ಅಕ್ರಮ ಮದ್ಯ ಮಾರಾಟಕ್ಕೆ ಬಹಿರಂಗ ಹರಾಜು

KannadaprabhaNewsNetwork | Published : Jul 5, 2024 12:47 AM

ಸಾರಾಂಶ

ಲಕ್ಷ್ಮೇಶ್ವರ ತಾಲೂಕು ವ್ಯಾಪ್ತಿಯಲ್ಲಿ ಕೆಲ ಗ್ರಾಮಗಳಲ್ಲಿನ ಹಿರಿಯರು ಎಷ್ಟೇ ಹೇಳಿದರೂ ಇದಕ್ಕೆ ಕಡಿವಾಣ ಮಾತ್ರ ಬಿದಿಲ್ಲ, ಅದಕ್ಕಾಗಿ ಕೆಲವು ಗ್ರಾಮಗಳ ಹಿರಿಯರು ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲು ಬಿಡ್ಡಿಂಗ್ ಮಾಡುತ್ತಾರೆ

ಅಶೋಕ ಸೊರಟೂರ ಲಕ್ಷ್ಮೇಶ್ವರ

ಅಕ್ರಮವಾಗಿ ಮದ್ಯ ಮಾರಾಟ ಮಾಡುವುದೇ ಕಾನೂನಿನ ಪ್ರಕಾರ ಗಂಭೀರ ಸ್ವರೂಪದ ಅಪರಾಧವಾಗಿದೆ. ಆದರೆ ಲಕ್ಷ್ಮೇಶ್ವರ ತಾಲೂಕು ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟಕ್ಕೂ ಬಹಿರಂಗ ಬಿಡ್ಡಿಂಗ್ ಮಾಡಲಾಗುತ್ತದೆ. ಅದು ಅಬಕಾರಿ ಇಲಾಖೆಗೆ ತಿಳಿಯದಿರುವುದು ಮಾತ್ರ ಆಶ್ಚರ್ಯಕರವಾಗಿದೆ.

ಮದ್ಯ ಮಾರಾಟಕ್ಕೆ ಗ್ರಾಮೀಣ ಭಾಗದಲ್ಲಿ ಬಾರ್ ಅಥವಾ ಮದ್ಯದ ಅಂಗಡಿಗಳಿರುವುದಿಲ್ಲ, ಹಾಗಾಗಿ ಲಕ್ಷ್ಮೇಶ್ವರ ತಾಲೂಕು ವ್ಯಾಪ್ತಿಯಲ್ಲಿನ ಪ್ರತಿಯೊಂದು ಗ್ರಾಮಗಳ ಮದ್ಯ ಪ್ರೀಯರಿಗೆ ಅವರ ಗ್ರಾಮದಲ್ಲಿಯೇ (ಅಕ್ರಮ) ಮದ್ಯ ಸಿಗುವ ವ್ಯವಸ್ಥೆ ಈ ಮೊದಲಿನಿಂದಲೂ ನಡೆದುಕೊಂಡೇ ಬಂದಿದೆ. ಇದಕ್ಕೆ ಅಬಕಾರಿ ಇಲಾಖೆ ಬಾರ್ ಮಾಲೀಕರೊಂದಿಗೆ ಕೈ ಜೋಡಿಸಿದ ಹಿನ್ನೆಲೆಯಲ್ಲಿ ಅದು ತಾಲೂಕು ವ್ಯಾಪ್ತಿಯಲ್ಲಿ ಅವ್ಯಾಹತವಾಗಿ ನಡೆದುಕೊಂಡೇ ಬರುತ್ತಿದೆ. ಈಗ ಇನ್ನಷ್ಟು ಜೋರಾಗಿ ನಡೆಯುತ್ತಿದೆ.

