ಡ್ರಗ್ಸ್‌ ಕೇಸ್‌ ಆರೋಪಿಗಳಿಗೆ ಪೊಲೀಸರ 1 ಎಡವಟ್ಟಿನ ಲಾಭ!

KannadaprabhaNewsNetwork |  
Published : Jun 29, 2026, 01:45 AM IST
ಡ್ರಗ್ಸ್‌  | Kannada Prabha

ಸಾರಾಂಶ

ಮಾದಕ ದ್ರವ್ಯ ಮತ್ತು ಅಮಲು ಪದಾರ್ಥಗಳ ಕಳ್ಳಸಾಗಣೆಯಲ್ಲಿ‌ ತೊಡಗಿರುವ ವ್ಯಕ್ತಿಯನ್ನು ಮುನ್ನೆಚ್ಚರಿಕೆಯಿಂದ ಬಂಧಿಸಿಡಲು ಆದೇಶ ಹೊರಡಿಸುವಾಗ ಪೊಲೀಸ್ ಇಲಾಖೆ ಮಾಡುವ ಲೋಪಗಳೇ ಬಂಧಿತರ ತ್ವರಿತ ಬಿಡುಗಡೆಗೆ ಕಾರಣವಾಗುತ್ತಿರುವ ಪ್ರಸಂಗಗಳು ಹೆಚ್ಚಾಗುತ್ತಿವೆ.

ವೆಂಕಟೇಶ್‌ ಕಲಿಪಿ

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಾದಕ ದ್ರವ್ಯ ಮತ್ತು ಅಮಲು ಪದಾರ್ಥಗಳ ಕಳ್ಳಸಾಗಣೆಯಲ್ಲಿ‌ ತೊಡಗಿರುವ ವ್ಯಕ್ತಿಯನ್ನು ಮುನ್ನೆಚ್ಚರಿಕೆಯಿಂದ ಬಂಧಿಸಿಡಲು ಆದೇಶ ಹೊರಡಿಸುವಾಗ ಪೊಲೀಸ್ ಇಲಾಖೆ ಮಾಡುವ ಲೋಪಗಳೇ ಬಂಧಿತರ ತ್ವರಿತ ಬಿಡುಗಡೆಗೆ ಕಾರಣವಾಗುತ್ತಿರುವ ಪ್ರಸಂಗಗಳು ಹೆಚ್ಚಾಗುತ್ತಿವೆ.

ಮಾದಕ ದ್ರವ್ಯ ಮತ್ತು ಅಮಲು ಪದಾರ್ಥಗಳ ಕಳ್ಳಸಾಗಣೆ ತಡೆ ಕಾಯ್ದೆ ಅಡಿ ವ್ಯಕ್ತಿಯೋರ್ವನನ್ನು ಬಂಧಿಸಲು ಆದೇಶಿಸಿದಾಗ, ಅದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಬಂಧಿತನಿಗೆ ಒದಗಿಸುವುದು ಕಡ್ಡಾಯ‌. ಈ ನಿಯಮ ಪಾಲಿಸದ ಕಾರಣ, ಒಂದು ವರ್ಷ ಜೈಲಿನಲ್ಲಿರಬೇಕಾದ ಆರೋಪಿಗಳು ಬಹುಬೇಗ ಕೋರ್ಟ್ ಆದೇಶದ ಮೇರೆಗೆ ಬಿಡುಗಡೆಯಾಗುತ್ತಿದ್ದಾರೆ.

ಪೊಲೀಸರ ಕರ್ತವ್ಯ ಲೋಪದಿಂದ ಈ ಕಾಯ್ದೆಯಡಿ ಬಂಧನಕ್ಕೆ ಒಳಗಾದ ದಾವಣಗೆರೆಯ ಆರೋಪಿಯೋರ್ವ ಮೂರೇ ತಿಂಗಳಲ್ಲಿ ಬಂಧಮುಕ್ತನಾಗಿದ್ದಾನೆ.

