ಕೊಪ್ಪಳ ಕಾರ್ಖಾನೆ ವಿರೋಧಿಸಿ ನಾಳೆ ಬೆಂಗಳೂರಲ್ಲಿ ಸರ್ವಪಕ್ಷದ ನಾಯಕರ ಸಭೆ

KannadaprabhaNewsNetwork | Published : Mar 3, 2025 1:48 AM

ಸಾರಾಂಶ

ಕೊಪ್ಪಳ ಬಳಿ ಬಿಎಸ್‌ಪಿಎಲ್ ಕಾರ್ಖಾನೆ ಸ್ಥಾಪಿಸದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರಲು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಅವರ ಗೃಹ ಕಚೇರಿಯಲ್ಲಿ ಮಾ.4 ರಂದು ಬೆಳಗ್ಗೆ 9 ಗಂಟೆಗೆ ಸರ್ವಪಕ್ಷದ ನಾಯಕರ ಸಭೆ ಕರೆಯಲಾಗಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ: ಕೊಪ್ಪಳ ಬಳಿ ಬಿಎಸ್‌ಪಿಎಲ್ ಕಾರ್ಖಾನೆ ಸ್ಥಾಪಿಸದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರಲು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಅವರ ಗೃಹ ಕಚೇರಿಯಲ್ಲಿ ಮಾ.4 ರಂದು ಬೆಳಗ್ಗೆ 9 ಗಂಟೆಗೆ ಸರ್ವಪಕ್ಷದ ನಾಯಕರ ಸಭೆ ಕರೆಯಲಾಗಿದೆ.

ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳು ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಜಿಲ್ಲೆಯ ಜನಪ್ರತಿನಿಧಿಗಳು ಕಾರ್ಖಾನೆ ಅನುಮತಿ ಆದೇಶವನ್ನು ರದ್ದುಮಾಡಿಸಿಕೊಂಡೇ ಕೊಪ್ಪಳಕ್ಕೆ ಬನ್ನಿ ಎಂದು ಹೇಳಿರುವ ಹಿನ್ನೆಲೆಯಲ್ಲಿ ಸರ್ವಪಕ್ಷದ ಹಾಲಿ, ಮಾಜಿ ಶಾಸಕ, ಸಚಿವರ ಸಭೆ ನಡೆಯಲಿದೆ.

ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ಮಾಡಿ, ಆನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿಗೆ ಸರ್ವಪಕ್ಷದ ನಿಯೋಗದೊಂದಿಗೆ ತೆರಳಿ, ಆದೇಶ ರದ್ದು ಮಾಡುವಂತೆ ಪಟ್ಟು ಹಿಡಿಯುವ ಸಾಧ್ಯತೆ ಇದೆ.

ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಕೊಪ್ಪಳ ಜಿಲ್ಲೆಯ ಹಾಲಿ, ಮಾಜಿ ಶಾಸಕರು, ಸಚಿವರಿಗೆ ಸಚಿವರ ಆಪ್ತ ಕಾರ್ಯದರ್ಶಿ ಮಹೇಶ ವಣಕಿ ಅವರು ಖುದ್ದು ಕರೆ ಮಾಡಿದ್ದಾರೆ ಹಾಗೂ ವಾಟ್ಸ್‌ಆ್ಯಪ್‌ ಸಂದೇಶ ರವಾನೆ ಮಾಡಿದ್ದಾರೆ.

ಕೊಪ್ಪಳ ಬಳಿ ಕಾರ್ಖಾನೆ ಬೇಡವೇ ಬೇಡ ಎಂದು ಈಗಾಗಲೇ ಬಹುದೊಡ್ಡ ಕೂಗು ಎದ್ದಿದೆ. ಪಕ್ಷಾತೀತವಾಗಿಯೂ ಜನಪ್ರತಿನಿಧಿಗಳು ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಇದಕ್ಕಿಂತ ಮಿಗಿಲಾಗಿ ಸರ್ವಧರ್ಮದ ಗುರುಗಳು ಸಹ ಹೋರಾಟದಲ್ಲಿ ಪಾಲ್ಗೊಂಡು, ಕೊಪ್ಪಳವನ್ನು ನರಕ ಮಾಡುವುದಕ್ಕೆ ಬಿಡುವುದಿಲ್ಲ. ಸರ್ಕಾರದ ಮನವೊಲಿಸಿ, ಕಾರ್ಖಾನೆ ಸ್ಥಾಪನೆ ಆದೇಶವನ್ನು ಕೈಬಿಡುವಂತೆ ಆಗ್ರಹಿಸಿದ್ದಾರೆ. ಹೀಗಾಗಿ, ಪಕ್ಷಾತೀತವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ಪಟ್ಟು ಹಿಡಿಯುವ ತೀರ್ಮಾನ ಮಾಡುವ ಕುರಿತು ಚರ್ಚೆ ಮಾಡಲಾಗುತ್ತದೆ.

