ಕನ್ನಡಪ್ರಭ ವಾರ್ತೆ ಮೈಸೂರು
ಈ ಕವನ ಸಂಕಲನದ ತುಂಬ ಪ್ರೀತಿ ಹರಿದಾಡಿದೆ, ಭಾವನೆಗಳು ನದಿಯಂತೆ ಓದುಗರೆದೆಗೆ ಹರಿದಿವೆ. ಪರಿತಾಪಗಳು ಸಾಕಷ್ಟು ಬಾರಿ ಸುಳಿದಾಡಿ ತಾವೇ ನೊಂದು ಅಕ್ಷರಗಳಾಗಿ ಕುಳಿತಿವೆ. ಕೊನೆಯಿಲ್ಲದ ಏಕಾಂಗಿತನದ ಅಸಹನೆ ಕೆಲವೊಮ್ಮೆ ಓದುಗನನ್ನೂ ದುಃಖಿತನನ್ನಾಗಿ ಮಾಡುತ್ತದೆ. ಸಹಿಸಲಾರದ ಒಂಟಿತನವಿದ್ದರೂ ಈ ಪದಲಾಲಿತ್ಯದಲ್ಲಿ ತನ್ನ ಪತ್ನಿಯನ್ನು ಜೊತೆಗಿಟ್ಟುಕೊಂಡು ಒಂಟಿತನದ ಬೇಗುದಿ ನೀಗಿಕೊಳ್ಳುವ ತಹತಹವಿದೆ. ಪಶ್ಚಾತ್ತಾಪದ ಸುಳಿಯಲ್ಲಿ ಸಿಲುಕಿ ಹೊರಬರಲಾರದೆ ನರಳಿದ ರಾತ್ರಿಗಳಿವೆ. ತನ್ನ ತಪ್ಪಿಗಾಗಿ ತನ್ನನ್ನೇ ಶಿಕ್ಷೆಗೀಡು ಮಾಡಿಕೊಳ್ಳುವ ನಿದ್ದೆ ಬಾರದ ಕಣ್ಣೀರ ರಾತ್ರಿಗಳಿವೆ.
‘ಕಣ್ಣಲ್ಲಿ ಕಣ್ಣೀರು ಇಲ್ಲದೇ ಹೋಗಿದ್ದರೆ ಕಣ್ಣೇ ನೀನಾಗಿದ್ದ ಸತ್ಯ ತಿಳಿಯುತ್ತಿರಲಿಲ್ಲ ಮನದಲ್ಲಿ ನೋವು ಇಲ್ಲದಿದ್ದರೆ ಹೃದಯವೇ ನೀನೆಂಬ ವಾಸ್ತವ ಅರಿವಾಗುತ್ತಿರಲಿಲ್ಲ!ಇದಕ್ಕೆ ಯಾವ ವ್ಯಾಖ್ಯಾನವೂ ಬೇಡ, ಅರ್ಥಗಳು ತಂತಾನೇ ಹರಡಿಕೊಳ್ಳುತ್ತವೆ.
ಭಾರವಾದ ಮನಸ ಭೂದೇವಿಯಂತೆ ಹೊರುತ್ತಿದ್ದೆ ಆವರಿಸಿದ ಮೌನದಲಿ ನಾದ ಹೊಮ್ಮಿಸುತ್ತಿದ್ದೆ ಕಣ್ಮುಚ್ಚಿದರೂ ಕಣ್ತೆರೆದರೂ ನೀನಿಲ್ಲದ ಸತ್ಯದ ಅಸಲಿಯತ್ತು ನೆನಪುಗಳ ನೆಪದಲ್ಲಿ ಅನುಕ್ಷಣವೂ ತಿವಿದು ನೋವ ಚಿತ್ರ ಬಿಡಿಸುತ್ತಿದೆ.
ಸಂಕಲನದ ಪ್ರತಿ ಅಕ್ಷರವೂ, ರಘು ಅವರಿಗೆ ಅಗಲಿ ಹೋದ ತನ್ನ ಮಡದಿ ನಿರ್ಮಲಾ ಅವರ ಮೇಲಿನ ಪ್ರೀತಿಯನ್ನು ಪ್ರಚುರ ಪಡಿಸುತ್ತದೆಯೇ ಹೊರತು, ಕವನಗಳನ್ನು ಹೆಣೆಯಲು ಪ್ರಯತ್ನಿಸಿಲ್ಲ. ನಾಲ್ಕು ಜನ ಓದುವುದು ನಂತರದ ವಿಷಯ, ಆದರೆ ತನ್ನ ಭಾವೋದ್ವೇಗವನ್ನು, ಕದಡಿದ ಮನಃಸ್ಥಿತಿಯನ್ನು ಶಮನ ಮಾಡಿಕೊಳ್ಳುವ ಬಗೆ ಅನನ್ಯವಾಗಿದೆ. ಆದರೆ ಇಲ್ಲೊಂದು ವೈರುಧ್ಯ, ವ್ಯಂಗ್ಯವೆಂದರೆ ಕವನಗಳನ್ನು ಬರೆಯುತ್ತಾ ಬರೆಯುತ್ತಾಾ ಕವಿ ತನ್ನ ಸತಿಯಲ್ಲಿ, ಆಕೆಯ ನೆನಪಲ್ಲಿ ಲೀನವಾಗುವ, ಮತ್ತೂ ದುಃಖದಲ್ಲೇ, ಒಂಟಿತನದಲ್ಲೇ ಮುಳುಗಿಹೋಗುವ ಪರಿ, ಓದುಗನಿಗೆ ಸ್ಪಷ್ಟವಾಗಿ ಗೋಚರವಾಗುತ್ತದೆ. ಕವನಗಳು ಆಪ್ತವೆನಿಸುತ್ತವೆ. ಮನ ಕಲಕುತ್ತವೆ. ಪುಟ್ಟ ಕವನದಲ್ಲಿ ಅಗಾಧವಾದುದನ್ನು ಹೇಳುವ ರೀತಿ ಮೆಚ್ಚುವಂತಹುದು.
-ಬಿ.ಕೆ.ಮೀನಾಕ್ಷಿ, ಮೈಸೂರು