ಕೊಂಚ ಕಡಿಮೆಯಾದ ಆರಿದ್ರಾ ಮಳೆ

KannadaprabhaNewsNetwork |  
Published : Jul 05, 2024, 12:47 AM IST
ಅಂಬೇಡ್ಕರ್ ವೃತ್ತದಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿತ್ತು. | Kannada Prabha

ಸಾರಾಂಶ

ಬುಧವಾರ ದಿನವಿಡೀ ಸುರಿದ ಮಳೆಯಿಂದಾಗಿ ಸಾಗರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿತ್ತು.

ಕನ್ನಡಪ್ರಭ ವಾರ್ತೆ ಸಾಗರ

ತಾಲೂಕಿನಾದ್ಯಂತ ಗುರುವಾರ ಬೆಳಗಿನಿಂದ ಆರಿದ್ರಾ ಮಳೆಯ ಅಬ್ಬರ ಕೊಂಚ ಕಡಿಮೆಯಾಗಿದೆ. ಬುಧವಾರ ರಾತ್ರಿಯಿಂದ ಗುರುವಾರ ಬೆಳಗಿನವರೆಗೆ ಎಡೆಬಿಡದೆ ಸುರಿದಿದ್ದ ಮಳೆ ಗುರುವಾರ ಬೆಳಗ್ಗೆ ೧೦ಗಂಟೆ ನಂತರ ತುಸು ಕಡಿಮೆಯಾಗಿದೆ. ಇಡೀ ದಿನ ಮಳೆಯ ವಾತಾವರಣವಿದ್ದು ಆಗಾಗ ಮಳೆ ಸುರಿದಿದೆ. ಆದರೆ ಕಳೆದ ಎರಡು ದಿನಗಳ ಹಿಂದಿನಷ್ಟು ಬಿರುಸಾಗಿ ಮಳೆಯಾಗಿಲ್ಲ ಎಂದು ವರದಿಯಾಗಿದೆ.

ಎರಡು ದಿನ ಮಳೆ ಅಬ್ಬರಿಸಿದ್ದರಿಂದ ಗುರುವಾರ ತಾಲೂಕಿನ ಕರೂರು- ಭಾರಂಗಿ ಹೋಬಳಿಯ ಶಾಲೆ-ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಬುಧವಾರ ದಿನವಿಡೀ ಸುರಿದ ಮಳೆಗೆ ಹಲವೆಡೆ ಮರ ಮುರಿದು ಬಿದ್ದ ಘಟನೆಗಳು ವರದಿಯಾಗಿವೆ.

ಅಲ್ಲಲ್ಲಿ ಮಳೆ, ಗಾಳಿಗೆ ವಿದ್ಯುತ್ ಕಂಬಗಳು ಮುರಿದು ನೆಲಕ್ಕುರುಳಿದ್ದು ರಕ್ಷಣಾ ಕಾರ್ಯದಲ್ಲಿ ತಾಲೂಕು ಆಡಳಿತ ತೊಡಗಿಕೊಂಡಿದೆ. ಗ್ರಾಮಾಂತರ ಭಾಗದಲ್ಲಿ ಇಡೀ ದಿನ ತೀವ್ರ ಪ್ರಮಾಣದಲ್ಲಿ ಮಳೆ, ಗಾಳಿ ಬಂದಿದ್ದರೂ ಯಾವುದೇ ಅವಘಡ ಸಂಭವಿಸಿಲ್ಲ. ಕೆಲವು ಭಾಗದಲ್ಲಿ ಒಂದೆರಡು ಮರಗಳು ಮುರಿದು ಬಿದ್ದಿದ್ದು ಹೊರತುಪಡಿಸಿದರೆ ಹೆಚ್ಚಿನ ತೊಂದರೆ ವರದಿ ಆಗಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ.

2 ದಿನಗಳ ನಿರಂತರ ಮಳೆಯಿಂದಾಗಿ ವರದಾ ನದಿಯಲ್ಲಿ ನೀರಿನ ಹರಿವು ಜಾಸ್ತಿಯಾಗಿತ್ತು. ಪರಿಣಾಮವಾಗಿ ತಾಳಗುಪ್ಪ ಹೋಬಳಿಯ ಕೆಲವು ತಗ್ಗು ಪ್ರದೇಶದ ಕೃಷಿಭೂಮಿಗೆ ನೀರು ತುಂಬಿಕೊಳ್ಳುತ್ತಿರುವ ಬಗ್ಗೆ ವರದಿಯಾಗಿದೆ. ಮಳೆ ಜಾಸ್ತಿಯಾದರೆ ಕೃಷಿ ಭೂಮಿಗೆ ಮತ್ತಷ್ಟು ನೀರು ತುಂಬಿಕೊಳ್ಳುವ ಅಪಾಯವಿತ್ತು. ಆದರೆ ಮಳೆಯ ಪ್ರಮಾಣ ಕಡಿಮೆಯಾಗಿದ್ದರಿಂದ ಯಾವುದೇ ಆತಂಕವಿಲ್ಲ.ಬುಧವಾರದ ಮಳೆಗೆ ಪಟ್ಟಣದ ಹಲವು ರಸ್ತೆಗಳಲ್ಲಿ ಚರಂಡಿ ಕೆಲಸದಿಂದಾಗಿ ಅಂಗಡಿಗಳಿಗೆ ನೀರು ನುಗ್ಗಿದ ಘಟನೆಗಳು ನಡೆದಿವೆ. ಪಟ್ಟಣ ವ್ಯಾಪ್ತಿಯ ತಗ್ಗು ಪ್ರದೇಶದಲ್ಲಿ ಕೆಲ ಮನೆಗಳಿಗೆ ನೀರು ನುಗ್ಗಿದ ಘಟನೆಗಳು ವರದಿಯಾಗಿವೆ. ಗಾಂಧಿ ನಗರದಲ್ಲಿ ಭಾರಿ ಗಾಳಿಗೆ ಮರ ಬಿದ್ದು ೨ ವಿದ್ಯುತ್ ಕಂಬ ಮುರಿದು ವಿದ್ಯುತ್ ವ್ಯತ್ಯಯವಾಗಿತ್ತು. ಸಿಗಂದೂರು ರಸ್ತೆಯಲ್ಲಿ ಮರ ಬಿದ್ದು ಕೆಲ ರಸ್ತೆ ಸಂಚಾರ ತಡೆಯಾಗಿತ್ತು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