ಯಾರ‍್ಯಾರಿಗೆ ಆಹ್ವಾನ?: ಸಂಸದ ರಾಜಶೇಖರ ಹಿಟ್ನಾಳ, ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ವಿರೋದ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್, ಶಾಸಕರಾದ ರಾಘವೇಂದ್ರ ಹಿಟ್ನಾಳ, ಗಾಲಿ ಜನಾರ್ದನ ರೆಡ್ಡಿ, ಶರಣೇಗೌಡ ಬಯ್ಯಾಪುರ, ಬಸನಗೌಡ ಬಾದರ್ಲಿ, ಹೇಮಲತಾ ನಾಯಕ, ಮಾಜಿ ಸಂಸದರಾದ ಕರಡಿ ಸಂಗಣ್ಣ, ಶಿವರಾಮಗೌಡ, ಮಾಜಿ ಸಚಿವರಾದ ಅಮರೇಗೌಡ ಬಯ್ಯಾಪುರ, ಇಕ್ಬಾಲ್ ಅನ್ಸಾರಿ, ಹಾಲಪ್ಪ ಆಚಾರ್, ಮಲ್ಲಿಕಾರ್ಜುನ ನಾಗಪ್ಪ, ನಾಗಪ್ಪ ಸಾಲೋಣಿ, ಹಸನಸಾಬ ದೋಟಿಹಾಳ, ಬಸವರಾಜ ದಢೇಸ್ಗೂರು, ಪರಣ್ಣ ಮುನವಳ್ಳಿ, ಮಲ್ಲಿಕಾರ್ಜುನ ನಾಗಪ್ಪ, ಕೆ. ಬಸವರಾಜ ಹಿಟ್ನಾಳ, ಶಿವಶರಣಗೌಡ ಪಾಟೀಲ್, ಕರಿಯಣ್ಣ ಸಂಗಟಿ, ಡಾ. ಬಸವರಾಜ ಕ್ಯಾವಟರ, ಸಿ.ವಿ. ಚಂದ್ರಶೇಖರ ಅವರಿಗೆ ಅಧಿಕೃತ ಅಹ್ವಾನ ನೀಡಲಾಗಿದೆ.

ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳ ಆಶಯದಂತೆ ಎಲ್ಲರೂ ಒಗ್ಗೂಡಿ, ಚರ್ಚೆ ಮಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿಗೆ ನಿಯೋಗ ತೆರಳಲಾಗುವುದು ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು. ನಮಗೂ ಕರೆ ಬಂದಿದ್ದು, ನಾವು ಸಹ ಭಾಗವಹಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನವೊಲಿಸಲು ಪಕ್ಷಾತೀತವಾಗಿ ಶ್ರಮಿಸುತ್ತೇವೆ. ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳ ಕಳಕಳಿಯಂತೆ ನಡೆದುಕೊಳ್ಳುತ್ತೇವೆ. ಇಲ್ಲದಿದ್ದರೆ ಕೊಪ್ಪಳ ಉಳಿಯಲ್ಲ ಎಂದು ವಿಪ ಮಾಜಿ ಸದಸ್ಯ ಕರಿಯಣ್ಣ ಸಂಗಟಿ ಹೇಳಿದರು.

ಸ್ವಾಮೀಜಿಗಳು ಈಗಾಗಲೇ ಹೇಳಿರುವಂತೆ ಎಲ್ಲರೂ ಒಗ್ಗೂಡಿ, ಮುಖ್ಯಮಂತ್ರಿಗಳ ಮನವೊಲಿಸಿ, ಕೊಪ್ಪಳದ ಹಿತಕ್ಕಾಗಿ ಕಾರ್ಖಾನೆ ಸ್ಥಾಪನೆ ಕೈಬಿಡುವಂತೆ ಮನವಿ ಮಾಡುತ್ತೇವೆ ಎಂದು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.

Share this article