ಹುಬ್ಬಳ್ಳಿ:
ಹತ್ಯೆ ಆರೋಪಿಯನ್ನು ಎನ್‌ಕೌಂಟರ್ ಮಾಡಬೇಕು, ನೇಹಾ ಹಾಗೂ ಅಂಜಲಿ ಹತ್ಯೆ ಹಂತಕರಿಗೆ ಏಕಕಾಲದಲ್ಲಿಯೇ ಗಲ್ಲು ಶಿಕ್ಷೆ ವಿಧಿಸಬೇಕು, ಮಹಿಳೆಯರ ರಕ್ಷಣೆಗೆ ನಮ್ಮ ಪ್ರಾಣ ತ್ಯಾಗಕ್ಕೂ ಸಿದ್ಧ ಎಂದು ಮಠಾಧೀಶರು ಘೋಷಿಸಿದರು.
ನಗರದ ವೀರಾಪುರ ಓಣಿಯಿಂದ ಆರಂಭವಾದ ಬೃಹತ್ ಪ್ರತಿಭಟನಾ ಮೆರವಣಿಗೆ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ವರೆಗೆ ಆಗಮಿಸಿ ರಸ್ತೆ ತಡೆ, ಮಾನವ ಸರಪಳಿ ನಿರ್ಮಿಸಿ, ಟೈಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು.ನಂತರ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಶಾಂತಭೀಷ್ಮ ಚೌಡಯ್ಯ ಶ್ರೀ, ದಾರ್ಶನಿಕರು ನಡೆದಾಡಿದ ನೆಲದಲ್ಲಿ ಇಂತಹ ದುರ್ಘಟನೆ ನಡೆದಿರುವುದು ಖಂಡನಾರ್ಹ. ಸರ್ಕಾರಗಳು ಇಂತಹ ಘಟನೆಗಳು ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಅಂಜಲಿ ಹತ್ಯೆಗೆ ಪೊಲೀಸರ ನಿರ್ಲಕ್ಷ್ಯವೇ ಪ್ರಮುಖ ಕಾರಣವಾಗಿದೆ. ಬಡವರು ತೊಂದರೆ ಎಂದು ಬಂದಾಗ ಪೊಲೀಸರು ನ್ಯಾಯ ಕೊಡಿಸಬೇಕೇ ಹೊರತು ನಿರ್ಲಕ್ಷ್ಯ ಮಾಡಬಾರದು. ಕಾನೂನಿನ ಭಯ ಇಲ್ಲದಿರುವುದಕ್ಕೆ ಇಂತಹ ಘಟನೆಗಳು ಮರುಕಳಿಸುತ್ತಿವೆ. ಮನೆಗೆ ನುಗ್ಗಿ ಅಂಜಲಿ ಹತ್ಯೆ ಮಾಡಿದ ಆರೋಪಿಗೆ ಸರ್ಕಾರ ಎನ್‌ಕೌಂಟರ್ ಮಾಡಬೇಕು. ಬಡ ಕುಟುಂಬದವರಿಗೆ ಸರ್ಕಾರ ಆರ್ಥಿಕ ಸಹಾಯ, ಸಹಕಾರ ನೀಡುವ ಮೂಲಕ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು. ಆರೋಪಿಗೆ ಶಿಕ್ಷೆಯಾಗುವ ವರೆಗೂ ಹಾಗೂ ಅಂಜಲಿ ಕುಟುಂಬಕ್ಕೆ ನ್ಯಾಯ ದೊರೆಯುವ ವರೆಗೂ ಈ ಹೋರಾಟ ನಿರಂತರವಾಗಿ ನಡೆಯಲಿದೆ ಎಂದರು.
ಧಾರವಾಡ ಮನಸೂರು ಮಠದ ಬಸವರಾಜ ದೇವರು ಮಾತನಾಡಿ, ಆರೋಪಿಯನ್ನು ಎನ್‌ಕೌಂಟರ್ ಮಾಡಬೇಕು. ಅವನೊಬ್ಬ ಪಾಪಿಯಾಗಿದ್ದು, ಕಾನೂನಿನ ನೆರವು ಬೇಡ. ಆತನನ್ನು ಶಿಕ್ಷಿಸಬೇಕು. ಆಳುವ ಸರ್ಕಾರಗಳು ಕಣ್ಣುಮುಚ್ಚಿ ಕುಳಿತಿವೆ. ಇಂದಿನ ಅವ್ಯವಸ್ಥೆಯ ವಿರುದ್ಧ ಮಠಾಧೀಶರು ಬೀದಿಗಿಳಿದು ಹೋರಾಡುತ್ತಿದ್ದಾರೆ ಎಂದರೆ ರಾಜ್ಯದ ಪರಿಸ್ಥಿತಿ ಎಲ್ಲಿಗೆ ಬಂದಿದೆ ಎಂಬುದು ಅರ್ಥವಾಗುತ್ತದೆ. ಮಹಿಳೆಯರಿಗೆ ಯಾವುದೇ ತೊಂದರೆಯಾದರೆ ನಾವು ಸಹಿಸುವುದಿಲ್ಲ. ನಮ್ಮ ಪ್ರಾಣತ್ಯಾಗಕ್ಕೂ ಸಿದ್ಧರಿದ್ದೇವೆ ಎಂದರು.
ಕುಂದಗೋಳದ ಬಸವಣ್ಣಜ್ಜನವರು, ಜಮಖಂಡಿಯ ಮಹಾಂತೇಶ್ವರ ಶ್ರೀ, ಕುಂದಗೋಳದ ಶಿವಾನಂದ ಶ್ರೀ, ಕುಂದಗೋಳದ ಅಭಿನವ ಬಸವಣ್ಣ ಅಜ್ಜನವರು, ಧಾರವಾಡದ ರೇವಣಸಿದ್ದೇಶ್ವರ ಮಠದ ಬಸವ ದೇವರು, ಸವದತ್ತಿಯ ಮಹಾಂತ ಶ್ರೀ, ಮಹಾದಾಯಿ ಹೋರಾಟಗಾರ, ರೈತ ಮುಖಂಡ ವೀರೇಶ ಸೊಬದರಮಠ ಸೇರಿದಂತೆ ಹಲವು ಮಠಾಧೀಶರು, ಅಂಜಲಿ ಅಜ್ಜಿ ಗಂಗಮ್ಮ, ಸಹೋದರಿಯರಾದ ಸಂಜನಾ, ಯಶೋದಾ, ಪೂಜಾ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು. ಕುಸಿದು ಬಿದ್ದ ಅಂಜಲಿ ಸಹೋದರಿ
ಅಂಜಲಿ ಹತ್ಯೆ ಪ್ರಕರಣ ಖಂಡಿಸಿ ಮಠಾಧೀಶರ ನೇತೃತ್ವದಲ್ಲಿ ಪ್ರತಿಭಟನೆ ವೇಳೆ ಮೃತ ನೇಹಾ ತಂದೆ, ಪಾಲಿಕೆ ಸದಸ್ಯ ನಿರಂಜನ ಹಿರೇಮಠ, ಚೆನ್ನಮ್ಮ ವೃತ್ತದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ವಾಹನಗಳನ್ನು ನಿಲ್ಲಿಸದೇ ಪೊಲೀಸರು ಬಿಡುತ್ತಿರುವುದನ್ನು ಖಂಡಿಸಿ ನೆಲದ ಮೇಲೆ ಮಲಗಿ ಉರುಳಾಡಿದರು. ಈ ಸಂದರ್ಭದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ನಂತರ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.