ವಿದ್ಯಾರ್ಥಿಗಳಿಗೆ ಉದಾತ್ತ ಕನಸು, ನಿರ್ದಿಷ್ಟ ಗುರಿ ಮುಖ್ಯ: ಬ್ರಹ್ಮಂಕರ್

KannadaprabhaNewsNetwork |  
Published : Jun 29, 2026, 01:45 AM IST
೨೬ಕೆಎಂಎನ್‌ಡಿ-೨ನಾಗಮಂಗಲ ತಾಲೂಕಿನ ಕದಬಹಳ್ಳಿ ಟೋಲ್ ಕೇಂದ್ರದಲ್ಲಿ ದೇವಿಹಳ್ಳಿ ಹಾಸನ ಟೋಲ್ವೆ ಪ್ರೈವೇಟ್ ಕಂಪನಿ ವತಿಯಿಂದ ಆಯೋಜಿಸಿದ್ದ ಪಾಲುದಾರರ ನಿರ್ವಹಣೆ ಪ್ರೇರಣಾದಾಯಕ ಪುರಸ್ಕಾರ ಸಮಾರಂಭದಲ್ಲಿ ಕಳೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ್ದ ೪೫ ಮಂದಿ ವಿದ್ಯಾರ್ಥಿಗಳನ್ನು ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಮಕ್ಕಳು ವಿದ್ಯಾವಂತರಾಗಿ ಸಮಾಜದ ಸತ್ಪ್ರಜೆಗಳಾಗಿ ಹೊರಹೊಮ್ಮಬೇಕೆಂದು ಪ್ರತಿಯೊಬ್ಬ ಪೋಷಕರು ಅಪಾರವಾದ ಕನಸು ಕಟ್ಟಿಕೊಂಡಿರುತ್ತಾರೆ. ಜೀವನ ಎಂದರೇನು ಎಂಬುದನ್ನು ಅರ್ಥೈಸಿಕೊಂಡು ವಿದ್ಯಾರ್ಥಿ ದಿಸೆಯಲ್ಲಿ ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಸಮಾಜದ ದೊಡ್ಡ ಶಕ್ತಿಗಳಾಗಿ ಹೊರಹೊಮ್ಮಬೇಕು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉದಾತ್ತ ಕನಸು, ನಿರ್ದಿಷ್ಟ ಗುರಿ ಇರಬೇಕು. ಆಗ ಮಾತ್ರ ಜೀವನದಲ್ಲಿ ಏನಾದರೊಂದು ಸಾಧನೆ ಮಾಡಬಹುದು ಎಂದು ರಾಷ್ಟ್ರೀಯ ಹೆದ್ದಾರಿ ಬೆಂಗಳೂರು ವಿಭಾಗೀಯ ವ್ಯವಸ್ಥಾಪಕ ನಿರ್ದೇಶಕ ವಿ.ಪಿ.ಬ್ರಹ್ಮಂಕರ್ ಅಭಿಪ್ರಾಯಪಟ್ಟರು.

ತಾಲೂಕಿನ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕದಬಹಳ್ಳಿ ಟೋಲ್ ಕೇಂದ್ರದಲ್ಲಿ ದೇವಿಹಳ್ಳಿ ಹಾಸನ ಟೋಲ್ವೆ ಪ್ರೈವೇಟ್ ಕಂಪನಿ ವತಿಯಿಂದ ಆಯೋಜಿಸಿದ್ದ ಪಾಲುದಾರರ ನಿರ್ವಹಣೆ ಪ್ರೇರಣಾದಾಯಕ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಮಕ್ಕಳು ವಿದ್ಯಾವಂತರಾಗಿ ಸಮಾಜದ ಸತ್ಪ್ರಜೆಗಳಾಗಿ ಹೊರಹೊಮ್ಮಬೇಕೆಂದು ಪ್ರತಿಯೊಬ್ಬ ಪೋಷಕರು ಅಪಾರವಾದ ಕನಸು ಕಟ್ಟಿಕೊಂಡಿರುತ್ತಾರೆ. ಜೀವನ ಎಂದರೇನು ಎಂಬುದನ್ನು ಅರ್ಥೈಸಿಕೊಂಡು ವಿದ್ಯಾರ್ಥಿ ದಿಸೆಯಲ್ಲಿ ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಸಮಾಜದ ದೊಡ್ಡ ಶಕ್ತಿಗಳಾಗಿ ಹೊರಹೊಮ್ಮಬೇಕು ಎಂದರು.

