ಜನಪರ ಅಭಿವೃದ್ಧಿಗೆ ರಾಜ್ಯಸಭಾ ನಿಧಿ ಬಳಕೆ: ಡಾ. ಹೆಗ್ಗಡೆ

KannadaprabhaNewsNetwork |  
Published : Nov 19, 2025, 01:45 AM IST
ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ  | Kannada Prabha

ಸಾರಾಂಶ

ರಾಜ್ಯಸಭಾ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿಯಡಿ ಮಂಜೂರುಗೊಂಡಿರುವ 2 ಕೋಟಿ ರು. ಅನುದಾನದಡಿ ಬೆಳ್ತಂಗಡಿ ನಗರದ ಕೆಇಬಿ-ರೆಂಕೆದಗುತ್ತು-ಮಲ್ಲೊಟ್ಟು ಸಂಪರ್ಕಿಸುವ ರಸ್ತೆಯ ಅಗಲೀಕರಣ-ಡಾಂಬರೀಕರಣ ಮತ್ತು ಒಳಚರಂಡಿ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮವನ್ನು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಉದ್ಘಾಟಿಸಿದರು.

ರಾಜ್ಯಸಭಾ ನಿಧಿ 2 ಕೋಟಿ ರು. ಕಾಮಗಾರಿ ಶಿಲಾನ್ಯಾಸ । ಸಿರಿ ಕೆಫೆ, ಸಿರಿ ಮಳಿಗೆ ಉದ್ಘಾಟನೆ

ಬೆಳ್ತಂಗಡಿ: ಜನರ ಜೀವನ ಸುಧಾರಣೆ ಅಗಬೇಕು ಎಂದು ನನ್ನ ರಾಜ್ಯಸಭಾ ಪ್ರದೇಶಾಭಿವೃದ್ಧಿ ನಿಧಿಯಿಂದ ಬೀದರ್ ಜಿಲ್ಲೆಗೆ ಹೈನುಗಾರಿಕೆಗೆ 10 ಕೋಟಿ ರು. ಬಳಕೆ ಮಾಡಿದ್ದು ಇದರಿಂದ ನಿತ್ಯ 18 ಸಾವಿರ ಲೀಟರ್ ಉತ್ಪತ್ತಿಯಾಗುತ್ತಿದ್ದ ಹಾಲು ಪ್ರಸ್ತುತ 1.40 ಲಕ್ಷ ಲೀಟರ್ ಹಾಲು ಉತ್ಪತ್ತಿಯಾಗುತ್ತಿದೆ. ಇದರಿಂದ ಜನರ ಜೀವನ ಮಟ್ಟ ಸುಧಾರಣೆಯಾಗಿದೆ. ಇದೇ ರೀತಿ ಜನರ ಜೀವನ ಮಟ್ಟ ಸುಧಾರಣೆ ಅಗತ್ಯತೆ ಮನಗಂಡು ಮುಂದೆಯೂ ರಾಜ್ಯಸಭಾ ನಿಧಿ ಬಳಸಲಾಗುವುದು ಎಂದು ರಾಜ್ಯಸಭಾ ಸಂಸದ, ಶ್ರಿ ಕ್ಷೇತ್ರ ಧರ್ಮಸ್ಥಳದ ಧರ್ಮಾದಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.ಸೋಮವಾರ ರಾಜ್ಯಸಭಾ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿಯಡಿ ಮಂಜೂರುಗೊಂಡಿರುವ 2 ಕೋಟಿ ರು. ಅನುದಾನದಡಿ

ಬೆಳ್ತಂಗಡಿ ನಗರದ ಕೆಇಬಿ-ರೆಂಕೆದಗುತ್ತು-ಮಲ್ಲೊಟ್ಟು ಸಂಪರ್ಕಿಸುವ ರಸ್ತೆಯ ಅಗಲೀಕರಣ-ಡಾಂಬರೀಕರಣ ಮತ್ತು ಒಳಚರಂಡಿ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದಕ್ಕಾಗಿ ತಾಲೂಕಿನ ಕೆಲವು ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಗೆ ರಾಜ್ಯಸಭಾ ನಿಧಿ ಬಳಸಲಾಗಿದೆ. ಗ್ರಾಮಾಭಿವೃದ್ದಿ ಯೋಜನೆಯಿಂದ ಸಾವಿರಾರು ಕುಟುಂಬಗಳಿಗೆ ಬೆಳಕು ಬಂದರೆ, ಸಿರಿ ಸಂಸ್ಥೆಯಿಂದ ಸಾವಿರಾರು ಮಂದಿಗೆ ಉದ್ಯೋಗ ದೊರಕಿದೆ. ಮುಂದೆಯೂ ಇನ್ನಷ್ಟು ಉತ್ಪನ್ನಗಳನ್ನು ತಯಾರಿಸಿ ಮೂರು ಸಾವಿರಕ್ಕೂ ಅಧಿಕ ಮಂದಿಗೆ ಉದ್ಯೋಗ ಸಿಗುವಂತೆ ಮಾಡಲಾಗುವುದು ಎಂದರು.ಶಾಸಕ‌ ಹರೀಶ್ ಪೂಂಜ ಮಾತನಾಡಿ, ಡಾ ಹೆಗ್ಗಡೆ ತಮ್ಮ ರಾಜ್ಯಸಭಾ ನಿಧಿಯಡಿ ಬೆಳ್ತಂಗಡಿ ಅಯ್ಯಪ್ಪ ಮಂದಿರ ಬಳಿಯಿಂದ ಹುಣ್ಸೆಕಟ್ಟೆ ವರೆಗಿನ ರಸ್ತೆ ಅಭಿವೃದ್ದಿಗೆ 2 ಕೋಟಿ ರು. ನೀಡುವ ಮೂಲಕ ಉಪ್ಪಿನಂಗಡಿ- ಬೆಳ್ತಂಗಡಿ ರಾಜ್ಯ ಹೆದ್ದಾರಿಯಲ್ಲಿ ಗುರುವಾಯನಕರೆಯಲ್ಲಿ ಟ್ರಾಫಿಕ್ ಸಮಸ್ಯೆ ಬಂದಾಗ ಈ ಸಂಪರ್ಕ ರಸ್ತೆ ಸಾವಿರಾರು ಜನರಿಗೆ ಅನುಕೂಲವಾಗಿದೆ. ಬೀದರ್ ಜಿಲ್ಲೆಯಲ್ಲಿ ಹೈನುಗಾರಿಕೆ ಅಭಿವೃದ್ಧಿಗೆ ಡಾ ಹೆಗ್ಗಡೆ ತಮ್ಮ ರಾಜ್ಯಸಭಾ ನಿಧಿಯಿಂದ 10 ಕೋಟಿ ರು. ಅನುದಾನ ನೀಡಿ ಸಾವಿರಾರು ಕುಟುಂಬಗಳ ಆರ್ಥಿಕ ಬೆಳವಣಿಗೆ ಕಾರಣವಾಗಿದ್ದಾರೆ ಎಂದರು.