ಏನಿದು ಬಿಡ್ಡಿಂಗ್: ಲಕ್ಷ್ಮೇಶ್ವರ ತಾಲೂಕು ವ್ಯಾಪ್ತಿಯಲ್ಲಿ ಕೆಲ ಗ್ರಾಮಗಳಲ್ಲಿನ ಹಿರಿಯರು ಎಷ್ಟೇ ಹೇಳಿದರೂ ಇದಕ್ಕೆ ಕಡಿವಾಣ ಮಾತ್ರ ಬಿದಿಲ್ಲ, ಅದಕ್ಕಾಗಿ ಕೆಲವು ಗ್ರಾಮಗಳ ಹಿರಿಯರು ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲು ಬಿಡ್ಡಿಂಗ್ ಮಾಡುತ್ತಾರೆ. ಯಾರು ಆ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಬೇಕು ಎನ್ನುವ ಇಚ್ಚೆ ಹೊಂದಿರುತ್ತಾರೋ ಅವರು ಈ ಬಿಡ್ಡಿಂಗ್ ನಲ್ಲಿ ಭಾಗವಹಿಸಬೇಕು. ಅಂದು ನಡೆಯುವ ಬಿಡ್ಡಿಂಗ್ ನಲ್ಲಿ ಯಾರು ಹೆಚ್ಚಿನ ಹಣಕ್ಕೆ ಕೂಗುತ್ತಾರೆ ಅವರಿಗೆ ಅಕ್ರಮ ಮದ್ಯ ಮಾರಾಟದ ಅಕ್ರಮ ಟೆಂಡರ್ ಲಭ್ಯವಾಗುತ್ತದೆ. ಬಿಡ್ಡಿಂಗ್ ನಲ್ಲಿ ಎಷ್ಟು ಲಕ್ಷಕ್ಕೆ ಬಿಡ್ ಆಗುತ್ತದೆ, ಆ ಹಣವನ್ನು ಗ್ರಾಮದಲ್ಲಿನ ದೇವಸ್ಥಾನ ಅಭಿವೃದ್ಧಿ ಮತ್ತು ಸುಧಾರಣೆಗೆ ನೀಡಬೇಕು. ಯಾರಿಗೆ ಬಿಡ್ಡಿಂಗ್ ಆಗುತ್ತದೆಯೋ, ಅವರು ಬಿಡ್ಡಿಂಗ್ ಹಣವನ್ನು ಗ್ರಾಮದ ಹಿರಿಯರ ಮೂಲಕ ದೇವಸ್ಥಾನಕ್ಕೆ ಸಂದಾಯ ಮಾಡಬೇಕು. ಅವರೇ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಬಹುದಾಗಿದೆ. ಅವರನ್ನು ಹೊರತು ಪಡಿಸಿ ಯಾರೂ ಅಕ್ರಮ ಮದ್ಯ ಮಾರಾಟ ಮಾಡುವಂತಿಲ್ಲ. ಬಿಡ್ಡಿಂಗ್ ಆದ ವ್ಯಕ್ತಿಗೆ ಯಾರೂ ತೊಂದರೆ ಕೊಡುವಂತಿಲ್ಲ ಎನ್ನುವ ಅಲಿಖಿತ ಕಾನೂನು ಲಕ್ಷ್ಮೇಶ್ವರ ತಾಲೂಕು ವ್ಯಾಪ್ತಿಯ ಅಲ್ಲಲ್ಲಿ ಚಾಲ್ತಿಯಲ್ಲಿದೆ.

