ಎರಡು ಬಾರಿ ಗೆದ್ದ ಕುಮಾರರಸ್ವಾಮಿ ಏನು ಮಾಡಿದರು: ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪ್ರಶ್ನೆ

KannadaprabhaNewsNetwork |  
Published : Oct 30, 2024, 12:50 AM ISTUpdated : Oct 30, 2024, 01:05 PM IST
ಪೊಟೋ೨೯ಸಿಪಿಟಿ೪:  ತಾಲೂಕಿನ ಮಾಕಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿದ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್,  ಮಾಜಿ ಸಂಸದ ಡಿ.ಕೆ.ಸುರೇಶ್, ಮುಖಂಡ ರಘುನಂದನ್ ರಾಮಣ್ಣ ಅವರನ್ನು ಯುವ ಮುಖಂಡ ಕರಣ್ ಆನಂದ್ ಸನ್ಮಾನಿಸಿದರು. | Kannada Prabha

ಸಾರಾಂಶ

 ನಾನು ಕಳೆದ ಎರಡು ಬಾರಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದೇನೆ. ಆದರೆ, ನನ್ನ ವಿರುದ್ಧ ಗೆಲುವು ಸಾಧಿಸಿದ ಕುಮಾರರಸ್ವಾಮಿ ಏನು ಕೆಲಸ ಮಾಡಿದರು ಎಂದು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪ್ರಶ್ನಿಸಿದರು.

ಚನ್ನಪಟ್ಟಣ: ನಾನು ಕಳೆದ ಎರಡು ಬಾರಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದೇನೆ. ಆದರೆ, ನನ್ನ ವಿರುದ್ಧ ಗೆಲುವು ಸಾಧಿಸಿದ ಕುಮಾರರಸ್ವಾಮಿ ಏನು ಕೆಲಸ ಮಾಡಿದರು ಎಂದು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪ್ರಶ್ನಿಸಿದರು.

ತಾಲೂಕಿನ ಬೇವೂರು ಜಿಲ್ಲಾ ಪಂಚಾಯಿತಿಯ ಕೋಟೆ ಹೊಲ ಗ್ರಾಮದಿಂದ ಪ್ರಚಾರ ಆರಂಭಿಸಿದ ಅವರು, ಮಾಕಳಿ ಗ್ರಾಮದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದರು. ಅವರು ನಾನು ತಂದಿದ್ದ ಅನುದಾನವನ್ನೇ ಸರಿಯಾಗಿ ಬಳಸಿಕೊಳ್ಳಲಿಲ್ಲ. ಈಗ ನಾನು ಅಭಿವೃದ್ಧಿಗಾಗಿ ಕಾಂಗ್ರೆಸ್ ಸೇರಿದ್ದೇನೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಈ ಬಾರಿ ಅವಕಾಶ ಸಿಕ್ಕರೆ ಮತ್ತಷ್ಟು ಅಭಿವೃದ್ಧಿ ಮಾಡುತ್ತೇನೆ ಎಂದು ಹೇಳಿದರು.

ನಾನು ಮತ್ತೆ ಗೆದ್ದು ಕೆರೆಗಳನ್ನ ತುಂಬಿಸುವ ಕೆಲಸ ಮಾಡುತ್ತೇನೆ. ಎಲ್ಲರೂ ಆಶೀರ್ವಾದ ಮಾಡಿ ಗೆಲ್ಲಿಸಿಕೊಡಿ. ಕುಮಾರಸ್ವಾಮಿ ಚನ್ನಪಟ್ಟಣ ಬಿಟ್ಟು ಮಂಡ್ಯಕ್ಕೆ ಹೋಗಿದ್ದಾರೆ. ಈಗ ಅವರ ಮಗನನ್ನ ತಂದು ಚುನಾವಣೆಗೆ ನಿಲ್ಲಿಸಿದ್ದಾರೆ. ಅವರು ಎರಡು ಬಾರಿ ಗೆದ್ದು ಏನು ಕೆಲಸ ಮಾಡಿದ್ದಾರೆಂದು ನೀವೇ ಯೋಚನೆ ಮಾಡಿ ನೋಡಿ. ಜೆಡಿಎಸ್ ಜೆಡಿಎಸ್ ಅಂತ ಜನ ತೊಂದರೆಯಲ್ಲಿ ಸಿಕ್ಕಿಹಾಕಿಕೊಳ್ತಿದ್ದಾರೆ. ಈ ಬಾರಿ ಅದಕ್ಕೆ ಅವಕಾಶ ಕೊಡಬೇಡಿ, ದಯಮಾಡಿ ಈ ಬಾರಿ ಒಂದು ಅವಕಾಶ ಕೊಟ್ಟು ಗೆಲ್ಲಿಸಿಕೊಡಿ ಎಂದು ಯೋಗೇಶ್ವರ್ ಮನವಿ ಮಾಡಿದರು.

