ರಾಜ್ಯದ ಅಡಕೆಗೆ ಮಹಾ ಕಿರಿಕ್‌ : ವರ್ತಕರಿಗೆ ಸಂಕಷ್ಟ

KannadaprabhaNewsNetwork |  
Published : Jun 20, 2026, 02:00 AM IST
Areca

ಸಾರಾಂಶ

ಮಲೆನಾಡು, ಕರಾವಳಿಯಿಂದ ಉತ್ತರ ಭಾರತದ ಖರೀದಿದಾರರಿಗೆ ಪೂರೈಕೆ ಮಾಡಲು ಕೊಂಡೊಯ್ಯುತ್ತಿದ್ದ ಸುಮಾರು 35 ಲಾರಿಗಳನ್ನು ಮಹಾರಾಷ್ಟ್ರದಲ್ಲಿ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ಇಲಾಖೆಯ ಅಧಿಕಾರಿಗಳು ತಪಾಸಣೆ (ಕಳಪೆ ಗುಣಮಟ್ಟ) ನೆಪದಲ್ಲಿ ತಡೆ ಹಿಡಿದಿದ್ದಾರೆ.

ಗೋಪಾಲ್ ಯಡಗೆರೆ

 ಶಿವಮೊಗ್ಗ :  ಮಲೆನಾಡು, ಕರಾವಳಿಯಿಂದ ಉತ್ತರ ಭಾರತದ ಖರೀದಿದಾರರಿಗೆ ಪೂರೈಕೆ ಮಾಡಲು ಕೊಂಡೊಯ್ಯುತ್ತಿದ್ದ ಸುಮಾರು 35 ಲಾರಿಗಳನ್ನು ಮಹಾರಾಷ್ಟ್ರದಲ್ಲಿ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ಇಲಾಖೆಯ ಅಧಿಕಾರಿಗಳು ತಪಾಸಣೆ (ಕಳಪೆ ಗುಣಮಟ್ಟ) ನೆಪದಲ್ಲಿ ತಡೆ ಹಿಡಿದಿದ್ದಾರೆ. ಇದರಿಂದಾಗಿ ಅಡಕೆ ತಲುಪಬೇಕಾದ ಸ್ಥಳಕ್ಕೆ ನಿಗದಿತ ಸಮಯಕ್ಕೆ ತಲುಪುತ್ತಿಲ್ಲ. ಇದು ವರ್ತಕರ ಚಿಂತೆಗೆ ಕಾರಣವಾಗಿದ್ದು, ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮುಂದೆ ಉತ್ತರ ಭಾರತದಿಂದ ಅಡಕೆ ಖರೀದಿಯೇ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ.

ಮಹಾರಾಷ್ಟ್ರದ ನಾಗ್ಪುರದ ಕಾಂಪ್ಟಿಯಲ್ಲಿ ತಡೆಹಿಡಿಯಲಾಗಿರುವ ಈ ಲಾರಿಗಳು ಶಿವಮೊಗ್ಗ, ಮಂಗಳೂರು, ಶಿರಸಿ ಭಾಗದಿಂದ ಹೋಗಿರುವಂತಹವು. ಈ ಎಲ್ಲಾ ಲಾರಿಗಳು ಮಹಾರಾಷ್ಟ್ರದ ಮೂಲಕ ಉತ್ತರ ಭಾರತದ ರಾಜ್ಯಗಳಿಗೆ ತೆರಳುತ್ತವೆ. ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ಹರ್ಯಾಣದ ಕಡೆ ಹೋಗುವ ಅಡಕೆ ತುಂಬಿದ ಲಾರಿಗಳು ಮಹಾರಾಷ್ಟ್ರದ ಮೂಲಕವೇ ತೆರಳುತ್ತವೆ.

ಲಾರಿಗಳನ್ನು ತಡೆದು ಪರಿಶೀಲನೆ

ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ಇಲಾಖೆಯ ಅಧಿಕಾರಿಗಳು ಈ ಲಾರಿಗಳನ್ನು ತಡೆದು ಪರಿಶೀಲನೆ ನಡೆಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಪರಿಶೀಲನೆ ನೆಪದಲ್ಲಿ ತಿಂಗಳುಗಟ್ಟಲೆ ಲಾರಿಯನ್ನು ಅಲ್ಲಿಯೇ ನಿಲ್ಲಿಸುತ್ತಿದ್ದಾರೆ. ಇದರಿಂದಾಗಿ ಅಡಕೆ ತಲುಪಬೇಕಾದ ಸ್ಥಳಕ್ಕೆ ನಿಗದಿತ ಸಮಯಕ್ಕೆ ತಲುಪುತ್ತಿಲ್ಲ. ಇದರಿಂದಾಗಿ ಮುಂದಿನ ದಿನಗಳಲ್ಲಿ ಉತ್ತರ ಭಾರತದಲ್ಲಿ ಅಡಕೆ ಖರೀದಿ ಪ್ರಕ್ರಿಯೆಯೇ ನಿಲ್ಲುವ ಆತಂಕ ಎದುರಾಗಿದೆ.

