ಕನ್ನಡಪ್ರಭ ವಾರ್ತೆ, ಶಿಕಾರಿಪುರ
ಹಲವು ವರ್ಷಗಳ ಹಿಂದೆ ಡಿಸಿಸಿ ಬ್ಯಾಂಕ್ ಹರಾಜಿನಲ್ಲಿ ಪಡೆದ ಸ್ವತ್ತು ಇದುವರೆಗೂ ತನಗೆ ಹಸ್ತಾಂತರಿಸದ ಹಿನ್ನೆಲೆ ಸಾಲ ಸಮಸ್ಯೆಗೆ ಸಿಲುಕಿದ ವ್ಯಕ್ತಿಯೋರ್ವ ಪಟ್ಟಣದ ಬ್ಯಾಂಕ್ ಎದುರು ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ ಘಟನೆ ಬುಧವಾರ ನಡೆಯಿತು.ಎಸ್.ಪಿ.ಸಂತೋಷಕುಮಾರ್ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಪೆಟ್ರೋಲ್ ಸುರಿದುಕೊಂಡು ಬ್ಯಾಂಕ್ ಬಾಗಿಲಿನಲ್ಲಿಯೇ ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದರು. ಈ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರು ಆತ್ಮಹತ್ಯೆ ಯತ್ನ ವಿಫಲಗೊಳಿಸಿದರು.
ಸಂತೋಷಕುಮಾರ್ 2017ರಲ್ಲಿ ಡಿಸಿಸಿ ಬ್ಯಾಂಕ್ ನಡೆಸಿದ ಹರಾಜಿನಲ್ಲಿ ಚನ್ನಕೇಶವ ನಗರದ ಸುಸ್ತಿದಾರರೊಬ್ಬರಿಗೆ ಸೇರಿದ 30/50 ಅಳತೆಯಲ್ಲಿನ ಮೂರು ಅಂತಸ್ಥಿನ ಕಟ್ಟಡ, 4 ಗುಂಟೆ ಅಳತೆಯ ನಿವೇಶನ ಸ್ವತ್ತನ್ನು ₹76 ಲಕ್ಷಕ್ಕೆ ಯಶಸ್ವಿ ಬಿಡ್ಡುದಾರರಾಗಿ ಹರಾಜು ಪಡೆದಿದ್ದರು. 15 ದಿನಗಳಲ್ಲಿ ಬಿಡ್‌ನ ಪೂರ್ಣ ಮೊತ್ತ ಬ್ಯಾಂಕ್‌ಗೆ ಪಾವತಿಸಿದರು. ಹರಾಜಿನ ನಂತರ ಸ್ವತ್ತು ಅಳತೆ ಮಾಡುವಾಗ ಮೂರು ಅಂತಸ್ಥಿನ ಕಟ್ಟಡದ ಕೇವಲ 5 ಅಡಿ ಮಾತ್ರ ಅಳತೆ ವ್ಯಾಪ್ತಿಗೆ ಬರುತ್ತದೆ ಎನ್ನುವುದು ಗೋಚರವಾಯಿತು. ಅಲ್ಲಿಂದ ಇಲ್ಲಿಯವರೆಗೂ ನನಗೆ 4 ಗುಂಟೆ ನಿವೇಶನ ಮಾತ್ರ ನೀಡಿದ್ದು, ಕಟ್ಟಡ ಈವರೆಗೂ ಹಸ್ತಾಂತರಿಸಿಲ್ಲ ಎಂದು ಸಂತೋಷ್ ತೀವ್ರವಾಗಿ ನೊಂದಿದ್ದರು.ಹರಾಜು ವಿಷಯದಲ್ಲಿನ ಗೊಂದಲ ಸರಿಪಡಿಸುವುದಕ್ಕಾಗಿ ಬ್ಯಾಂಕ್ ಕೋರ್ಟ್ ಮೂಲಕ ನ್ಯಾಯ ಒದಗಿಸುವ ಭರವಸೆ ನೀಡಿ, ಹೈಕೋರ್ಟ್ ವಕೀಲ ದಯಾನಂದ ಪಾಟೀಲ್‌ಗೆ ₹25 ಸಾವಿರ ಶಿವಮೊಗ್ಗದ ಬಸಪ್ಪಗೌಡ ವಕೀಲರಿಗೆ ನೀಡುವುದಕ್ಕೆ ₹15 ಸಾವಿರ ನೀಡಬೇಕು ಎಂದು ಹೇಳಿ, ನನ್ನಿಂದ ಹಣ ಪಡೆಯಲಾಗಿದೆ. ಸುಸ್ತಿದಾರರ ಸಾಲಕ್ಕಿಂತಲೂ ₹40 ಲಕ್ಷ ಹೆಚ್ಚು ಹಣ ಬ್ಯಾಂಕ್‌ಗೆ ಜಮೆ ಆಗಿತ್ತು ಎಂದರು.
