ಹುಲ್ಸೆಯಲ್ಲಿ ಒಂಟಿ ಪಂಜುರ್ಲಿ ದೈವದ ಕೋಲ

KannadaprabhaNewsNetwork |  
Published : May 10, 2024, 01:36 AM IST
೦೯ಬಿಎಚ್‌ಆರ್ ೫: ಬಾಳೆಹೊನ್ನೂರು ಸಮೀಪದ ಹುಲ್ಸೆಯಲ್ಲಿ ಒಂಟಿ ಪಂಜುರ್ಲಿ ಹಾಗೂ ಪರಿವಾರ ದೇವರುಗಳ ದೈವಾರಾಧನೆ ವಿಜೃಂಭಣೆಯಿಂದ ನಡೆಯಿತು. | Kannada Prabha

ಸಾರಾಂಶ

ಬಾಳೆಹೊನ್ನೂ, ಹೇರೂರು ಗ್ರಾಮದ ಹುಲ್ಸೆಯಲ್ಲಿ ನಾಲ್ಕು ದಶಕಗಳ ನಂತರ ನಡೆದ ಒಂಟಿ ಪಂಜುರ್ಲಿ, ಚೌಡಿ ಮತ್ತು ಕಪ್ಪಿನ ಬೂತ ಪರಿವಾರ ದೈವಗಳ ಕೋಲ ನೋಡುಗರ ಮೈ ನವಿರೇಳಿಸುವಂತೆ ಅದ್ಧೂರಿಯಾಗಿ ನಡೆಯಿತು.

- ಹೊರನಾಡಿನಿಂದ ದೈವಗಳ ಭಂಡಾರವನ್ನು ಮೆರವಣಿಗೆಯಲ್ಲಿ ಹುಲ್ಸೆಗೆ ತಂದು ನೇಮೋತ್ಸವಕ್ಕೆ ಚಾಲನೆ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಹೇರೂರು ಗ್ರಾಮದ ಹುಲ್ಸೆಯಲ್ಲಿ ನಾಲ್ಕು ದಶಕಗಳ ನಂತರ ನಡೆದ ಒಂಟಿ ಪಂಜುರ್ಲಿ, ಚೌಡಿ ಮತ್ತು ಕಪ್ಪಿನ ಬೂತ ಪರಿವಾರ ದೈವಗಳ ಕೋಲ ನೋಡುಗರ ಮೈ ನವಿರೇಳಿಸುವಂತೆ ಅದ್ಧೂರಿಯಾಗಿ ನಡೆಯಿತು.

