‘ಶಿವ ಶಿವ ಪರಶಿವ’ ನೃತ್ಯ ನಮನ ಕಾರ್ಯಕ್ರಮ । ನೃತ್ಯ ಪ್ರದರ್ಶನ, ಗೀತ ಗಾಯನ ಆಯೋಜನೆ
ಭಾರತ ದೇಶದಲ್ಲಿ ನಾಟ್ಯ ಕಲೆಗೆ ಅದ್ವಿತೀಯವಾದ ಗೌರವ ಪ್ರಾಪ್ತಿಯಾಗುತ್ತದೆ. ಹಾಗೆಯೇ ಶಾಂತಿ, ಸಹನೆ, ನೆಮ್ಮದಿ ಸಹ ಒಲಿದು ಬರುತ್ತದೆ ಎಂದು ಸಿರ್ಗಾಪುರ ಶ್ರೀ ದತ್ತಕ್ಷೇತ್ರದ ದತ್ತಾರಾಧಕ ಅಶೋಕ್ ಶರ್ಮ ಹೇಳಿದರು.
ನಗರದ ಕಲ್ಕಟ್ಟೆ ಪುಸ್ತಕದ ಮನೆ, ಬಿಲೀವ್ ಫಿಸಿಯೋಥೆರಪಿ ಕ್ಲಿನಿಕ್, ಶ್ರೀ ಕ್ಷೇತ್ರ ಬಿಂಡಿಗ ದೇವೀರಮ್ಮ ವ್ಯವಸ್ಥಾಪನಾ ಸಮಿತಿ ಹಾಗೂ ಮಲ್ಲಿಗೆ ಸುಗಮ ಸಂಗೀತ ಟ್ರಸ್ಟ್ ಆಶ್ರಯದಲ್ಲಿ ನಗರದ ಕುವೆಂಪು ಕಲಾಮಂದಿರದಲ್ಲಿ ನಡೆದ ‘ಶಿವ ಶಿವ ಪರಶಿವ’ ನೃತ್ಯ ನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಸನಾತನ ಧರ್ಮದ ನೆಲೆಯಾಗಿರುವ ಭರತ ಭೂಮಿಯಲ್ಲಿ ಬಹಳ ವಿದ್ಯೆಗಳೂ, ವೈವಿಧ್ಯಮಯ ಕಲೆಗಳೂ ಸಾಕಷ್ಟಿವೆ. ಅಂತಹ ಕಲೆಗಳಲ್ಲಿ ಸನಾತನವಾಗಿ ಶಿವನಿಂದ ಬಂದ ಕಲೆ ಎಂದರೆ ಅದು ನಾಟ್ಯ. ಅದಕ್ಕೆ ಶಿವ ತಾಂಡವ ನೃತ್ಯ ಎನ್ನುತ್ತೇವೆ. ನೃತ್ಯ ಕಲೆಯಲ್ಲಿ ಶಿವನು ಸಾಕ್ಷಾತ್ಕಾರವಾಗಿ ಕಲೆಯನ್ನು ರೂಢಿಸಿಕೊಂಡಿರುವ ಮಕ್ಕಳ ಜೊತೆಗಿದ್ದೇ ಇರುತ್ತಾನೆ. ಭರತನಾಟ್ಯ, ಯಕ್ಷಗಾನ ಕಲೆ, ಜಾನಪದ ಗೀತೆಗಳು ಅನಂತರದಲ್ಲಿ ಬಂದಿವೆ. ಸಂಗೀತವೂ ಹಾಗೆ, ಎಲ್ಲ ಕಷ್ಟಗಳನ್ನು, ನೋವನ್ನು ಮರೆಸುವ ವೈಶಿಷ್ಟ್ಯವಿರುವುದೇ ಸಂಗೀತಕ್ಕೆ. ಇಲ್ಲಿನ ಪ್ರತಿಭಾವಂತರಿಗೆ ಸಂಪೂರ್ಣ ಯಶಸ್ಸು ಸಿಕ್ಕಿ ಅವರ ಕಲೆ ಇಡೀ ರಾಜ್ಯದಲ್ಲಿ, ರಾಷ್ಟ್ರದಲ್ಲಿ ಬೆಳಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ವೃತ್ತಿ ಮಾರ್ಗದರ್ಶಕ ಬೆಂಗಳೂರಿನ ಮೊಹಮ್ಮದ್ ಜಿಯಾ ಉಲ್ಲಾಖಾನ್ ಹಾಗೂ ಚೌಳ ಹಿರಿಯೂರಿನ ಪ್ರಗತಿಪರ ಕೃಷಿಕ ಜಿ.ಅಶೋಕ್‌ಕುಮಾರ್ ಅವರಿಗೆ ಕಲ್ಕಟ್ಟೆ ಕನ್ನಡಿಗ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಎಐಟಿ ಕಾಲೇಜಿನ ಪ್ರಾಚಾರ್ಯ ಡಾ.ಸಿ.ಟಿ.ಜಯದೇವ್, ಮಲ್ಲಿಗೆ ಸುಧೀರ್ ಮಾತನಾಡಿದರು.
ಎಚ್.ಎಂ. ನಾಗರಾಜರಾವ್ ಕಲ್ಕಟ್ಟೆ ವಿರಚಿತ ಗಾಯಕ ದಿವಂಗತ ಜಿ.ವಿ.ಅತ್ರಿ ಸಂಗೀತ ಸಂಯೋಜಿಸಿರುವ ಭಕ್ತಿಗೀತೆಗಳನ್ನು ಆಧರಿಸಿ ಶಿವನಿಗೆ ಶರಣು ಸಮರ್ಪಣೆ ಮಾಡಿದ ಈ ಕಾರ್ಯಕ್ರಮದಲ್ಲಿ ನಗರದ ಶ್ರೀಕಂಠೇಶ್ವರ ಕಲಾಮಂದಿರ ಹಾಗೂ ಶೃಂಗೇರಿಯ ನಾಟ್ಯ ವೈಭವ ನೃತ್ಯ ಅಕಾಡೆಮಿಯ ಕಲಾವಿದರು ವಿದುಷಿಯರಾದ ಸುಮನಾ ರಾಮಚಂದ್ರ ಹಾಗೂ ಶೃಂಗೇರಿಯ ಸುನೀತಾ ನವೀನ್‌ಗೌಡ ನಿರ್ದೇಶನದಲ್ಲಿ ಸುಮಾರು ಎರಡು ಗಂಟೆಗಳಿಗೂ ಹೆಚ್ಚು ಕಾಲ ರಂಜಿಸಿದರು.