ಉದ್ಯಮಿ ಶಶಿಧರ ಶೆಟ್ಟಿ ಬರೋಡ, ಬೆಳ್ತಂಗಡಿ ಪ.ಪಂ. ಅಧ್ಯಕ್ಷ ಜಯಾನಂದ ಗೌಡ, ಉಪಾಧ್ಯಕ್ಷೆ ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಧ. ಗ್ರಾ. ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್. ಎಸ್., ಸಿರಿ ಸಂಸ್ಥೆ ಟ್ರಸ್ಟಿ ರಾಜೇಶ್ ಪೈ ಉಜಿರೆ, ಪ.ಪಂ.‌ ಮುಖ್ಯಾಧಿಕಾರಿ ರಾಜೇಶ್, ಸಿರಿ ಸಂಸ್ಥೆ ಸಿಇಒ ಪ್ರಸನ್ನ, ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿ ಮತ್ತಿತರರಿದ್ದರು.

ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎಸ್. ಜನಾರ್ದನ್ ಪ್ರಸ್ತಾವಿಸಿ, ಸ್ವಾಗತಿಸಿದರು. ಸಿರಿ ಗೋದಾಮು ವಿಭಾಗದ ಮ್ಯಾನೇಜರ್ ಜೀವನ್ ನಿರೂಪಿಸಿ, ವಂದಿಸಿದರು. ------------------------------ಸಂಸದರಿಗೆ ವರ್ಷಕ್ಕೆ 5 ಕೋಟಿ ರು. ಅನುದಾನ ಬರುತ್ತದೆ. ಸಂಸದರ ನಿಧಿಯನ್ನು ಬೀದರ್ ಜಿಲ್ಲೆಯಲ್ಲಿ ಹೈನುಗಾರಿಕೆಗೆ ಆದ್ಯತೆ ಮೇರೆಗೆ ಬಳಸಿದ್ದು, ಅಲ್ಲಿನ ಹಾಲು ಸೊಸೈಟಿಗಳಿಗೆ 10 ಕೋಟಿ ರು. ಅನುದಾನ ನೀಡಲಾಗಿದ್ದು, ಜಿಲ್ಲೆಯಲ್ಲಿ ದಿನಕ್ಕೆ ಒಂದು ಲಕ್ಷ ಲೀ. ಹಾಲು ಉತ್ಪಾದನೆ ಆಗುತ್ತಿದೆ. ಬೆಳ್ತಂಗಡಿ-ಹುಣ್ಸೆಕಟ್ಟೆ ರಸ್ತೆ ಅಗಲೀಕರಣ ಹಾಗೂ ಅಭಿವೃದ್ದಿಗೆ 2 ಕೋಟಿ ರು. ಅನುದಾನ ಬಿಡುಗಡೆ, ಧರ್ಮಸ್ಥಳದ ಅಶೋಕ ನಗರದಲ್ಲಿ ರಸ್ತೆ, ಮೂಲಭೂತ ಸೌಕರ್ಯಕ್ಕಾಗಿ 2.41 ಕೋಟಿ ರು. ಅನುದಾನ, 140 ಕ್ಕೂ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ 1.83 ಕೋಟಿ ರು. ಬಿಡುಗಡೆ ಸಹಿತ ಇಷ್ಟರ ವರೆಗೆ 16.74 ಕೋಟಿ ರು. ಅನುದಾನ ಬಿಡುಗಡೆ ಆಗಿದೆ.

-ಕೆ ಎನ್. ಜನಾರ್ದನ್, ರಾಜ್ಯಸಭಾ ಸದಸ್ಯ ಡಾ. ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ.

PREV

Recommended Stories

ವಾಜಪೇಯಿಗೆ ಕಾರು ಚಾಲಕರಾಗಿದ್ದ ಸುಳ್ಯದ ಕುಶಾಲಪ್ಪ ಗೌಡ
ಕಾರ್ಕಳ ಪುರಸಭೆ: ರಸ್ತೆಗಳ ತುರ್ತು ದುರಸ್ತಿಗೆ ಶಾಸಕ ಸುನಿಲ್‌ಕುಮಾರ್‌ ಸೂಚನೆ