ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜಧಾನಿಯಲ್ಲಿ ಮಂಗಳವಾರ ಸಂಜೆ ಗುಡುಗು, ಮಿಂಚು ಸಹಿತ ಸುರಿದ ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಭಾರಿ ಮಳೆಗೆ 57 ಮರಗಳು ಧರೆಗೆ ಉರುಳಿದ್ದು, 77 ಮರಗಳ ರೆಂಬೆ ಕೊಂಬೆಗಳು ಮುರಿದು ಬಿದ್ದಿವೆ ಎಂದು ಜಿಬಿಎ ತಿಳಿಸಿದೆ.ಸಂಜೆ ಸುರಿದ ಈ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡು ವಾಹನ ಸವಾರರು ಮಧ್ಯದಲ್ಲೇ ಸಿಲುಕಿದರು. ನಗರದ ಉತ್ತರ, ಈಶಾನ್ಯ ಮತ್ತು ಕೇಂದ್ರ ಭಾಗಗಳಲ್ಲಿ ಮಳೆ ಅಬ್ಬರ ಜೋರಾಗಿತ್ತು. ಯಲಹಂಕ, ನಾಗಸಂದ್ರ, ಹೆಬ್ಬಾಳ, ಮಜೆಸ್ಟಿಕ್, ಮಲ್ಲೇಶ್ವರ ಮತ್ತು ವಸಂತನಗರದಲ್ಲಿ ಭಾರೀ ಮಳೆಯಾಗಿದೆ. ಮಳೆ ನೀರು ನಿಂತಿದ್ದ ಕಾರಣ ಕೆ.ಆರ್.ಸರ್ಕಲ್ ಅಂಡರ್‌ಪಾಸ್ ಅನ್ನು ಸಂಚಾರ ಪೊಲೀಸರು ಬಂದ್ ಮಾಡಿದ್ದರು.
ಹೊರವರ್ತುಲ ರಸ್ತೆ, ಸಿಲ್ಕ್ ಬೋರ್ಡ್, ವೈಟ್‌ಫೀಲ್ಡ್ ಮತ್ತು ಎಲೆಕ್ಟ್ರಾನಿಕ್ ಸಿಟಿ ರಸ್ತೆಗಳಲ್ಲಿ ವಾಹನಗಳು ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್‌ನಲ್ಲಿ ಸಿಲುಕಿದ್ದವು. ನಗರದ ಅನೇಕ ಕಡೆ ಮರಗಳು ಮತ್ತು ಕೊಂಬೆಗಳು ಧರೆಗುರುಳಿದ್ದರಿಂದ ಸಂಚಾರಕ್ಕೆ ಮತ್ತಷ್ಟು ಅಡ್ಡಿಯಾಯಿತು.ಬಳ್ಳಾರಿ ರಸ್ತೆಯಲ್ಲಿ ಹೆಬ್ಬಾಳ ಅಪ್ ರ್‍ಯಾಂಪ್‌ನಿಂದ ನಗರದ ಕಡೆಗೆ, ಚಿಕ್ಕಪೇಟೆ ವೃತ್ತದಿಂದ ಸುಲ್ತಾನಪೇಟೆ, ಪೈಪ್ ಗಾರ್ಡನ್‌ನಿಂದ ಕುಂದಲಹಳ್ಳಿ, ಯಶವಂತಪುರದಿಂದ ಗೋರಗುಂಟೆಪಾಳ್ಯ, ವಸಂತ ನಗರ ಅಂಡರ್‌ಪಾಸ್, ವರ್ತೂರು ಕೋಡಿಯಿಂದ ವೈಟ್‌ಫೀಲ್ಡ್, ಬಿಜಿಎಸ್ ಫ್ಲೈಓವರ್‌ನಿಂದ ಮಾರ್ಕೆಟ್ ವೃತ್ತ, ಕೋಗಿಲು ಕ್ರಾಸ್‌ನಿಂದ ನಗರದ ಕಡೆ, ಬಿನ್ನಿ ಮಿಲ್, ಜಯಮಹಲ್ ಟಿವಿ ಟವರ್ ಮುಂತಾದೆಡೆ ರಸ್ತೆಗಳು ಜಲಾವೃತಗೊಂಡು ವಾಹನಗಳ ಸಂಚಾರ ನಿಧಾನವಾಗಿತ್ತು.
ಮೇ 30ರವರೆಗೆ ಮಳೆ
ನಗರದ ವಿವಿಧೆಡೆ ಮಂಗಳವಾರ ಸಂಜೆ ಸರಾಸರಿ 20ರಿಂದ 40 ಮಿ.ಮೀ ಮಳೆಯಾಗಿದೆ. ಮೇ 30ರ ವರೆಗೆ ನಗರದಲ್ಲಿ ಗುಡುಗು ಮಿಂಚು ಹಾಗೂ ಜೋರು ಗಾಳಿ ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