ಹೊರನಾಡಿನ ಹೊಸ ನೆಲದಿಂದ ದೈವಗಳ ಭಂಡಾರವನ್ನು ಆಕರ್ಷಕ, ಸಾಂಪ್ರದಾಯಿಕ ಮೆರವಣಿಗೆ ಮೂಲಕ ಹುಲ್ಸೆಗೆ ತಂದು ಭಂಡಾರ ಸ್ಥಾಪನೆಯೊಂದಿಗೆ ವಿದ್ಯುಕ್ತವಾಗಿ ಸಂಜೆ ನೇಮೋತ್ಸವಕ್ಕೆ ಚಾಲನೆ ನೀಡಲಾಯಿತು. ರಾತ್ರಿ 9 ಗಂಟೆ ಯಿಂದ ಆರಂಭಗೊಂಡ ಕೋಲ ಬೆಳಿಗ್ಗೆ 9 ಗಂಟೆವರೆಗೂ ನಿರಂತರವಾಗಿ ಮಲೆನಾಡಿನ ಸಾಂಪ್ರದಾಯದಂತೆ ನಡೆಯಿತು. ಸಂಸೆ ಸಮೀಪದ ಕುಂದಾಡಿಯ ಪಾಂಡರು ವರ್ಗದ ತಂಡದವರು ದೈವಗಳ ಕೋಲ ನಡೆಸಿಕೊಟ್ಟರು.ಮುಖ್ಯಆಕರ್ಷಣೆಯಾಗಿ ಪಂಜುರ್ಲಿ ದೈವ ಆವೇಶಭರಿತವಾಗಿ ಉರಿಯುವ ಬೆಂಕಿಗೆ ಬಿದ್ದು ಅದರ ಮೇಲೆ ಮಲಗಿಕೊಂಡು ಘರ್ಜನೆ ಮಾಡಿದ್ದು, ನೆರೆದಿದ್ದ ಸಾವಿರಾರು ಜನರ ಮೈ ನವಿರೇಳಿಸಿತು. ಒಂಟಿ ಪಂಜುರ್ಲಿ ದೈವಗಳು ಒಟ್ಟಾಗಿ ಉರಿಯುವ ದೀವಟಿಗೆಯನ್ನು ಎದೆ ಮತ್ತು ತಲೆಗೆ ಹೊಡೆದುಕೊಂಡು ಇಡೀ ಪ್ರಾಂಗಣದಲ್ಲಿ ಅಬ್ಬರಿಸಿದ್ದು, ತಲೆಗೆ ತೆಂಗಿನಕಾಯಿ ಹೊಡೆದು ಕೊಂಡು ಚೂರು ಚೂರು ಮಾಡಿದ್ದು ಎಲ್ಲರ ಎದೆ ನಡುಗಿಸಿತು.ಸಾಂಪ್ರದಾಯಿಕ ವೇಷ ಭೂಷಣದೊಂದಿಗೆ ಪರಿವಾರ ದೇವತೆಗಳಾದ ಒಂಟಿ ಪಂಜುರ್ಲಿ, ಚೌಡಿ ಹಾಗೂ ಕಪ್ಪಿನ ಬೂತಗಳ ನರ್ತನ ಗಮನ ಸೆಳೆಯಿತು. ಬೆಳಗ್ಗಿನ ವೇಳೆ ದೈವಗಳ ಎದುರು ಅನೇಕರು ತಮ್ಮ ಕಷ್ಟಗಳನ್ನು ಹೇಳಿಕೊಂಡು ಪರಿಹಾರ ಕಂಡು ಕೊಂಡರು. ಮುದ್ರೆ ಪೂಜೆಯೊಂದಿಗೆ ಕೋಲ ಸಮಾಪ್ತಿಯಾಯಿತು.ದೂಬಳದ ದೈವ ಚಿಂತಕ ಸುರೇಶ್ ಆಗಮಿಸಿ ದೈವಗಳ ಹೇಳಿಕೆ ಕೇಳಿಕೆ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು. ಮುಖ್ಯಸ್ಥರಾದ ಹುಲ್ಸೆ ರತ್ನರಾಜ್ ಜೈನ್, ಹೊರನಾಡು ಹೊಕ್ಕಳಿಕೊಪ್ಪದ ಅಣ್ಣಯ್ಯ, ನಾಗೇಂದ್ರ, ಹೊಸನೆಲದ ಆದಿ ರಾಜಯ್ಯ, ಪಾಳೇಗಾರ ವಂಶಸ್ಥ ಹೊರನಾಡು ದೊಡ್ಡಮನೆ ರಾಜೇಂದ್ರ ಪ್ರಸಾದ್ ಹೆಗ್ಗಡೆ, ಪರಂಪರೆ ಮನೆತನದ ಮುಖ್ಯಸ್ಥ ದೇವರಮನೆ ಪ್ರಕಾಶ್ ಹೆಗ್ಗಡೆ, ಮಣ್ಣಿನಪಾಲ್ ಪಟೇಲ್ ಮನೆತನದ ಸನತ್ ಕುಮಾರ್, ಹೊರನಾಡು ಗ್ರಾಮದ ಹೊಸದೇವರ ಚಾವಡಿಯ ಅಡಳಿತಗಾರ ಕಾಳಿಕೆರೆ ರತ್ನವರ್ಮ ಸೇರಿದಂತೆ ಕಳಸ, ಸಂಸೆ, ಹೊರನಾಡು, ಮೇಗುಂದಾ, ಹಿರೇಬೈಲು, ಕುದುರೆಮುಖ, ಬಾಳೆಹೊನ್ನೂರು, ಬಲಿಗೆ, ಕೊಗ್ರೆ, ಕೊಪ್ಪ, ಬರಗಲ್ ಭಾಗದ ಸಾವಿರಾರು ಜನ ಭಾಗವಹಿಸಿದ್ದರು.

೦೯ಬಿಎಚ್‌ಆರ್ ೫: ಬಾಳೆಹೊನ್ನೂರು ಸಮೀಪದ ಹುಲ್ಸೆಯಲ್ಲಿ ಒಂಟಿ ಪಂಜುರ್ಲಿ ಹಾಗೂ ಪರಿವಾರ ದೇವರುಗಳ ದೈವಾರಾಧನೆ ವಿಜೃಂಭಣೆಯಿಂದ ನಡೆಯಿತು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