ಕನ್ನಡಪ್ರಭ ವಾರ್ತೆ ರಾಮನಗರಬಿಡದಿ ಟೌನ್ ಶಿಪ್ ಯೋಜನೆಯ ಭೂ ದರ ನಿಗದಿ ಸಭೆಯಲ್ಲಿ ಪಾಲ್ಗೊಂಡು ರೈತರನ್ನು ಏಜೆಂಟ್‌ಗಳೆಂದು ಕರೆದು ಅಪಮಾನ ಮಾಡಿರುವ ಮಾಜಿ ಶಾಸಕ ಎ.ಮಂಜುನಾಥ್ ಕೂಡಲೇ ಕ್ಷಮೆಯಾಚನೆ ಮಾಡಬೇಕು. ಇಲ್ಲದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಹೊಸೂರು ರಾಜಣ್ಣ ಎಚ್ಚರಿಕೆ ನೀಡಿದರು.ಬಿಡದಿಯ ಹೊಸೂರು ಬಳಿಯ ಮದ್ದೂರಮ್ಮ ದೇವಾಲಯದ ಆವರಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಡದಿ ಟೌನ್‌ಶಿಪ್ ಯೋಜನೆ ಕುರಿತು ರೈತರಲ್ಲಿ ಪರ ಮತ್ತು ವಿರೋಧ ಇರುವವರು ಇದ್ದಾರೆ. ಯೋಜನೆ ಪರವಾಗಿರುವ ಭೂ ಮಾಲೀಕರನ್ನು ಏಜೆಂಟ್‌ಗಳೆಂದು ಹೀಯಾಳಿಸುವ ಮೂಲಕ ಮಂಜುನಾಥ್ ಅವರು ರೈತರಿಗೆ ಅಪಮಾನ ಮಾಡಿದ್ದಾರೆ ಎಂದು ಟೀಕಿಸಿದರು.ಈ ಯೋಜನೆಗಾಗಿ ಭೂ ಸ್ವಾಧೀನ ಪ್ರಕ್ರಿಯೆ ಆರಂಭಿಸುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಭೂ ದರ ನಿಗದಿ ಸಂಬಂಧ ರೈತರ ಕರೆದಿದ್ದರು. ಆ ಸಭೆಯಲ್ಲಿ ನಾವುಗಳು ಸೇರಿದಂತೆ 150ಕ್ಕೂ ಹೆಚ್ಚು ರೈತರು ಭಾಗಿದ್ದರು. ಯೋಜನೆ ವಿರುದ್ಧವಾಗಿರುವ ಸುಮಾರು 25 ರೈತರು ಸಭೆಯಿಂದ ದೂರ ಉಳಿದಿದ್ದರು.ಭೂ ದರ ನಿಗದಿ ಸಭೆಯಲ್ಲಿ ನಾವುಗಳು ಸರ್ಕಾರ ನಿಗದಿ ಪಡಿಸಿರುವ ದರವನ್ನು ಒಪ್ಪಿಕೊಳ್ಳಲಿಲ್ಲ. ಎಲ್ಲ ರೈತರಿಗೂ ಅನುಕೂಲವಾಗುವಂತಹ ದರ ನಿಗದಿ ಪಡಿಸುವ ಜೊತೆಗೆ ಸವಲತ್ತುಗಳನ್ನು ಒದಗಿಸುವಂತೆ ಮನವಿ ಮಾಡಿ ಬಂದಿದ್ದೇವೆ. ಇದಕ್ಕೆ ಜಿಲ್ಲಾಧಿಕಾರಿಗಳು ದರ ನಿಗದಿ ಪಡಿಸಲು ವಾರದ ಗಡುವು ಪಡೆದುಕೊಂಡಿದ್ದಾರೆ ಎಂದು ಹೇಳಿದರು.