ಇನ್ನೂ ಮುಗಿಯದ ಕೊಟ್ಟೂರು ಇಂದಿರಾ ಕ್ಯಾಂಟೀನ್ ಕಟ್ಟಡ

KannadaprabhaNewsNetwork |  
Published : Jul 05, 2024, 12:47 AM IST
ಕೊಟ್ಟೂರಿನಲ್ಲಿ ಇಂದಿರಾ     ಕ್ಯಾಂಟೀನ್ ಕಾಮಗಾರಿ ಅರ್ಧ-ಮರ್ಧ ವಾಗಿರುವುದು,  | Kannada Prabha

ಸಾರಾಂಶ

ತಿಂಗಳೊಳಗೆ ಇಂದಿರಾ ಕ್ಯಾಂಟೀನ್ ಆರಂಭಿಸುವ ನಿಟ್ಟಿನಲ್ಲಿ ಭರದಿಂದ ಕಾಮಗಾರಿ ನಡೆಸಿತ್ತು.

ಜಿ.ಸೋಮಶೇಖರ

ಕೊಟ್ಟೂರು: ಪಟ್ಟಣದ ಸರ್ಕಾರಿ ಸಮುದಾಯ ಆಸ್ಪತ್ರೆ ಆವರಣದಲ್ಲಿ ನಿರ್ಮಾಣ ಹಂತದ ಇಂದಿರಾ ಕ್ಯಾಂಟೀನ್‌ ಕಟ್ಟಡದ ಕಾಮಗಾರಿ ಕಳೆದ ಎರಡು-ಮೂರು ತಿಂಗಳಿಂದ ನನೆಗುದಿಗೆ ಬಿದ್ದಿದೆ.

ಈ ಬಗ್ಗೆ ಗಮನಹರಿಸಬೇಕಾದ ಜಿಲ್ಲಾಡಳಿತದ ಯೋಜನಾ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ತಿಂಗಳೊಳಗೆ ಇಂದಿರಾ ಕ್ಯಾಂಟೀನ್ ಆರಂಭಿಸುವ ನಿಟ್ಟಿನಲ್ಲಿ ಭರದಿಂದ ಕಾಮಗಾರಿ ನಡೆಸಿತ್ತು. ಆದರೆ ಕಳೆದ ಒಂದು ತಿಂಗಳಿಂದ ಕಾಮಗಾರಿ ಸ್ಥಗಿತಗೊಂಡಿದೆ. ಒಂದು ಹೊತ್ತಿನ ಊಟ ನಿರೀಕ್ಷಿಸುತ್ತಿದ್ದ ಬಡವರು ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ದಿನನಿತ್ಯದ ವ್ಯವಹಾರ, ಶಿಕ್ಷಣ ಮತ್ತಿತರ ಕೆಲಸಗಳಿಗಾಗಿ ತಾಲೂಕಿನ ವಿವಿಧೆಡೆಯಿಂದ ಕೊಟ್ಟೂರಿಗೆ ಆಗಮಿಸುವ ಜನತೆ ಹೋಟಲ್‌ನ ದುಬಾರಿ ಊಟ-ಉಪಹಾರ ಸೇವಿಸುತ್ತಿದ್ದರು. ಇದನ್ನು ಮನಗಂಡ ಜಿಲ್ಲಾಡಳಿತ ಕೊಟ್ಟೂರು, ಮರಿಯಮ್ಮನಹಳ್ಳಿ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಕಮಲಾಪುರ ಪಟ್ಟಣಗಳಲ್ಲಿ ಇಂದಿರಾ ಕ್ಯಾಂಟೀನ್ ಪ್ರಾರಂಭಿಸುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು.

ಸರ್ಕಾರ ವಿಜಯನಗರ ಜಿಲ್ಲಾಡಳಿತದ ಪ್ರಸ್ತಾಪಕ್ಕೆ ಮಂಜೂರಾತಿ ನೀಡಿದ್ದರ ಹಿನ್ನೆಲೆಯಲ್ಲಿ ಕಾಮಗಾರಿ ನಡೆಯುತ್ತಿತ್ತು. ಸದ್ಯ ಸ್ಥಗಿತಗೊಂಡಿದೆ.