ಇಲ್ಲಿ ತಪಾಸಣೆ ನಡೆಸುವ ಅಧಿಕಾರಿಗಳು, ಲಾರಿಯಲ್ಲಿರುವ ಅಡಕೆ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸುತ್ತಾರೆ. ಅದರ ವರದಿ ಬರಲು ಒಂದು ತಿಂಗಳು ಬೇಕು. ಅಲ್ಲಿಯವರೆಗೂ ಲಾರಿಗಳನ್ನು ಅಲ್ಲಿಯೇ ನಿಲ್ಲಿಸಬೇಕಿದೆ. ಇದರಿಂದಾಗಿ ಲಾರಿ ಚಾಲಕರು ರಸ್ತೆಯಲ್ಲೇ ಉಳಿದರೆ, ವ್ಯಾಪಾರಿಗಳು ತೊಡಗಿಸಿರುವ ಕೋಟ್ಯಂತರ ರುಪಾಯಿ ಬಂಡವಾಳಕ್ಕೆ ಸಮಸ್ಯೆ ಎದುರಾಗುತ್ತದೆ. ಒಂದು ಲೋಡ್‌ಗೆ ಅಂದಾಜು ₹1.40 ಕೋಟಿ ಮೌಲ್ಯ ಇದೆ. ಸದ್ಯ ಇಂತಹ 35 ಅಡಕೆ ಲಾರಿಗಳನ್ನು (ಸುಮಾರು ₹50 ಕೋಟಿ ಮೌಲ್ಯ) ಮಹಾರಾಷ್ಟ್ರದಲ್ಲಿ ತಡೆಹಿಡಿಯಲಾಗಿದೆ.

ವ್ಯವಸ್ಥಿತ ಕಿರುಕುಳ

‘ಈ ಅಡಕೆಗೆ ಜಿಎಸ್‌ಟಿ, ಇ-ವೇ ಬಿಲ್ ಸೇರಿ ಎಲ್ಲಾ ಸೂಕ್ತ ದಾಖಲೆಗಳಿದ್ದರೂ, ಕೇವಲ ತೇವಾಂಶ ಹಾಗೂ ಅಡಕೆ ಹಾಳಾಗದಂತೆ ದುವಾ ಬಳಸುತ್ತಾರೆಂಬ ನೆಪ ಒಡ್ಡಿ ಲಾರಿಗಳನ್ನು ತಡೆ ಹಿಡಿಯುತ್ತಿದ್ದಾರೆ. ಇದೊಂದು ವ್ಯವಸ್ಥಿತ ಕಿರುಕುಳ’ ಎಂಬುದು ಶಿವಮೊಗ್ಗ ಸಹಕಾರಿ ಸಂಘಗಳು ಹಾಗೂ ವರ್ತಕರ ಆರೋಪ.

ನಾವು ಮಹಾರಾಷ್ಟ್ರ ಮೂಲಕ ಉತ್ತರ ಭಾರತದ ರಾಜ್ಯಗಳಿಗೆ ಅಡಕೆಯನ್ನು ಕಳುಹಿಸುತ್ತೇವೆಯೇ ಹೊರತು ಮಹಾರಾಷ್ಟ್ರದಲ್ಲಿ ಅಡಕೆ ಇಳಿಸುವುದಿಲ್ಲ. ನಾವು ಲಾರಿಗಳಲ್ಲಿ ಅಡಕೆಯನ್ನು ಮಾತ್ರ ಕಳಿಸುತ್ತಿರುವುದೇ ಹೊರತು, ಬ್ಯಾನ್ ಆಗಿರುವ ಸ್ವೀಟ್ ಸುಫಾರಿ ಅಥವಾ ಗುಟ್ಕಾವನ್ನು ನಾವು ಸಾಗಿಸುತ್ತಿಲ್ಲ. ಆದರೂ, ಮಹಾರಾಷ್ಟ್ರದ ಅಧಿಕಾರಿಗಳು ತಪಾಸಣೆ ನೆಪದಲ್ಲಿ ತಿಂಗಳುಗಟ್ಟಲೇ ಲಾರಿಗಳನ್ನು ತಡೆ ಹಿಡಿಯುತ್ತಿದ್ದಾರೆ.