ಸಭೆಯಲ್ಲಿ ಪಾಲ್ಗೊಂಡು ರೈತರನ್ನು ಮಾಜಿ ಶಾಸಕ ಮಂಜುನಾಥ್ ಅವರು ಏಜೆಂಟ್‌ಗಳೆಂದು ಕರೆದಿದ್ದಾರೆ. ಯಾವ ಉದ್ದೇಶದಿಂದ ಆ ಪದ ಬಳಕೆ ಮಾಡಿದ್ದಾರೆ ಎಂಬುದನ್ನು ಸಾಬೀತು ಪಡಿಸಲಿ. ನಾವುಗಳು ಯೋಜನೆ ವಿರುದ್ಧ ಇರುವ ರೈತರನ್ನು ಏಜೆಂಟ್ ಗಳೆಂದು ಕರೆಯಲು ಸಾಧ್ಯವೇ ಎಂದು ಪ್ರಶ್ನಿಸಿದರು.ಎಚ್‌ಡಿಕೆ ರೈತರ ಸಂಕಷ್ಟಕ್ಕೆ ಸ್ಪಂದಿಸಲಿಲ್ಲ ಏಕೆ ?:ಕುಮಾರಸ್ವಾಮಿರವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಿಡದಿ ಟೌನ್ ಶಿಪ್ ಯೋಜನೆ ರೂಪಿಸಿದರು. ಅಲ್ಲದೆ, ಆ ಭಾಗದ ಸುತ್ತಲ ಪ್ರದೇಶವನ್ನು ಕೆಂಪು ವಲಯವನ್ನಾಗಿ ಘೋಷಣೆ ಮಾಡಿದ್ದರು. ಯೋಜನೆ ವಿರುದ್ಧ ಬೃಹತ್ ಹೋರಾಟಗಳು ನಡೆದವು. ಯೋಜನೆ ಪರವಾಗಿರುವ ರೈತರು ಮೌನವಾಗಿದ್ದರು. ಸುಮಾರು 19 ವರ್ಷಗಳಿಂದ ಭೂಮಿಯನ್ನೇ ಅವಂಲಬಿಸಿರುವ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಎರಡು ಬಾರಿ ಮುಖ್ಯಮಂತ್ರಿ ಪದವಿ ಅಲಂಕರಿಸಿದ ಕುಮಾರಸ್ವಾಮಿರವರು ರೈತರ ಸಮಸ್ಯೆ ಬಗೆಹರಿಸುವ ಕೆಲಸ ಮಾಡಲಿಲ್ಲ. ಅಲ್ಲದೆ, ಮಂಜುನಾಥ್ ರವರು ಶಾಸಕರಾಗಿದ್ದಾಗ ಕೆಂಪು ವಲಯದಲ್ಲಿದ್ದ ಪ್ರಭಾವಿ ವ್ಯಕ್ತಿಯೊಬ್ಬರ ಭೂಮಿಯನ್ನು ಕೆಐಎಡಿಬಿಗೆ ಕೊಡಿಸಿದರು. ಅದೇ ರೈತರ ಸಂಕಷ್ಟಕ್ಕೆ ಏಕೆ ಸ್ಪಂದಿಸಲಿಲ್ಲ ಎಂದು ಪ್ರಶ್ನೆ ಮಾಡಿದರು.ಕುಮಾರಸ್ವಾಮಿರವರು ಬಿಡದಿ ಟೌನ್ ಶಿಪ್ ಯೋಜನೆ ಮಾಡಿದರೆ ಅಭಿವೃದ್ಧಿ ಕಾರ್ಯ, ಅದೇ ಬೇರೆ ಪಕ್ಷದವರು ಮಾಡಿದರೆ ರೈತ ವಿರೋಧ ಕಾರ್ಯ ಎನ್ನುವ ಮನೋಭಾವನೆ ಬಿಡಬೇಕು. ರೈತರೊಂದಿಗೆ ಧರಣಿಯಲ್ಲಿ ಕುಳಿತಾಕ್ಷಣ ನೀವು ಹೀರೋ ಆಗುವುದಿಲ್ಲ. ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿರುವ ಮಂಜುನಾಥ್ ರವರ ಬಗ್ಗೆ ರೈತರು ಎಚ್ಚರಿಕೆಯಿಂದ ಇರಬೇಕು ಎಂದು ರಾಜಣ್ಣ ಹೇಳಿದರು.