ಓರಿಯಂಟೇಶನ್ ತರಬೇತಿ ಕಾರ್ಯಾಗಾರದಲ್ಲಿ ಜಿಲ್ಲಾ ನ್ಯಾಯಾಧೀಶ ರೋಣ ವಾಸುದೇವ್ ಅಭಿಮತಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿನ ಮಧ್ಯಸ್ಥಿಕೆ ಕೇಂದ್ರದಲ್ಲಿ ಗುರುವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಮಕ್ಕಳ ಸ್ನೇಹಿ ಕಾನೂನು ಸೇವೆಗಳ ಯೋಜನೆ-2024ರ ಅಡಿಯಲ್ಲಿ ರಚಿಸಲಾದ ಮಕ್ಕಳ ಕಾನೂನು ಸೇವೆಗಳ ಘಟಕದ ಸದಸ್ಯರಿಗಾಗಿ ಹಮ್ಮಿಕೊಂಡಿದ್ದ ಓರಿಯಂಟೇಷನ್ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಬಾಲ್ಯ ವಿವಾಹಗಳು ಚಿತ್ರದುರ್ಗ ಜಿಲ್ಲೆಯಲ್ಲಿ ಸಾಮಾಜಿಕ ಪಿಡುಗಾಗಿ ಪರಿಣಮಿಸಿವೆ. ಎಷ್ಟೇ ಜಾಗೃತಿ ಮೂಡಿಸಿದರೂ ಗ್ರಾಮೀಣ ಪ್ರದೇಶದಲ್ಲಿ ವಿವಾಹಗಳು ಆಗುತ್ತಲೇ ಇವೆ. ಇಂತಹ ಘಟನೆಗಳು ಜರುಗದಂತೆ ಮತ್ತಷ್ಟು ಕಟ್ಟೆಚ್ಚರ ವಹಿಸಬೇಕು. ಇದರೊಟ್ಟಿಗೆ ಪೋಕ್ಸೋ ಪ್ರಕರಣಗಳನ್ನು ತಡೆಗಟ್ಟಲು ಹಾಗೂ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನಗಳ ಮುಂದುವರಿಸೋಣ ಎಂದರು.ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಮಾತನಾಡಿ, ಮಕ್ಕಳಿಗಾಗಿ ಮಕ್ಕಳ ಸ್ನೇಹಿ ಕಾನೂನು ಸೇವೆಗಳ ಅಡಿಯಲ್ಲಿ ಮಕ್ಕಳ ಕಾನೂನು ಸೇವೆಗಳ ಘಟಕಕ್ಕೆ ಸದಸ್ಯರನ್ನು ನೇಮಕ ಮಾಡಲಾಗಿದೆ. ಮಕ್ಕಳ ಕಲ್ಯಾಣ ಸಮಿತಿ, ಸಖಿ, ಪ್ಯಾನಲ್ ವಕೀಲರು, ಅರೆಕಾಲಿಕ ಸ್ವಯಂ ಸೇವಕರು ಸೇರಿದಂತೆ ಕ್ಷೇತ್ರಮಟ್ಟದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಕಾರ್ಯನಿರ್ವಹಿಸುವವರಿಗೆ ಕೆಲವು ಜವಾಬ್ದಾರಿಗಳನ್ನು ನೀಡುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಯಾವೊಂದು ಮಗುವೂ ಸಹ ತನ್ನ ಹಕ್ಕಿನಿಂದ ವಂಚಿತವಾಗಬಾರದು ಎಂದರು.
ನಿವೃತ್ತ ಜಿಲ್ಲಾ ನ್ಯಾಯಾಧೀಶ ನಾಡಿಗ ಜಯಸ್ವಾಮಿ ಉಪನ್ಯಾಸ ನೀಡಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಉಚಿತವಾಗಿ ಅರ್ಹರಿಗೆ ಕಾನೂನಿನ ನೆರವು ನೀಡಲಾಗುತ್ತಿದೆ. ಸುಮಾರು 7 ರಿಂದ 8 ಕಾನೂನುಗಳು ಮಕ್ಕಳ ಪರ ಇದ್ದು, ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ತಿಳಿಯುವ ರೀತಿಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅರಿವು ಮೂಡಿಸಬೇಕು ಎಂದು ಹೇಳಿದರು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸವಿತಾ ಸೇರಿದಂತೆ ಮಕ್ಕಳ ಕಾನೂನು ಸೇವೆಗಳ ಘಟಕದ ಸದಸ್ಯರು ಇದ್ದರು.