ಪತ್ರಿಕೋದ್ಯಮ ಜನರ ಆಶೋತ್ತರಗಳಿಗೆ ಸ್ಪಂದಿಸುವ ಕೊಂಡಿ: ಡಿಸಿ ವಿದ್ಯಾಕುಮಾರಿ

KannadaprabhaNewsNetwork |  
Published : Jul 23, 2024, 12:37 AM IST
ಶೆಟ್ಟಿಗಾರ್22 | Kannada Prabha

ಸಾರಾಂಶ

ಅಜ್ಜರಕಾಡಿನ ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ, ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಗಳ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಪತ್ರಿಕೋದ್ಯಮವು ಸಮಾಜದ ಆಗುಹೋಗುಗಳು ಸೇರಿದಂತೆ, ಜನಸಾಮಾನ್ಯರ ಆಶೋತ್ತರಗಳಿಗೆ ಪ್ರತಿಸ್ಪಂದಿಸುವ ಕೊಂಡಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಹೇಳಿದರು.

ಅವರು ಸೋಮವಾರ ನಗರದ ಅಜ್ಜರಕಾಡಿನ ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ, ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಗಳ ಆಶ್ರಯದಲ್ಲಿ ಆಯೋಜಿಸಲಾದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪತ್ರಿಕೋದ್ಯಮವು ಸಮಾಜದ ನಡುವೆ ಬೆಸುಗೆಯನ್ನು ಗಟ್ಟಿ ಮಾಡುತ್ತದೆ. ಆದರೆ ಇವತ್ತಿನ ಸಂದರ್ಭದಲ್ಲಿ ಎಲೆಕ್ಟ್ರಾನಿಕ್, ಸೋಶಿಯಲ್ ಮೀಡಿಯಾಗಳ ಮಧ್ಯೆ ಪತ್ರಿಕೋದ್ಯಮ ಕೂಡ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದೆ. ಕೋವಿಡ್ ಸಂದರ್ಭದಲ್ಲಿ ಪತ್ರಿಕೋದ್ಯಮ ಹೆಚ್ಚು ಸಂಕಷ್ಟಕ್ಕೀಡಾಗಿದೆ ಎಂದ ಡಿಸಿ, ಪತ್ರಿಕೆಗಳು ದಿನನಿತ್ಯದ ಮಾಹಿತಿಯ ಜೊತೆಗೆ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ವಿಷಯಗಳ ಹಾಗೂ ಸಾರ್ವಜನಿಕರಿಗೆ ಅಗತ್ಯವಿರುವ ಸರ್ಕಾರಿ ಸಲಹೆ ಸೂಚನೆಗಳನ್ನೂ ತಲುಪಿಸುವ ಕೆಲಸ ಮಾಡುತ್ತವೆ ಎಂದು ಶ್ಲಾಘಿಸಿದರು.

ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕಿ ಭವ್ಯಾ ನಾಗರಾಜ್ ಉಪನ್ಯಾಸ ನೀಡುತ್ತಾ, ದೇಶದಲ್ಲಿ ಹಾಗೂ ರಾಜ್ಯದಲ್ಲಿ ಪತ್ರಿಕೋದ್ಯಮ ಬೆಳೆದುಬಂದ ಹಾದಿಯನ್ನು ಸವಿಸ್ತಾರವಾಗಿ ವಿವರಿಸಿದರು.

ವಾರ್ತಾಧಿಕಾರಿ ಮಂಜುನಾಥ್ ಬಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಭಾಸ್ಕರ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ರಾಜ್ಯ ಸಮಿತಿ ಸದಸ್ಯ ಕಿರಣ್ ಮಂಜನಬೈಲು, ಕಾಲೇಜಿನ ಕಲಾ ನಿಕಾಯದ ಡೀನ್ ಪ್ರೊ. ನಿಕೇತನಾ ಉಪಸ್ಥಿತರಿದ್ದರು.

ಈ ಸಂದರ್ಭ ವಾರ್ತಾಭಾರತಿ ದಿನಪತ್ರಿಕೆಯ ಹಿರಿಯ ವರದಿಗಾರ ಬಿ.ಬಿ. ಶೆಟ್ಟಿಗಾರ್ ಅವರನ್ನು ಪತ್ರಿಕಾ ದಿನಾಚರಣೆ ಅಂಗವಾಗಿ ಸನ್ಮಾನಿಸಲಾಯಿತು.

ಪತ್ರಕರ್ತ ಅಜಿತ್, ಸನ್ಮಾನಿತರ ವ್ಯಕ್ತಿ ಪರಿಚಯ ಮಾಡಿದರು. ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿನಿ ಅಶ್ವಿನಿ ನಿರೂಪಿಸಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