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಒಟ್ಟು ೧.೪ ಲಕ್ಷ ಕಿಮೀ ಜಾಲಬಂಧ ಹೊಂದಿದೆ. ರಾಜ್ಯದಲ್ಲಿ ೫೦ ಸಾವಿರ ಕಿಮೀನಷ್ಟು ಉತ್ತಮ ಗುಣಮಟ್ಟ ಹಾಗೂ ಸುಂದರವಾದ ದ್ವಿಪಥ ಹಾಗೂ ಚತುಷ್ಪಥ ರಸ್ತೆ ನಿರ್ಮಿಸುವ ಮೂಲಕ ಹೆದ್ದಾರಿ ವಾಹನಗಳ ಸುಗಮ ಸಂಚಾರಕ್ಕೆ ಉತ್ತಮ ಸೇವೆ ನೀಡುತ್ತಿದೆ. ಕಂಪನಿಯ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್)ನಿಧಿಯಲ್ಲಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಜನಸಾಮಾನ್ಯರಿಗೆ ಅನುಕೂಲವಾಗುವಂತಹ ಸಮಾಜ ಮುಖಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದರು.

ಹಾಸನ ಕೃಷಿ ಕಾಲೇಜಿನ ಡೀನ್ ಡಾ.ಕೆ.ಎನ್.ಮುನಿಸ್ವಾಮಿಗೌಡ ಮಾತನಾಡಿ, ಒಬ್ಬ ಮನುಷ್ಯ ಜೀವನದಲ್ಲಿ ಏನಾದರೊಂದು ಸಾಧನೆ ಮಾಡಬೇಕೆಂದರೆ ದೈಹಿಕ, ಮಾನಸಿಕ ಆರೋಗ್ಯ ಹಾಗೂ ಸಮಯ ಪ್ರಜ್ಞೆ ಬಹಳ ಮುಖ್ಯ. ಅದಮ್ಯ ದೃಢ ಸಂಕಲ್ಪ ಇದ್ದಾಗ ಮಾತ್ರ ಸಾಧನೆಯ ಗುರಿ ಮುಟ್ಟಬಹುದು. ಸಂಬಂಧವಿಲ್ಲದ ವಿಚಾರಗಳ ಬಗ್ಗೆ ಚಿಂತನೆ ಮಾಡುತ್ತಾ ಬುದ್ಧಿಶಕ್ತಿಯನ್ನು ನಷ್ಟ ಮಾಡಿಕೊಳ್ಳುತ್ತಿರುವ ವಿದ್ಯಾರ್ಥಿಗಳು ತಮ್ಮ ಮೆದುಳಿನ ಶಕ್ತಿಯನ್ನು ಬಳಕೆ ಮಾಡಿಕೊಂಡು ಏನಾದರೊಂದು ಸಾಧನೆ ಮಾಡಬೇಕು ಎಂದರು.

ಹಾಸನದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ಅನುಷ್ಠಾನ ಘಟಕದ ಯೋಜನಾ ನಿರ್ದೇಶಕ ಕೆ.ಪಿ.ಎಸ್.ಕೆ.ಮಥಿವಾನನ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಮಾರಂಭದ ವೇದಿಕೆಯಲ್ಲಿ ದೇವಿಹಳ್ಳಿ ಹಾಸನ ಟೋಲ್ವೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ರಸ್ತೆ ಬದಿಯಲ್ಲಿ ಬರುವ ಸರ್ಕಾರಿ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡಿ ಕಳೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ್ದ ೪೫ ಮಂದಿ ವಿದ್ಯಾರ್ಥಿಗಳಿಗೆ ಪ್ರಥಮ ₹೧೦ ಸಾವಿರ, ದ್ವಿತೀಯ ₹೫ ಸಾವಿರ, ತೃತೀಯ ₹೨.೫ ಸಾವಿರ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಐದು ಮಂದಿ ಬಡ ವಿದ್ಯಾರ್ಥಿಗಳಿಗೆ ತಲಾ ₹೫ ಸಾವಿರ ನಗದು ಬಹುಮಾನ ವಿತರಿಸಲಾಯಿತು.

ಕದಬಹಳ್ಳಿ ಟೋಲ್ ಕೇಂದ್ರದ ಯೋಜನಾ ಮುಖ್ಯಸ್ಥ ಸಿ.ಕೆ.ಸುನೀಲ್, ತಾಂತ್ರಿಕ ವಿಭಾಗದ ಉಪ ವ್ಯವಸ್ಥಾಪಕ ವಿಪಿನ್‌ ಶರ್ಮಾ, ಹೆದ್ದಾರಿ ನಿರ್ವಹಣೆಯ ನಿವೃತ್ತ ಇಂಜಿನೀಯರ್ ಕರ್ನಲ್ ಕೆ.ಎಸ್.ನಟೇಶ್, ಕದಬಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅನಿತಾ ಸೇರಿ ಟೋಲ್ ಕೇಂದ್ರದ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆಂಪೇಗೌಡರ ದೂರದೃಷ್ಟಿಯಿಂದ ಬೆಂಗಳೂರು ವಿಶ್ವ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ: ಜಿ.ಆದರ್ಶ
ಡ್ರಗ್ಸ್‌ ಕೇಸ್‌ ಆರೋಪಿಗಳಿಗೆ ಪೊಲೀಸರ 1 ಎಡವಟ್ಟಿನ ಲಾಭ!