ಮಾದಕ ವಸ್ತುಗಳ ಸಾಗಣೆ ಚಟುವಟಿಕೆಯಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದ ದಾವಣಗೆರೆ ಜಿಲ್ಲೆಯ ಸಂತೆಬೆನ್ನೂರು ಗ್ರಾಮದ ನಿವಾಸಿ ಜಾಕೀರ್ ಹುಸೇನ್ ಎಂಬಾತನನ್ನು ‘ಪಿಐಟಿಎನ್ ಡಿಪಿಎಸ್’ ಕಾಯ್ದೆಯಡಿ 2026ರ ಫೆ.23ರಂದು ಬಂಧಿಸಲು ಸರ್ಕಾರ ಆದೇಶಿಸಿತ್ತು. ಅದರ ರದ್ದತಿ ಕೋರಿ ಆತ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ.

ಈ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರ ಪೀಠ, ಬಂಧನ ಆದೇಶ ಹೊರಡಿಸಲು ಆಧರಿಸಿದ ದಾಖಲೆಗಳನ್ನು ಬಂಧಿತನಿಗೆ ನೀಡಬೇಕೆಂದು ಮಣಿಪುರ ಸರ್ಕಾರ ಬುಯಮಯುಮ್ ನಡುವಿನ ಪ್ರಕರಣದ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ಹೊರಡಿಸಿರುವ ಮಾರ್ಗಸೂಚಿಯನ್ನು ಪೊಲೀಸರು ಪಾಲನೆ ಮಾಡಿಲ್ಲ. ಆದ್ದರಿಂದ ಹುಸೇನ್ ಬಂಧನ ಆದೇಶವನ್ನು ರದ್ದುಪಡಿಸಲಾಗುತ್ತಿದೆ. ಬಂಧಿತನನ್ನು ಬಿಡುಗಡೆ ಮಾಡಬೇಕು ಎಂದು ಇತ್ತೀಚೆಗೆ ಆದೇಶಿಸಿದೆ.

ಪ್ರಕರಣದ ವಿವರ:

ಸಂತೆಬೆನ್ನೂರು ಸರ್ಕಲ್ ಇನ್ಸ್‌ಪೆಕ್ಟರ್ ಹಾಗೂ ದಾವಣಗೆರೆ ಜಿಲ್ಲಾ ಎಸ್‌ಪಿ ಶಿಫಾರಸು ಮೇರೆಗೆ ದಾವಣಗೆರೆ ಪೂರ್ವ ವಲಯದ ಐಜಿಪಿ ಅವರು ಹುಸೇನ್ ಅನ್ನು ಪಿಐಟಿಎನ್ ಡಿಪಿಎಸ್ ಕಾಯ್ದೆಯ ಅಡಿ ಬಂಧಿಸಲು 2026ರ ಫೆ.23ರಂದು ಆದೇಶಿಸಿದ್ದರು. ಅದರಂತೆ ಆತನನ್ನು ಬಂಧಿಸಿ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿಡಲಾಗಿತ್ತು. ಐಜಿಪಿಯ ಆದೇಶ ರದ್ದುಪಡಿಸಿ, ತನ್ನನ್ನು ಬಂಧಮುಕ್ತ ಮಾಡಲು ಆದೇಶಿಸುವಂತೆ ಕೋರಿ ಹುಸೇನ್ ಹೈಕೋರ್ಟ್ ಗೆ ತಕರಾರು ಅರ್ಜಿ ಸಲ್ಲಿಸಿದ್ದನು.

ಅರ್ಜಿದಾರನ ಪರ ವಕೀಲ ಡಿ.ಮೋಹನ್ ಕುಮಾರ್, ಬಂಧನ ಆದೇಶದ‌ ಕನ್ನಡ ಹಾಗೂ ಇಂಗ್ಲೀಷ್ ಪ್ರತಿಯನ್ನು ಬಂಧಿತನಿಗೆ‌ ಒದಗಿಸಲಾಗಿದೆ. ಆದರೆ, ಬಂಧನ ಆದೇಶ ಹೊರಡಿಸಲು ಆಧರಿಸಿದ ದಾಖಲೆ ಒದಗಿಸಿಲ್ಲ. ಮಣಿಪುರ ಸರ್ಕಾರ ಮತ್ತು ಬುಯಮಯುಮ್ ಅಬ್ದುಲ್ ಹನನ್ ಮತ್ತಿತರರ ನಡುವಿನ ಪ್ರಕರಣದಲ್ಲಿ ಪಿಐಟಿಎನ್ ಡಿಪಿಎಸ್ ಕಾಯ್ದೆಯ ಅಡಿ ಬಂಧನ ಆದೇಶ ಹೊರಡಿಸಲು ಆಧರಿಸಿದ ದಾಖಲೆಗಳನ್ನು ಬಂಧಿತನಿಗೆ ಒದಗಿಸಬೇಕು. ಆಗ ಆತ ತನ್ನ ಬಂಧನ ಆದೇಶದ ವಿರುದ್ಧ ಮನವಿ ಪತ್ರ ಸಲ್ಲಿಸಲು ಅವಕಾಶವಾಗುತ್ತದೆ. ಮನವಿ ಪತ್ರ ಸಲ್ಲಿಸುವುದು ಮೂಲಭೂತ ಹಕ್ಕು. ದಾಖಲೆ ನೀಡದಿರುವುದು ಸಂವಿಧಾನದ ಪರಿಚ್ಛೇದ 22(5) ಉಲ್ಲಂಘನೆ ಎಂದು ವಾದ ಮಂಡಿಸಿದರು.

