ಗೀತೆಯಿಂದ ಬದಲಾಗುವ ಬದುಕು: ಗಣಪತಿ ಸಚ್ಚಿದಾನಂದ ಶ್ರೀ

KannadaprabhaNewsNetwork |  
Published : Nov 19, 2025, 01:45 AM IST
32 | Kannada Prabha

ಸಾರಾಂಶ

ಉಡುಪಿ ಕೃಷ್ಣಮಠದ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠದ ವತಿಯಿಂದ ನಡೆಯುತ್ತಿರುವ ಬೃಹತ್ ಗೀತೋತ್ಸವದಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅನುಗ್ರಹ ಸಂದೇಶ ನೀಡಿದರು.

ಯತಿಗಳಿಗೆ ಪುತ್ತಿಗೆ ಶ್ರೀಗಳಿಂದ ಧರ್ಮ ಚಕ್ರವರ್ತಿ ಬಿರುದು । ಸಾಧಕರಿಗೆ ಗೀತಾನುಗ್ರಹ

ಉಡುಪಿ: ಭಗವದ್ಗೀತೆ ಬಹಳ ಅದ್ಭುತವಾದುದು, ಅದನ್ನು ಅರ್ಥ ಮಾಡಿಕೊಂಡವರ ಬದುಕೇ ಬದಲಾಗುತ್ತದೆ, ಅದನ್ನು ಕಂಠಪಾಠ ಮಾಡಿದ ಮಕ್ಕಳ ವರ್ತನೆಯೇ ಬದಲಾಗುತ್ತದೆ, ಆದ್ದರಿಂದ ಪ್ರತಿಯೊಬ್ಬರೂ ಗೀತೆ ಅಧ್ಯಯನ ಮಾಡಬೇಕು ಎಂದು ಮೈಸೂರಿನ ಅವದೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹೇಳಿದ್ದಾರೆ.ಮಂಗ‍ಳವಾರ ಉಡುಪಿ ಕೃಷ್ಣಮಠದ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠದ ವತಿಯಿಂದ ನಡೆಯುತ್ತಿರುವ ಬೃಹತ್ ಗೀತೋತ್ಸವದಲ್ಲಿ ಅವರು ಸಂತ ಸಂದೇಶ ನೀಡುತಿದ್ದರು.

ಜಗತ್ತಿನ 22 ದೇಶದಲ್ಲಿ ಭಗವದ್ಗೀತೆಯ ಅಧ್ಯಯನ ನಡೆಯುತ್ತಿದೆ, ಅಮೆರಿಕಾದ ಚಿಕಾಗೋ ನಗರದಲ್ಲಿ ಅಟಿಸಂನಿಂದ ತನ್ನ ಕೆಲಸಗಳನ್ನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿದ್ದ 22ರ ಯುವಕನಿಗೆ ಭಗವದ್ಗೀತೆಯ 700 ಶ್ಲೋಕಗಳನ್ನು ಕಂಠಪಾಠ ಮಾಡಿಸಿದಾಗ ಆತ ಸ್ವಸ್ಥನಾದ ಎಂಬ ಉದಾಹರಣೆ ನೀಡಿದ ಸ್ವಾಮೀಜಿ, ಕೃಷ್ಣ ತನ್ನ ಭಕ್ತರಿಗಾಗಿ ಇಂದ್ರಿಯಗಳನ್ನು ಧರಿಸಿ ಬಂದ, ಅನೇಕ ಕಷ್ಟಗಳನ್ನು ಎದುರಿಸಿದ, ಆತ ಗೀತೆಯನ್ನು ಬೋಧಿಸಿದ್ದು ತನ್ನದೇ ಅಂಶನಾದ ಅರ್ಜುನನಿಗಾಗಿ ಅಲ್ಲ, ಅದು ನಮ್ಮೆಲ್ಲರಿಗಾಗಿ, ಅದಕ್ಕಾಗಿಯೇ ಪುತ್ತಿಗೆ ಶ್ರೀಗಳು ನಮ್ಮೆಲ್ಲರಿಂದ ಗೀತಾ ಲೇಖನ ಯಜ್ಞ ಮಾಡಿಸುತಿದ್ದಾರೆ ಎಂದು ಹೇಳಿದರು.ಸಂದೇಶ ನೀಡಿದ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ತಮಗೆ ಧರ್ಮವನ್ನು ವಿಶ್ವದಾದ್ಯಂತ ಪ್ರಸರಿಸಲು ಪ್ರೇರಣೆ ನೀಡಿದವರು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು. ಅವರು ಕೂಡ ದೇಶವಿದೇಶಗಳಲ್ಲಿ ಗೀತೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ, ಅವರಿಂದ ತಾವು ಸ್ಪೂರ್ತಿ ಪಡೆದಿದ್ದೇವೆ ಎಂದರು.

ಪುತ್ತಿಗೆ ಶ್ರೀಗಳು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರಿಗೆ ‘ಧರ್ಮ ಚಕ್ರವರ್ತಿ’ ಬಿರುದಿನೊಂದಿಗೆ, ಕಡೆಗೋಲು ಪ್ರತಿಕೃತಿ ನೀಡಿ ಗೌರವಿಸಿದರು.

ರಾಷ್ಟ್ರಪತಿ ಪದಕ ಪುರಸ್ಕೃತ ಮಣಿಪಾಲದ ಖ್ಯಾತ ವೈದ್ಯ ಡಾ. ಕ್ಯಾ. ಎಲ್. ರಾಮಚಂದ್ರ, ಉದ್ಯಮಿ ವೆಂಕಟರಮಣ ಪೊತಿ ನಾಗರಕೋಯಿಲ್, ಅರ್ಥತಜ್ಞ ಪಿ. ಎನ್. ವಿಜಯ್ ಅವರಿಗೆ ಗೀತಾನುಗ್ರಹ ಪ್ರಶಸ್ತಿ ನೀಡಿ ಸನ್ಮಾನಿಸಿದರು.

ವಿದ್ವಾನ್ ಡಾ. ಗೋಪಾಲಾಚಾರ್ಯರು ನಿರೂಪಿಸಿ ಸ್ವಾಗತಿಸಿ, ವಂದಿಸಿದರು, ಪುತ್ತಿಗೆ ಮಠದ ದಿವಾನ ನಾಗರಾಜ ಆಚಾರ್ಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಉಪಸ್ಥಿತರಿದ್ದರು.

PREV

Recommended Stories

ವಾಜಪೇಯಿಗೆ ಕಾರು ಚಾಲಕರಾಗಿದ್ದ ಸುಳ್ಯದ ಕುಶಾಲಪ್ಪ ಗೌಡ
ಕಾರ್ಕಳ ಪುರಸಭೆ: ರಸ್ತೆಗಳ ತುರ್ತು ದುರಸ್ತಿಗೆ ಶಾಸಕ ಸುನಿಲ್‌ಕುಮಾರ್‌ ಸೂಚನೆ