ಎರಡು ಬಾರಿ ಸೋತಿದ್ದೇನೆ, ಜನ ಈ ಬಾರಿ ಆಶೀರ್ವಾದ ಮಾಡ್ತಾರೆ ಎನ್ನುವ ವಿಶ್ವಾಸ ಇದೆ. ನನ್ನ ಕೆಲಸಗಳು ಈ ಬಾರಿ ಗೆಲುವಿಗೆ ಅವಕಾಶ ಮಾಡುತ್ತವೆ. ಈ ಕ್ಷೇತ್ರದ ಅಭಿವೃದ್ಧಿಗಾಗಿ ಜನ ಬೆಂಬಲ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಯೋಗೇಶ್ವರ್‌, ಎಲ್ಲರೂ ಬೇಸರ ಬಿಟ್ಟು ಕಾಂಗ್ರೆಸ್ ಗೆ ಬೆಂಬಲ ನೀಡುತ್ತಿದ್ದಾರೆ. ನಾನು, ಡಿಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಸಂಸದ ಡಿ.ಕೆ.ಸುರೇಶ್ ಸೇರಿ ಎಲ್ಲಾ ಅಸಮಾಧಾನಿತರನ್ನು ಭೇಟಿಯಾಗಿ ಮಾತನಾಡಿದ್ದೇವೆ. ಅವರ ಮನವೊಲಿಸುವ ಕೆಲಸ ಯಶಸ್ವಿ ಆಗುತ್ತಿದೆ ಎಂದು ಹೇಳಿದರು.

ನಾನು ಪಕ್ಷಾಂತರಿ ಅನ್ನೋದು ಜಗಜ್ಜಾಹಿರು ಅದಕ್ಕೆ ನನಗೆ ಮುಜುಗರ ಇಲ್ಲ. ಅಭಿವೃದ್ಧಿಗಾಗಿ ನಾನು ಪಕ್ಷಾಂತರ ಮಾಡ್ತಿದ್ದೇನೆ. ಜನ ನನ್ನನ್ನ ಪಕ್ಷಕ್ಕಿಂತ ವೈಯಕ್ತಿಕವಾಗಿ ಗೆಲ್ಲಿಸಿದ್ದೇ ಹೆಚ್ಚು. ಹಾಗಾಗಿ ಅವರು ಏನು ಹೇಳಿದರೂ ನಾನು ಬೇಸರ ಮಾಡಿಕೊಳ್ಳಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇದೇ ವೇಳೆ ಅವರು ಬೇವೂರು ಜಿಪಂ ವ್ಯಾಪ್ತಿಯ ಮಾಕಳಿ ಗ್ರಾಮ, ಮಾಕಳಿ ಪ್ಲಾಂಟೇಷನ್ ದೊಡ್ಡಿ, ದಾಸೇಗೌಡನದೊಡ್ಡಿ, ನಾಗವಾರ, ಹಾರೋಹಳ್ಳಿದೊಡ್ಡಿ, ಬೈರನಾಯಕನಹಳ್ಳಿ, ಬೇವೂರು ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು.

ಈ ವೇಳೆ ಅವರಿಗೆ ಮಾಜಿ ಸಂಸದ ಡಿ.ಕೆ.ಸುರೇಶ್, ಬಿಎಂಐಸಿಎಪಿಎ ಅಧ್ಯಕ್ಷ ರಘನಂದನ್ ರಾಮಣ್ಣ, ಮಾಜಿ ಶಾಸಕ ಎಂ.ಸಿ.ಅಶ್ವತ್ಥ್ ಸೇರಿದಂತೆ ಅನೇಕ ಮುಖಂಡರು ಸಾಥ್ ನೀಡಿದರು.

ವಲಸೆಗಾರರು ಬೇಕಾ ಅಥವಾ ಕೆಲಸಗಾರರು ಬೇಕಾ? ಎಂದು ಚನ್ನಪಟ್ಟಣ ತಾಲೂಕಿನ ಜನ ಯೋಚನೆ ಮಾಡಿ. ನೀರಾವರಿ ಯೋಜನೆ ಕೊಟ್ಟ ಯೋಗೇಶ್ವರ್‌ಗೆ ಬೆಂಬಲ ನೀಡಿ. ಹೊರಗಡೆಯಿಂದ ಬಂದವರಿಗೆ ಮಣೆ ಹಾಕಬೇಡಿ. ಸಿಪಿವೈಗೆ ಮತನೀಡಿ ಜಯಶೀಲರನ್ನಾಗಿ ಮಾಡಿ.

-ಡಾ.ರಂಗನಾಥ್, ಕುಣಿಗಲ್ ಶಾಸಕ 

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