ಸರ್ಕಾರದ ಪರ ವಕೀಲರು, ದಾಖಲೆಗಳನ್ನು ಅರ್ಜಿದಾರನಿಗೆ ಒದಗಿಸಿರುವ ಕುರಿತ ಸ್ವೀಕೃತ ಪ್ರತಿಯು ಪ್ರಕರಣಕ್ಕೆ ಸಂಬಂಧಿಸಿದ ಕಡತದಲ್ಲಿ ಇಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ವಾದ- ಪ್ರತಿವಾದ ಆಲಿಸಿದ ನ್ಯಾಯಪೀಠ, ಹುಸೈನ್ ಬಿಡುಗಡೆಗೆ ಆದೇಶಿಸಿದೆ.

ಬಾಕ್ಸ್...

ಕಾಯ್ದೆ ಏನು ಹೇಳುತ್ತೆ?

ಮಾದಕ ವಸ್ತುಗಳ ಕಳ್ಳಸಾಗಣೆಯಲ್ಲಿ ಪದೇಪದೇ ಭಾಗಿಯಾಗುವ ಮತ್ತು ಸಂಘಟಿತ ಅಪರಾಧಗಳನ್ನು ಎಸಗುವ ವ್ಯಕ್ತಿ ಪುನಃ ಅಪರಾಧ ಮಾಡದಂತೆ ತಡೆಯಲು, ಯಾವುದೇ ಪೂರ್ವ ಅಪರಾಧ ಸಾಬೀತಾಗದಿದ್ದರೂ ಮುಂಜಾಗ್ರತಾ ಕ್ರಮವಾಗಿ ಮೂರು ತಿಂಗಳ ಕಾಲ ಬಂಧಿಸಿ ಜೈಲಿನಲ್ಲಿಡಲು ಕಾಯ್ದೆಯಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರಗಳಿಗೆ ಅವಕಾಶವಿದೆ. ಬಂಧಿತನನ್ನು ಒಂದು ವರ್ಷದವರೆಗೆ ಬಂಧನದಲ್ಲಿ ಮುಂದುವರಿಸಲು ಹೈಕೋರ್ಟ್ ನ್ಯಾಯಾಧೀಶರನ್ನು ಒಳಗೊಂಡ ಸಲಹಾ ಮಂಡಳಿಯ ಅನುಮೋದನೆ ನೀಡಬೇಕು. ಈ ಕಾಯ್ದೆಯಡಿ ಬಂಧಿತ ವ್ಯಕ್ತಿಗೆ ಸಾಮಾನ್ಯ ಅಪರಾಧಗಳಂತೆ ಸುಲಭವಾಗಿ ಜಾಮೀನು ಸಿಗುವುದಿಲ್ಲ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯಾರ್ಥಿಗಳಿಗೆ ಉದಾತ್ತ ಕನಸು, ನಿರ್ದಿಷ್ಟ ಗುರಿ ಮುಖ್ಯ: ಬ್ರಹ್ಮಂಕರ್
ಕೆಂಪೇಗೌಡರ ದೂರದೃಷ್ಟಿಯಿಂದ ಬೆಂಗಳೂರು ವಿಶ್ವ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ: ಜಿ.ಆದರ್ಶ