ವಿವಾದ ಪರಿಹಾರ ಆಗುವವರೆಗೂ ಹೆಚ್ಚುವರಿ ಹಣ ಸ್ವತ್ತಿನ ಮಾಲೀಕರಿಗೆ ನೀಡಬೇಡಿ ಎಂದು ಮನವಿ ಮಾಡಿದ್ದರೂ, ಅವರೊಂದಿಗೆ ಬ್ಯಾಂಕ್ ಸಿಬ್ಬಂದಿ ಶಾಮೀಲಾಗಿ ಹಣವನ್ನೂ ವಾಪಸ್ ನೀಡಿದ್ದಾರೆ. ಹರಾಜಿನಲ್ಲಿ ಪಡೆದ ಸ್ವತ್ತು ಈವರೆಗೂ ನೀಡಿಲ್ಲ. ಹಣವೂ ಇಲ್ಲದಾಗಿದೆ. ಹರಾಜಿಗೆ ಪಡೆದ ಸಾಲ ಇದೀಗ ಶೂಲವಾಗಿ ಪರಿಣಮಿಸಿದ್ದು, ಸಾಯುವುದೊಂದೇ ಮಾರ್ಗ ಎನ್ನುವಂತಾಗಿದೆ ಎಂದು ಅಳಲು ತೋಡಿಕೊಂಡರು.- - - ಕೋಟ್ ನಕಲಿ ದಾಖಲೆ ಅಡವಿಟ್ಟುಕೊಂಡು ಸುಸ್ತಿದಾರರಿಗೆ ಸಾಲ ನೀಡಲಾಗಿದೆ. ಹರಾಜಿನ ನಂತರ ದಾಖಲೆಯಲ್ಲಿ ಮಾತ್ರ ಸ್ವತ್ತು ನನಗೆ ಬಂದಿದೆ. ಪತ್ರಿಕೆ, ಕರಪತ್ರದಲ್ಲಿ ನಮೂದಿಸಿರುವ ಕಟ್ಟಡ ನನ್ನ ಸುಪರ್ದಿಗೆ ನೀಡಬೇಕಿರುವುದು ಬ್ಯಾಂಕ್ ಜವಾಬ್ದಾರಿ. ಆದರೆ ಏಳು ವರ್ಷಗಳ ನಂತರ ಸ್ವತ್ತಿಗಾಗಿ ಕೋರ್ಟ್‌ಗೆ ಹೋಗಿ ಎಂದು ಹೇಳಲಾಗುತ್ತಿದೆ. ಡಿಸಿಸಿ ಬ್ಯಾಂಕಿನಲ್ಲಿ ಅಂತಹ ಇನ್ನೆಷ್ಟು ಪ್ರಕರಣ ಇರಬಹುದು ಎಂದು ಸರಕಾರ ತನಿಖೆ ನಡೆಸಬೇಕು
- ಎಸ್.ಪಿ.ಸಂತೋಷ್ ಶಿಕಾರಿಪುರ.ಸಾಲ ಸುಸ್ತಿಯಾಗಿ ಪ್ರಕರಣ ಕೋರ್ಟ್‌ಗೆ ಹೋದ ನಂತರ, ಸದರಿ ಕಡತ ಶಿವಮೊಗ್ಗ ಮುಖ್ಯ ಶಾಖೆಗೆ ಕಳುಹಿಸಲಾಗುತ್ತದೆ. ಘಟನೆ ಕುರಿತು ಶಿವಮೊಗ್ಗ ಮುಖ್ಯ ಕಚೇರಿ ಗಮನಕ್ಕೆ ತರಲಾಗಿದೆ. ಹೊಸದಾಗಿ ಮ್ಯಾನೇಜರ್ ಆಗಿರುವ ತಮಗೆ ಈ ಕುರಿತು ಯಾವುದೇ ಮಾಹಿತಿ ಇಲ್ಲ. ಮುಖ್ಯ ಕಚೇರಿಯಿಂದಲೂ ಯಾವುದೇ ಸ್ಪಷ್ಟ ನಿರ್ದೇಶನ ಸಿಕ್ಕಿಲ್ಲ
- ಶಿವಮೂರ್ತಿ, ಮ್ಯಾನೇಜರ್, ಡಿಸಿಸಿ ಬ್ಯಾಂಕ್, ಶಿಕಾರಿಪುರ ಶಾಖೆ.- - - -31ಕೆಎಸ್.ಕೆಪಿ1:
ಶಿಕಾರಿಪುರದ ಡಿಸಿಸಿ ಬ್ಯಾಂಕ್ ಎದುರು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ನೆಲದ ಮೇಲೆ ಕುಳಿತು ಬ್ಯಾಂಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.