ಕೇಳಿದರೆ, ಔರಂಗಾಬಾದ್‌ನ ಲ್ಯಾಬ್‌ಗೆ ಸ್ಯಾಂಪಲ್‌ಗಳನ್ನು ಕಳುಹಿಸುತ್ತೇವೆ. ಅದರ ರಿಪೋರ್ಟ್ ಆಧಾರದ ಮೇಲೆ ಮಾಲಿನ ಗುಣಮಟ್ಟ ನಿರ್ಧರಿಸಲಾಗುವುದು. ಅಡಕೆಯ ಗುಣಮಟ್ಟ ಸರಿ ಇಲ್ಲ ಎಂದರೆ ಅದನ್ನು ಸುಟ್ಟು ಹಾಕುತ್ತೇವೆ, ಇಲ್ಲ ದಂಡ ಹಾಕುತ್ತೇವೆ. ಈಗಾಗಲೇ ಹಲವು ಟ್ರಾನ್ಸ್‌ಪೋರ್ಟ್‌ ಮಾಲೀಕರ ಮೇಲೆ, ಕಂಪನಿಗಳ ಮೇಲೆ ಮತ್ತು ಪೂರೈಕೆದಾರರ ಮೇಲೆ ಕೇಸು ಹಾಕಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಬೆದರಿಕೆ ಹಾಕುತ್ತಾರೆ ಎಂಬುದು ವರ್ತಕರ ಅಳಲು.

ಈ ರೀತಿಯಾದರೆ ಬೆಳೆಗಾರರು ಹಾಗೂ ವರ್ತಕರ ಕಥೆ ಏನು? ಇದರ ನಷ್ಟವನ್ನು ಯಾರು ತುಂಬಿಕೊಡುತ್ತಾರೆ? ಎಂದು ಆರೋಪಿಸಿರುವ ಶಿವಮೊಗ್ಗ ಸಹಕಾರಿ ಸಂಘಗಳು ಹಾಗೂ ವರ್ತಕರು, ಸಂಸದ ಬಿ.ವೈ.ರಾಘವೇಂದ್ರ ಮೂಲಕ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ವಿಷಯ ಮುಟ್ಟಿಸಿದ್ದು, ಕೂಡಲೇ ಸಮಸ್ಯೆ ಬಗೆಹರಿಸಿಕೊಡುವಂತೆ ಮನವಿ ಮಾಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಅಡಕೆ ಬೆಳೆಗಾರರಿಗೆ ಸಂಕಷ್ಟ ತಪ್ಪಿದ್ದಲ್ಲ. ಒಂದಲ್ಲ ಒಂದು ರೀತಿಯ ಸಮಸ್ಯೆ ಎದುರಾಗುತ್ತಲೇ ಇದೆ. ರೋಗ-ಬಾಧೆಗಳಿಂದ ಹೈರಾಣಾಗಿರುವ ಮಲೆನಾಡಿನ ಅಡಕೆಗೀಗ ಮಹಾರಾಷ್ಟ್ರ ಅಧಿಕಾರಿಗಳ ಈ ಕಿರುಕುಳ ಹೊಸ ಸಂಕಷ್ಟವನ್ನು ತಂದೊಡ್ಡಿದೆ. ಈ ಸಂಕಷ್ಟ ವರ್ತಕರಷ್ಟೇ ಅಲ್ಲ, ಬೆಳೆಗಾರರೂ ಆತಂಕಪಡುವಂತೆ ಮಾಡಿದೆ. ಮಹಾರಾಷ್ಟ್ರದ ಅಧಿಕಾರಿಗಳ ಕೆಲಸದಿಂದ ಅಡಕೆ ಖರೀದಿಯೇ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ ಎನ್ನುತ್ತಾರೆ ವರ್ತಕರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಸಿಜೆಪಿ ಪ್ರತಿಭಟನೆ ಮತ್ತು ಅವಕಾಶವಾದಿ ರಾಜಕಾರಣ
ಅತಿವೃಷ್ಟಿ-ಅನಾವೃಷ್ಟಿ ಅಧ್ಯಯನಕ್ಕೆ ಬಿಜೆಪಿ 6 ತಂಡ