ಮನೆ ಬಾಗಿಲಿಗೆ ಮದ್ಯ:ತಾಲೂಕಿನ ಬಹುತೇಕ ಗ್ರಾಮಗಳಿಗೆ ಲಕ್ಷ್ಮೇಶ್ವರ ಪಟ್ಟಣದ ಬಾರ್ ಲೈಸೆನ್ಸ್ ಹೊಂದಿರುವ ಮಾಲೀಕರು ತಮ್ಮ ವಾಹನಗಳಲ್ಲಿ ಪ್ರತಿನಿತ್ಯ ಮದ್ಯ ಸಪ್ಲೈ ಮಾಡುತ್ತಾರೆ. ಇದರಿಂದ ಗ್ರಾಮೀಣ ಪ್ರದೇಶದ ಮದ್ಯ ಮಾರಾಟಗಾರರಿಗೆ ತಮ್ಮ ಅಂಗಡಿಯ ಬಾಗಿಲಿಗೆ ಬಂದು ಮದ್ಯ ಕೊಟ್ಟು ಹೋಗುವ ವ್ಯವಸ್ಥೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಮದ್ಯ ಸಾಗಾಟ ಮಾಡುವ ತೊಂದರೆ ಇಲ್ಲದೇ ಇದ್ದಲ್ಲಿಯೇ ಕುಳಿತು ಮದ್ಯ ಮಾರಾಟ ಮಾಡಿ ಹೆಚ್ಚಿನ ಹಣ ಗಳಿಸುವ ಅವಕಾಶ ಗ್ರಾಮೀಣ ಪ್ರದೇಶದಲ್ಲಿನ ಬಹುತೇಕ ಕಿರಾಣಿ, ಚಹಾ ಅಂಗಡಿಗಳ ಮಾಲೀಕರು ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಹರಾಜು ತಾಂಡಾಗಳಲ್ಲಿ ಹೆಚ್ಚು:ತಾಲೂಕಿನ ಕೆಲ ಲಂಬಾಣಿ ತಾಂಡಾಗಳಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಬಹಿರಂಗ ಹರಾಜು ನಡೆಸಲಾಗುತ್ತಿದೆ. ಕಳೆದ ವರ್ಷ ₹7 ಲಕ್ಷಕ್ಕೆ ವ್ಯಕ್ತಿಯೊಬ್ಬರು ಹರಾಜು ಪಡೆದುಕೊಂಡಿದ್ದರು ಎನ್ನುವುದು ಲಕ್ಷ್ಮೇಶ್ವರ ತಾಲೂಕಿನ ಪ್ರತಿಯೊಬ್ಬರಿಗೂ ಗೊತ್ತಿರುವ ಸತ್ಯವಾಗಿದೆ. ಆದರೆ ಇದೆಲ್ಲ ಗೊತ್ತಿರುವ ಅಬಕಾರಿ ಮತ್ತು ಪೊಲೀಸ್ ಇಲಾಖೆ ಮಾತ್ರ ಅದ್ಯಾಕೆ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ ಎನ್ನುವುದು ಮಾತ್ರ ನಿಗೂಢವಾಗಿದೆ.

ಬೆಳ್ಳಂ ಬೆಳಗ್ಗೆಯೇ ಓಪನ್: ಲಕ್ಷ್ಮೇಶ್ವರ ಪಟ್ಟಣದ ಹೊಸ ಬಸ್ ನಿಲ್ದಾಣ ಹತ್ತಿರ ಹಾಗೂ ಹಳೆ ಬಸ್ ನಿಲ್ದಾಣ ಹಾಗೂ ಕೃಷ್ಣ ಟಾಕೀಸ್ ಹತ್ತಿರ ಬೆಳ್ಳಂ ಬೆಳಗ್ಗೆ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಇದೆಲ್ಲವೂ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಗೊತ್ತಿಲ್ಲವೆಂದಲ್ಲ. ಎಲ್ಲ ಗೊತ್ತಿದ್ದೂ ಏನೂ ಗೊತ್ತಿಲ್ಲದಂತೆ ಇರುವುದು, ಪ್ರತಿ ವರ್ಷ ಬಾರ್ ನವೀಕರಣ ಮಾಡುವ ವೇಳೆಯಲ್ಲಿ ಸಿಗುವ ವ್ಯಾಪಕ ಹಣ, ನಂತರ ವರ್ಷ ಪೂರ್ತಿ ಪ್ರತಿ ತಿಂಗಳು ಸಿಗುವ ಹಣಕ್ಕಾಗಿ ಬಡವರು, ಮಧ್ಯಮ ವರ್ಗದ ಜನರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ.

Share this article