ರೈತ ಮುಖಂಡ ಕುಮಾರ್ ಮಾತನಾಡಿ, ಎ.ಮಂಜುನಾಥ್ ರವರು ಶಾಸಕರಾಗಿದ್ದ ಅವಧಿಯಲ್ಲಿ ಒಂದು ದಿನವೂ ಟೌನ್ ಶಿಪ್ ಯೋಜನೆ ಬಗ್ಗೆ ಚರ್ಚೆಯೇ ಮಾಡಿಲ್ಲ. ಭೂಮಿಯನ್ನು ಕೆಂಪು ವಲಯದಿಂದ ಮುಕ್ತಗೊಳಿಸಲು ಸಣ್ಣ ಪ್ರಯತ್ನವನ್ನು ಮಾಡಲಿಲ್ಲ. ಈ ಬಗ್ಗೆ ಕೇಳಿದಾಗಲೆಲ್ಲ ಉಡಾಫೆ ಮಾತುಗಳನ್ನಾಡುತ್ತಿದ್ದರು ಎಂದು ಟೀಕಿಸಿದರು.ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿರುವ ನೀವು ಏಜೆಂಟ್ಟೆ ಹೊರತು ಭೂ ಮಾಲೀಕರಾದ ರೈತರಲ್ಲ. ಒಬ್ಬ ಏಜೆಂಟ್ ನನ್ನು ಶಾಸಕರನ್ನಾಗಿ ಮಾಡಿದ್ದೆ ರೈತರ ತಪ್ಪು. ಯೋಜನೆ ವಿರುದ್ಧ ರೈತರು ನಡೆಸುತ್ತಿರುವ ಧರಣಿಯಲ್ಲಿ ಎ.ಮಂಜುನಾಥ್ ಭಾಗಿಯಾಗಿರುವುದು ಗಿಮಿಕ್ ಅಲ್ಲದೆ ಮತ್ತೇನು ಅಲ್ಲ ಎಂದು ಕಿಡಿಕಾರಿದರು.ಬೈರಮಂಗಲ ವಿಎಸ್ ಎಸ್ ಎನ್ ಮಾಜಿ ಅಧ್ಯಕ್ಷ ಸಿದ್ದರಾಜು ಮಾತನಾಡಿ, ಕುಮಾರಸ್ವಾಮಿರವರ ಕಾಲದಲ್ಲಿ ನಮ್ಮ ಜಮೀನನ್ನು ರೆಡ್ ಜೋನ್ ಗೆ ಹಾಕಿದರು. ಈಗ ಕಾಂಗ್ರೆಸ್ ಸರ್ಕಾರ ರೆಡ್ ಜೋನ್ ಕ್ಲಿಯರ್ ಮಾಡಿ ನಮ್ಮ ಜಮೀನಿಗೆ ಉತ್ತಮ ದರ ನಿಗದಿ ಮಾಡುತ್ತಿದೆ. ಆದರೆ, ಮಾಜಿ ಶಾಸಕ ಮಂಜುನಾಥ್ ರವರು ಯೋಜನೆ ಪರವಾಗಿರುವ ರೈತರನ್ನು ಏಜೆಂಟ್ ರೆಂದು ಹೇಳುವುದು ಖಂಡನೀಯ.ಕೂಡಲೇ ಎ.ಮಂಜುನಾಥ್ ತಮ್ಮ ಹೇಳಿಕೆ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ವಿಷಕಂಠಯ್ಯ, ರೆಡ್ಡಿ, ಕೃಷ್ಣಮೂರ್ತಿ, ಶಿವರಾಮು ಮತ್ತಿತರರು ಇದ್ದರು.
15ಕೆಆರ್ ಎಂಎನ್1.ಜೆಪಿಜಿಬಿಡದಿಯ ಹೊಸೂರು ಬಳಿಯ ಮದ್ದೂರಮ್ಮ ದೇವಾಲಯದ ಆವರಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೊಸೂರು ರಾಜಣ್ಣ ಮಾತನಾಡಿದರು.