತಿದ್ದು, ಮೃತ್ಯು ಪ್ರಮಾಣದಲ್ಲಿ ವಿಶ್ವದಲ್ಲೇ 2ನೇ ಸ್ಥಾನದಲ್ಲಿರುವುದು ಆತಂಕಕಾರಿ ಎಂದು ಸ್ವರ್ಣ ಗ್ರೂಪ್ ಆಫ್ ಕಂಪನೀಸ್ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್.ವಿ. ಪ್ರಸಾದ್ ಕಳವಳ ವ್ಯಕ್ತಪಡಿಸಿದರು.

ವಿಶ್ವ ಪಾರ್ಶ್ವವಾಯು ದಿನ ಅಂಗವಾಗಿ ನಗರದ ಶ್ರೀಬಾಲಾಜಿ ಆಸ್ಪತ್ರೆ ವತಿಯಿಂದ ಮಂಗಳವಾರ ಸ್ಟ್ರೋಕ್ ಕುರಿತು ಜನಜಾಗೃತಿ ಮೂಡಿಸಲು ಆಸ್ಪತ್ರೆ ಆವರಣದಿಂದ ಹಮ್ಮಿಕೊಂಡಿದ್ದ ವಾಕ್‌ಥಾನ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.

ಯುವಕರು, ವಯಸ್ಕರು ಸೇರಿದಂತೆ ಎಲ್ಲ ವರ್ಗದ ಜನರಲ್ಲಿ ಕಂಡು ಬರುತ್ತಿರುವ ಪಾರ್ಶ್ವವಾಯು ಕಾಯಿಲೆಯು ಅನೇಕರ ಜೀವಕ್ಕೆ ಅಪಾಯ ತಂದೊಡ್ಡುವ ಜತೆಗೆ ಕೆಲವರಲ್ಲಿ ಶಾಶ್ವತ ಅಂಗವೈಕಲ್ಯ ಸಹ ಉಂಟು ಮಾಡುತ್ತಿದೆ. ಪಾರ್ಶ್ವವಾಯು ಸಮಸ್ಯೆ ಬಗ್ಗೆ ಪ್ರತಿಯೊಬ್ಬರೂ ಜಾಗರೂಕರಾಗಿರಬೇಕು. ನಿಯಮಿತ ವ್ಯಾಯಾಮ, ಒತ್ತಡ ನಿರ್ವಹಣೆ, ಆರೋಗ್ಯಕರ ಆಹಾರ ಸೇವನೆ ಮೂಲಕ ಕಾಯಿಲೆ ಬಾರದಂತೆ ಕಾಪಾಡಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಶ್ರೀಬಾಲಾಜಿ ಆಸ್ಪತ್ರೆ ಚೇರಮನ್ ಡಾ. ಕ್ರಾಂತಿಕಿರಣ ಮಾತನಾಡಿ, ಪ್ರತಿ ವರ್ಷ ಜಗತ್ತಿನಾದ್ಯಂತ ಪ್ರತಿ ನಾಲ್ಕು ಜನರ ಪೈಕಿ ಒಬ್ಬರಿಗೆ ಪಾರ್ಶ್ವವಾಯು ಬರುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ-ಅಂಶಗಳ ಪ್ರಕಾರ ಹೃದಯಾಘಾತ ನಂತರ ಅತಿ ಹೆಚ್ಚು ಜನರನ್ನು ಕೊಲ್ಲುವ ಮಾರಾಣಾಂತಿಕ ಕಾಯಿಲೆ ಇದಾಗಿದೆ. ರಕ್ತದೊತ್ತಡ, ಮಧುಮೇಹ, ಅಧಿಕ ಬೊಜ್ಜು, ವ್ಯಾಯಾಮ ರಹಿತ ಜೀವನ, ಆರೋಗ್ಯದ ಕುರಿತ ನಿಷ್ಕಾಳಜಿ, ಒತ್ತಡದ ದಿನಚರಿಯಿಂದ ಹದಿಹರೆಯದ ಯುವಕರೂ ಪಾರ್ಶ್ವವಾಯುವಿಗೊಳಗಾಗುತ್ತಿದ್ದಾರೆ. ಪಾರ್ಶ್ವವಾಯುವಿನ ಲಕ್ಷಣಗಳು ಕಂಡು ಬಂದ ಮೊದಲ 3 ತಾಸಿನೊಳಗೆ ಸೂಕ್ತ ಚಿಕಿತ್ಸೆ ದೊರೆತರೆ ಸಾವು-ನೋವು, ಅಂಗ ನ್ಯೂನತೆ ಸೇರಿದಂತೆ ಇತರೆ ಸಮಸ್ಯೆಯಿಂದ ಪಾರಾಗಬಹುದು ಎಂದು ಹೇಳಿದರು.

ಐಎಂಎ ಹುಬ್ಬಳ್ಳಿ ಘಟಕದ ಅಧ್ಯಕ್ಷ ಡಾ. ಪ್ರಭು ಬಿರಾದಾರ್, ಕನಕದಾಸ ಶಿಕ್ಷಣ ಸಂಸ್ಥೆಯ ಸಂದೀಪ್ ಬೂದಿಹಾಳ, ಸೆಂಟ್ ಫಾಲ್ಸ್ ಶಾಲೆಯ ಫಾದರ್ ಜೋಸೆಫ್, ಹಿರಿಯ ನಾಗರಿಕರ ಸಂಘದ ಎಂ.ಕೆ. ನಾಯ್ಕರ್, ಶಂಕರಗೌಡ್ರು, ಗುರುಪಾದ ಕಮ್ಮಾರ ಸೇರಿದಂತೆ 8ಕ್ಕೂ ಹೆಚ್ಚು ಕಾಲೇಜಿನ ನೂರಾರು ವಿದ್ಯಾರ್ಥಿಗಳು, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಪಾರ್ಶ್ವವಾಯು ಸಮಸ್ಯೆಗೆ ಕಾರಣ ಮತ್ತು ಅದರಿಂದ ಪಾರಾಗುವ ವಿಧಾನಗಳ ಕುರಿತ ಮಾಹಿತಿ ಕಿರುಹೊತ್ತಿಗೆ ಬಿಡುಗಡೆ ಮಾಡಲಾಯಿತು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