ಕಟ್ಟಡದ ಹೊರಭಾಗದಲ್ಲಿ ಇಂದಿರಾಗಾಂಧಿ ಭಾವಚಿತ್ರ ಅಳವಡಿಸಲಾಗಿದೆ. ಕ್ಯಾಂಟೀನ್ ನ ಅಡುಗೆ ಮನೆ, ಒಳಾಂಗಣ, ಸಿಮೆಂಟ್ ಟೇಬಲ್, ವಾಶ್ ಬೇಸಿನ್ ಇವೆ. ಅಡುಗೆ ತಯಾರಿಗಾಗಿ ಗ್ಯಾಸ್ ಪೈಪ್‌ಲೈನ್‌ಗಳು, ಒಲೆಗಳು ನಿರ್ಮಾಣಗೊಂಡಿವೆ. ಇದನ್ನು ಹೊರತು ಪಡಿಸಿ ಕ್ಯಾಂಟೀನ್‌ಗಳಿಗೆ ಬಾಗಿಲು ಜೋಡಿಸುವ ಮತ್ತಿತರ ಕಾಮಗಾರಿಗಳು ಆಗಿಲ್ಲ.

ಇಂದು ಜನಸ್ಪಂದನ ಕಾರ್ಯಕ್ರಮ:

ಜು.5ರಂದು ಕೊಟ್ಟೂರಿನಲ್ಲಿ ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ನೇತೃತ್ವದಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನಿರ್ಮಾಣ ಹಂತದಲ್ಲೇ ಸ್ಥಗಿತಗೊಂಡ ಇಂದಿರಾ ಕ್ಯಾಟೀನ್‌ ಕಟ್ಟಡ ಪ್ರದೇಶಕ್ಕೆ ಭೇಟಿ ನೀಡಬೇಕು ಎನ್ನುವುದು ಸ್ಥಳೀಯರ ಆಗ್ರಹ.

ಕೊಟ್ಟೂರಿನಲ್ಲಿ ಇಂದಿರಾ ಕ್ಯಾಂಟೀನ್‌ ಕಾಮಗಾರಿ ಪೂರ್ಣಗೊಂಡರೆ ಸಾಕಷ್ಟು ಬಡವರಿಗೆ ಅನುಕೂಲವಾಗುತ್ತದೆ. ಆದರೆ ಕಾಮಗಾರಿ ಸ್ಥಗಿತಕೊಂಡಿರುವುದು ಬಡವರನ್ನು ಕಂಗೆಡಿಸಿದೆ ಎನ್ನುತ್ತಾರೆ ಕೂಲಿ ಕಾರ್ಮಿಕ ಕೊಟ್ಟೂರು ಚಂದ್ರಶೇಖರ.

ಇಂದಿರಾ ಕ್ಯಾಂಟೀನ್ ಕಾಮಗಾರಿ ಈಗಾಗಲೇ ಬಹುತೇಕ ಮುಗಿದಿದೆ. ಸಣ್ಣ-ಪುಟ್ಟ ಕೆಲಸಗಳು ಬಾಕಿ ಉಳಿದಿವೆ. ಸಂಬಂಧಪಟ್ಟ ಸಂಸ್ಥೆಯವರು ಶೀಘ್ರವೇ ಕಾಮಗಾರಿ ಕೈಗೊಂಡು ಕ್ಯಾಂಟೀನ್ ಕಾರ್ಯಾರಂಭವಾಗಲಿ ಎನ್ನುತ್ತಾರೆ ಜಿಲ್ಲಾ ಯೋಜನಾ ನೀರ್ದೇಶಕ ಮನೋಹರ್.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುರ್ಚಿ ಕಿತ್ತಾಟ ರಾಜ್ಯದವರೇ ಬಗೆಹರಿಸಿಕೊಳ್ಳಬೇಕು: ಖರ್ಗೆ
ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